Advertisement

1856ರಲ್ಲೇ ಚಿಗುರಿತ್ತು ಏಕೀಕರಣ ಕನಸು

10:54 AM Nov 02, 2019 | Naveen |

ಕಲಬುರಗಿ: ಕನ್ನಡ ಭಾಷಿಕರನ್ನು ಒಗ್ಗೂಡಿಸುವ ಏಕೀಕರಣದ ಕನಸನ್ನು ಡೆಪ್ಯೂಟಿ ಚೆನ್ನಬಸಪ್ಪ 1858ರಲ್ಲೇ ಕಂಡಿದ್ದರು. ಇದಾದ 100 ವರ್ಷಗಳ ನಂತರ ಏಕೀಕೃತ ಮೈಸೂರು ರಾಜ್ಯ ಉದಯವಾಯಿತು. ಅಖಂಡ ಕರ್ನಾಟಕ ಹೋರಾಟದ ಇತಿಹಾಸ ಮತ್ತು ಹೋರಾಟಗಾರರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಜಿಲ್ಲಾ ಧಿಕಾರಿ ಶರತ್‌ ಬಿ. ಹೇಳಿದರು.

Advertisement

64ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಶುಕ್ರವಾರ ನಗರದ ಗಂಜ್‌ ಪ್ರದೇಶದ ನಗರೇಶ್ವರ ಶಾಲೆಯಲ್ಲಿ ರಾಜ್ಯೋತ್ಸವ ದಿನಾಚರಣೆ ನಿಮಿತ್ತ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಅಖಂಡ ಕರ್ನಾಟಕ ರಾಜ್ಯ ಸ್ಥಾಪನೆ ಹೋರಾಟದ ಬೀಜ 19ನೇ ಶತಮಾನದಲ್ಲೇ ಮೊಳಕೆ ಒಡೆಯಿತು. ಇದಕ್ಕೂ ಮೊದಲು ಮತ್ತು 1956ರವರೆಗೆ ಕರ್ನಾಟಕ ವಿವಿಧ ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿತ್ತು. ಹೈದ್ರಾಬಾದ, ಮುಂಬೈ, ಮದ್ರಾಸ್‌ ಪ್ರಾಂತ್ಯದಲ್ಲಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಆಡಳಿತಾತ್ಮಕ ಪ್ರಾತಿನಿಧ್ಯ ಲಭಿಸಿರಲಿಲ್ಲ ಎಂದರು.

ಮೈಸೂರು ಪ್ರಾಂತ್ಯದಿಂದ ಹೊರಗುಳಿದ ಕನ್ನಡಿಗರು ಹತಾಶೆಗೊಳಗಾದರು. ಇದರಿಂದ ಕನ್ನಡ ಭಾಷಿಕರು ಒಟ್ಟಾಗಬೇಕೆಂದು ಏಕೀಕರಣ ಹೋರಾಟ ನಡೆಯಿತು. ಅಸಂಖ್ಯಾತ ಹೋರಾಟಗಾರರ ಪ್ರಯತ್ನದಿಂದ 1956ರಲ್ಲಿ ಮೈಸೂರು ರಾಜ್ಯ ಸ್ಥಾಪನೆ ಆಯಿತು. ನಂತರ 1973ರಲ್ಲಿ ಅಂದಿನ ಮುಖ್ಯಮಂತ್ರಿ ದಿ. ಡಿ.ದೇವರಾಜ ಅರಸರು ಮೈಸೂರು ರಾಜ್ಯಕ್ಕೆ ವಿಶಾಲಾರ್ಥದಲ್ಲಿ “ಕರ್ನಾಟಕ’ ಎಂದು ಮರುನಾಮಕರಣ ಮಾಡಿದರು.

ಆದ್ದರಿಂದ ಅಂದು ಕರ್ನಾಟಕ ಏಕೀಕರಣಕ್ಕಾಗಿ ತೋರಿದ ಒಗ್ಗಟ್ಟನ್ನು ನಾವು ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ತೋರಬೇಕಿದೆ ಎಂದು ಹೇಳಿದರು. ಕನ್ನಡ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆ ಉಳಿಸಿ ಬೆಳೆಸುವುದರೊಂದಿಗೆ ಸದೃಢ, ಸಮೃದ್ಧ, ಸ್ವಾವಲಂಬಿ ಕರ್ನಾಟಕ ನಿರ್ಮಾಣ ಮಾಡಲು ಎಲ್ಲರೂ ಕೈಜೋಡಿಸಬೇಕೆಂದು ಕರೆ ನೀಡಿದರು.

Advertisement

ಸಂಭ್ರಮ ಇಮ್ಮಡಿ: ರಾಜ್ಯ ಸರ್ಕಾರವೇ ಸಂಪೂರ್ಣವಾಗಿ 175.57 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ವಿಮಾನ ನಿಲ್ದಾಣದಿಂದ ವಾಣಿಜ್ಯ ಹಾರಾಟಕ್ಕೆ ಅನುಮತಿ ನೀಡಿದ್ದು, ರಾಜ್ಯೋತ್ಸವದ ಸಂಭ್ರಮ ಇಮ್ಮಡಿಗೊಳಿಸಿದೆ ಎಂದು ಹೇಳಿದರು.

ಇದೇ ವೇಳೆ ಜಿಲ್ಲೆಯಲ್ಲಿ ನಗರ ಪ್ರದೇಶದಲ್ಲಿ ಬಯಲು ಶೌಚ ಮುಕ್ತ ನಗರಗಳೆಂದು ಘೋಷಣೆ ಮಾಡಿದ ಕಲಬುರಗಿ ಮಹಾನಗರ ಪಾಲಿಕೆ, ಶಹಾಬಾದ ನಗರಸಭೆ, ಚಿತ್ತಾಪುರ, ಸೇಡಂ, ಜೇವರ್ಗಿ, ವಾಡಿ ಪುರಸಭೆ ಮುಖ್ಯಸ್ಥರಿಗೆ ಪ್ರಶಂಸಾ ಪತ್ರ ವಿತರಿಸಲಾಯಿತು. ತಾಯಿ ಭುವನೇಶ್ವರಿಗೆ ಗಣ್ಯರು ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು. ವಿಧಾನ ಪರಿಷತ್‌ ಸದಸ್ಯ ತಿಪ್ಪಣಪ್ಪ ಕಮಕನೂರ, ಜಿ.ಪಂ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ, ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಸಿಇಒ
ಡಾ| ಪಿ. ರಾಜಾ, ಈಶಾನ್ಯ ವಲಯ ಐಜಿಪಿ ಮನೀಷ್‌ ಖರ್ಬೆಕರ್‌, ನಗರ ಪೊಲೀಸ್‌ ಆಯುಕ್ತ ಎಂ.ಎನ್‌. ನಾಗರಾಜ, ಎಸ್‌.ಪಿ. ವಿನಾಯಕ ಪಾಟೀಲ, ಮಹಾನಗರ ಪಾಲಿಕೆ ಆಯುಕ್ತ ರಾಹುಲ್‌ ಪಾಂಡ್ವೆ, ಕನ್ನಡ ಸಾಹಿತ್ಯ ಪರಿಷತ್‌
ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ ಹಾಗೂ ಕನ್ನಡ ಪರ ಸಂಘಟನೆಗಳ ಮುಖಂಡರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸರ್ಕಾರಿ ಅಧಿಕಾರಿ-ಸಿಬ್ಬಂದಿ, ಕನ್ನಡಾಭಿಮಾನಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next