Advertisement

Kalaburagi; ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಹೆಸರು ಖರೀದಿ: ಡಾ.ಶರಣಪ್ರಕಾಶ ಪಾಟೀಲ

03:21 PM Aug 24, 2024 | Team Udayavani |

ಕಲಬುರಗಿ: ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಹೆಸರು ಖರೀದಿಸಲು ಸರ್ಕಾರ ಮುಂದಾಗಿದ್ದು, ಜಿಲ್ಲೆಯಾದ್ಯಂತ ಸೋಮವಾರದಿಂದ ಹೆಸರು ಖರೀದಿ ಕೇಂದ್ರ ತೆರೆಯಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಖಾತೆ ಸಚಿವ ಡಾ. ಶರಣಪ್ರಕಾಶ ಪಾಟೀಲ ಹೇಳಿದರು.

Advertisement

ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕೃಷಿ ಇಲಾಖೆ ಇವುಗಳ ಸಹಯೋಗದೊಂದಿಗೆ ಸೇಡಂ ಪಟ್ಟಣದ ತಾಲೂಕಾ ಕ್ರೀಡಾಂಗಣ ಬಳಿ 2021-22ನೇ ಸಾಲಿನ ವಿಶೇಷ ಆರ್.ಐ.ಡಿ.ಎಫ್. 27ನೇ ಕಂತಿನ ಪ್ರಾಯೋಜನೆಯಡಿ 205 ಲಕ್ಷ ರೂ. ಮೊತ್ತದಲ್ಲಿ ನಿರ್ಮಿಸಲಾದ ಸಮಗ್ರ ಕೃಷಿ ಪದ್ಧತಿಯ ಉತ್ಕೃಷ್ಟ ಕೇಂದ್ರ ಕಟ್ಟಡದ ಉದ್ಘಾಟನೆ ಮತ್ತು ಸೇಡಂ ಪುರಸಭೆಯಿಂದ ಎಸ್.ಎಫ್.ಸಿ ಮತ್ತು ಮುನಿಸಿಪಾಲಿಟಿ ಅನುದಾನದಡಿ 1 ಕೋಟಿ ರೂ. ವೆಚ್ಚದಲ್ಲಿ ಸಿಬ್ಬಂದಿ ವಸತಿ ಗೃಹ ಮತ್ತು ಶಾಪಿಂಗ್ ಕಾಂಪ್ಲೆಕ್ಸ್ ಕಟ್ಟಡ ಉದ್ಘಾಟನೆ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಮಾರುಕಟ್ಟೆಯಲ್ಲಿ ಹೆಸರು ಪ್ರತಿ ಕ್ವಿಂಟಾಲ್ ಗೆ 6,500 ರೂ. ದರವಿದ್ದು, ಸರ್ಕಾರ 8,580 ರೂ. ದರದಲ್ಲಿ ಖರೀದಿಸಲಿದೆ. ಈಗಾಗಲೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದ್ದು, ಈ ಬಗ್ಗೆ ಕೂಡಲೆ ಸರ್ಕಾರಿ ಅದೇಶ ಮತ್ತು ಮಾರ್ಗಸೂಚಿ ಹೊರಬೀಳಲಿದೆ ಎಂದ ಸಚಿವರು, ಜಿಲ್ಲೆಯಾದ್ಯಂತ 186 ಖರೀದಿ ಕೇಂದ್ರ ತೆರೆಯಲಾಗುತ್ತಿದೆ ಎಂದರು.

ಉದ್ದು ಖರೀದಿಗೂ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಶೀಘ್ರವೆ ಅದು ಸಹ ಅನುಮೋದನೆ ದೊರೆಯಲಿದೆ. ಸಂಕಷ್ಟದಲ್ಲಿರುವ ರೈತರ ನೆರವಿಗೆ ನಮ್ಮ ಸರ್ಕಾರ ಸದಾ ಧಾವಿಸಲಿದೆ ಎಂದ ಅವರು, ತಾಲೂಕಿನಲ್ಲಿ ಕಳೆದ ವರ್ಷ ತೊಗರಿ ನೆಟೆ ರೋಗ ಬಾಧಿತ 18,995 ರೈತರಿಗೆ 12.01 ಕೋಟಿ ರೂ., ಬರ ಪರಿಹಾರದಲ್ಲಿ 28,820 ರೈತರಿಗೆ 29.76 ಕೋಟಿ ರೂ., ಬೆಳೆ‌ ವಿಮೆ ಯೋಜನೆಯಡಿ 26,344 ರೈತರಿಗೆ 14.21 ಕೋಟಿ ರೂ. ಪರಿಹಾರ ದೊರೆತಿದೆ ಎಂದರು.

