ಕಲಬುರಗಿ: ಹಟ್ಟಿ, ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಿದ ಹಕ್ಕು ಪತ್ರಗಳನ್ನು ಪ್ರಧಾನಿ ನರೇಂದ್ರ ಮೋದಿ ಜ. 19 ರಂದು ಜಿಲ್ಲೆಯ ಸೇಡಂ ತಾಲೂಕಿನ ರಾಷ್ಟ್ರ ಕೂಟರ ನಾಡು ಮಳಖೇಡ( ಮಾನ್ಯಖೇಟ) ದಲ್ಲಿ ವಿತರಿಸಲಿದ್ದಾರೆ ಎಂದು ಕೆಕೆಆರ್ ಟಿಸಿ – ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿರುವ ಸೇಡಂ ಕ್ಷೇತ್ರದ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ತಿಳಿಸಿದರು.
ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಒಮ್ಮೇಲೆ 51900 ಜನತಿಗೆ ಹಕ್ಕು ಪತ್ರಗಳನ್ನು ವಿತರಿಸುತ್ತಿರುವುದು ಒಂದು ದಾಖಲಾಗಲಿದೆ. ಇಷ್ಟೊಂದು ಸಂಖ್ಯೆಯಲ್ಲಿ ಹಕ್ಕು ಪತ್ರ ವಿತರಿಸುತ್ತಿರುವುದು ಗಿನ್ನಿಸ್ ಆಫ್ ರೆಕಾರ್ಡ್ ದಲ್ಲಿ ಸೇರ್ಪಡೆಯಾಗಲಿದೆ ಎಂದು ವಿವರಣೆ ನೀಡಿದರು.
ಕಾರ್ಯಕ್ರಮಕ್ಕೆ 2500 ಬಸ್‌ಗಳ ಹಾಗೂ 10 ಸಾವಿರ ನಾಲ್ಕು ವಾಹನಗಳ ವ್ಯವಸ್ಥೆ ಮಾಡಲಾಗಿದ್ದು, ಒಂದು ಕುಟುಂಬದಿಂದ ಐದು ಸದಸ್ಯರಂತೆ ಭಾಗವಹಿಸುವ ಐದು ಲಕ್ಷ ಜನರಿಗೆ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಎಲ್ಲ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ, ಟೆಂಟ್ ಕಾರ್ಯವೆಲ್ಲ ಸುಮಾರು 60 ಎಕರೆ ಪ್ರದೇಶದಲ್ಲಿ ಹಗಲಿರಳು ನಡೆದಿದೆ ಎಂದು ತಿಳಿಸಿದರು.
ಪ್ರಧಾನಿಗಳ ಜತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್. ಅಶೋಕ, ತಾಂಡಾದ ಅಭಿವೃದ್ಧಿ ನಿಗಮದ ಅಧ್ಯಕ್ಷರು, ಸಂಸದ ಡಾ. ಉಮೇಶ್ ಜಾಧವ್ ಸೇರಿ ಇತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಸಂದರ್ಭದಲ್ಲಿ ಹತ್ತಾರು ಸಾವಿರ ಕೋ ರೂ ಮೊತ್ತದ ಯೋಜನೆಗಳಿಗೆ ಚಾಲನೆ ನೀಡುವರು. ಈ ಕುರಿತು ಪಟ್ಟಿ ನಡೆದಿದೆ. ಪ್ರಧಾನಿ ಅವರ ಈ ಪ್ರವಾಸ ಅಭಿವೃದ್ಧಿ ಗೆ ಚಾಲನೆ ದೊರಕಲಿದೆ ಎಂದರು.
ಮಳಖೇಡ ಐತಿಹಾಸಿಕ ರಾಷ್ಟ್ರಕೂಟರ ಕೋಟೆ ಪುನರುತ್ಥಾನದ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಅದಲ್ಲದೇ ರಾಷ್ಟ್ರ ಕೂಟ ಉತ್ಸವಕ್ಕೆ ರಾಜ್ಯ ಸರ್ಕಾರದಿಂದ ಒಂದು ಕೋಟಿ ರೂ ಬಿಡುಗಡೆಯಾಗಿದೆ. ಬರುವ ಫೆಬ್ರವರಿಯಲ್ಲಿ ಉತ್ಸವ ನೆರವೇರಿಸಲಾಗುವುದು ಎಂದು ತೇಲ್ಕೂರ ಇದೇ ಸಂದರ್ಭದಲ್ಲಿ ತಿಳಿಸಿದರು.
ಬಸವರಾಜ ಮತ್ತಿಮಡು, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ನಗರಾಧ್ಯಕ್ಷ ಸಿದ್ದಾಜಿ ಪಾಟೀಲ್, ಸಂಗಮೇಶ ವಾಲಿ ಸೇರಿದಂತೆ ಇತರ ನಾಯಕರು ಹಾಜರಿದ್ದರು.