ಕಲಬುರಗಿ: ಕಂದಾಯ ( ಜಿಲ್ಲಾಧಿಕಾರಿ) ಇಲಾಖೆಯಲ್ಲಿ ಸೇವಾ ನಿಯಮಗಳನ್ನು ಉಲ್ಲಂಘಿಸಿ ನೀಡಲೆನ್ನಲಾದ ಮುಂಬಡ್ತಿಯನ್ನು ಹಿಂಪಡೆದಿರುವುದಕ್ಕೆ ಕೆಎಟಿ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಮೂರು ವರ್ಷದ ಹಿಂದೆ ಕರ್ನಾಟಕ ನಾಗರಿಕ ಸೇವಾ ನಿಯಮಗಳನ್ನು ಉಲ್ಲಂಘಿಸಿ 100 ಹೆಚ್ಚು ನೌಕರರನ್ನು ಮುಂಬಡ್ತಿ ನೀಡಲಾಗಿತ್ತು. ಸಿಪಾಯಿಂದ ದ್ವಿತೀಯ ದರ್ಜೆ, ದ್ವೀತಿಯ ದರ್ಜೆಯಿಂದ ಪ್ರಥಮ ದರ್ಜೆ ಹುದ್ದೆ ಹಾಗೂ ಪ್ರಥಮ ದರ್ಜೆ ಹುದ್ದೆಯಿಂದ ಗ್ರಾಮ ಆಡಳಿತ ಹುದ್ದೆಗೆ ಬಡ್ತಿ ನೀಡಲಾಗಿತ್ತು.
ಆದರೆ ಈಚೆಗೆ ಮುಂಬಡ್ತಿ ವಾಪಸ್ಸು ಪಡೆದು ಹಿಂಬಡ್ತಿಗೊಳಿಸಿ ಕಲಬುರಗಿ ಜಿಲ್ಲಾಧಿಕಾರಿ ಗಳು ಅಧಿಸೂಚನೆ ಹೊರಡಿಸಿದ್ದರು. ಜಿಲ್ಲಾಧಿಕಾರಿ ಆದೇಶ ಪ್ರಶ್ನಿಸಿ ನೌಕರರು ಕೆಎಟಿ ಮೊರೆ ಹೋಗಿದ್ದರು. ಕೆಎಟಿ ದೂರನ್ನು ಆಲಿಸಿ ಹಿಂಬಡ್ತಿಗೆ ಮಧ್ಯಂತರ ತಡೆಯಾಜ್ಞೆ ನೀಡಿ ಮುಂದಿನ ವಿಚಾರಣೆ ಇದೇ ಫೆ. 29 ಕ್ಕೆ ನಿಗದಿ ಮಾಡಲಾಗಿದೆ.
ಹಿಂಬಡ್ತಿ ಹಿನ್ನೆಲೆಯಲ್ಲಿ ಕಂದಾಯ ಇಲಾಖಾ ನೌಕರರು ಮೊದಲಿದ್ದ ಹುದ್ದೆಗೆ ತೆರಳಿದ್ದರು. ಈಗ ಹಿಂಬಡ್ತಿ ಗೆ ತಡೆಯಾಜ್ಞೆ ನೀಡಿದ್ದರ ಹಿನ್ನೆಲೆಯಲ್ಲಿ ಸೋಮವಾರ ಮೊದಲಿದ್ದ ಬಡ್ತಿ ಸ್ಥಾನದಲ್ಲಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಸೇವೆ ಮುಂದುವರೆಸಲಿದ್ದಾರೆ.
ನಿಯಮ ಮೀರಿ ಬಡ್ತಿ
100 ಕ್ಕೂ ಹೆಚ್ಚು ನೌಕರರು ಹಳೇ ಹುದ್ದೆಗೆ ಹಿಂಬಡ್ತಿ ಎಂಬುದಾಗಿ ಕಳೆದ ಫೆ. 18 ರ ಉದಯವಾಣಿಯಲ್ಲಿ ವಿಶೇಷ ವರದಿ ಪ್ರಕಟಿಸಲಾಗಿತ್ತು.