ಸೇಡಂನಲ್ಲಿ ನರ್ಸಿಂಗ್ ಕಾಲೇಜು ಅರಂಭಕ್ಕೆ ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಪರಿಶೀಲನಾ ಹಂತದಲ್ಲಿದೆ ಎಂದು ಸುದ್ದಿಗಾರ ಪ್ರಶ್ನೆಗೆ ಸಚಿವರು ಉತ್ತರಿಸಿದರು.

Advertisement

ಯಡ್ಡಳ್ಳಿ,ಕಾಚೂರು ಏತ ನೀರಾವರಿ ಯೋಜನೆಗೆ ಅಡಿಗಲ್ಲು: 140 ಕೋಟಿ ರೂ. ಮೊತ್ತದ ಸೇಡಂ ತಾಲೂಕಿನ ಯಡ್ಡಳ್ಳಿ, ಕಾಚೂರು ಏತ ನೀರಾವರಿ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದ್ದು, ಮಳೆಗಾಲದ ನಂತರ ಇದಕ್ಕೆ ಅಡಿಗಲ್ಲು ಹಾಕಲಾಗುವುದು ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ ತಿಳಿಸಿದರು.

50 ಜನರಿಗೆ ಕೃಷಿ ಪರಿಕರ ವಿತರಣೆ: ಇದೇ ಸಂದರ್ಭದಲ್ಲಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಮತ್ತು ಸಂಸದ ರಾಧಾಕೃಷ್ಣ ದೊಡ್ಡಮನಿ ಅವರು ತಲಾ 3 ಕಲ್ಟಿವೇಟರ್ ಮತ್ತು ಡೀಸೆಲ್‌-ಪೆಟ್ರೋಲ್ ಇಂಜಿನ್, 6 ಒಕ್ಕಣಿ ಯಂತ್ರ, 1 ನೇಗಿಲು, 4 ರೋಟೋವೇಟರ್, 14 ಬಿತ್ತುವ ಕೂರಿಗೆ, ತಲಾ 2 ಎಡೆ ಕುಂಟೆ ಮತ್ತು ಸ್ಪ್ರೇಯರ್ ಹಾಗೂ 15 ತುಂತುರು ನೀರಾವರಿ ಘಟಕಗಳು ಸೇರಿದಂತೆ ಒಟ್ಟು 50 ಜನ ಫಲಾನುಭವಿಗಳಿಗೆ ಕೃಷಿ ಪರಿಕರಗಳನ್ನು ವಿತರಣೆ‌ ಮಾಡಿದರು.

ವಿಧಾನ ಪರಿಷತ್ ಶಾಸಕ ಜಗದೇವ ಗುತ್ತೇದಾರ, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ದೇವೆಂದ್ರಪ್ಪ ಮರತೂರು, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಧಂಗಾಪೂರ, ಸಹಾಯಕ ಆಯುಕ್ತ ಪ್ರಭುರೆಡ್ಡಿ, ತಹಶೀಲ್ದಾರ ಶ್ರೇಯಾಂಕಾ ಧನಶ್ರೀ, ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್, ಸೇಡಂ ವಿಭಾಗದ ಉಪ ಕೃಷಿ ನಿರ್ದೇಶಕಿ ಅನುಸುಯಾ ಎಂ. ಹೂಗಾರ, ಸೇಡಂ ಪುರಸಭೆ ಮುಖ್ಯಾಧಿಕಾರಿ ಶರಣಯ್ಯ ಸ್ವಾಮಿ ಸೇರಿದಂತೆ‌ ಅನೇಕ ಅಧಿಕಾರಿಗಳು, ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next