ಕಲಬುರಗಿ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಭರ್ಜರಿ ಸಿದ್ಧತೆ ಆರಂಭಿಸಿದೆ. ಹೀಗಾಗಿ ಜಿಲ್ಲೆಯ ಮಕ್ಕಳನ್ನು ಪರೀಕ್ಷೆಗೆ ಅಣಿಗೊಳಿಸಲು ಆನ್‌ಲೈನ್ ಕಲಿಕೆಗೆ ಒತ್ತು ಕೊಡುತ್ತಿರುವ ಅಧಿಕಾರಿಗಳು, ಕೇಬಲ್ ವಾಹಿನಿಯಲ್ಲಿ ಪುನರ್‌ಮನನ ತರಗತಿಗಳನ್ನು ಪ್ರಸಾರ ಮಾಡುವ ವಿನೂತನ ಯೋಜನೆ ರೂಪಿಸುತ್ತಿದ್ದಾರೆ.
ಪೂರ್ವ ನಿಗದಿಯಂತೆ ಮಾ.27ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಿ ಏ.9ಕ್ಕೆ ಅಂತ್ಯಗೊಳಬೇಕಿತ್ತು. ಆದರೆ, ಲಾಕ್‌ಡೌನ್‌ನಿಂದ ಪರೀಕ್ಷೆ ಮುಂದೂಡಿಕೆ ಯಾಗಿ ವಿದ್ಯಾರ್ಥಿಗಳಲ್ಲಿ ದುಗುಡ ಮನೆ ಮಾಡಿದೆ. ಮಕ್ಕಳ ಆತಂಕ ದೂರ ಮಾಡಿ, ನಿರಂತರ ಕಲಿಕೆಗೆ ಪ್ರೋತ್ಸಾಹಿಸುವ ಕಾರ್ಯವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ. ಸೋಮವಾರ ಪರೀಕ್ಷೆ ನಡೆಸಲು ಸಜ್ಜಾಗುವಂತೆ ಶಿಕ್ಷಣ ಸಚಿವ ಸುರೇಶಕುಮಾರ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದರ ಬೆನ್ನಲ್ಲೇ ಅಧಿಕಾರಿಗಳು ಮತ್ತಷ್ಟು ಅಲರ್ಟ್ ಆಗಿದ್ದಾರೆ.
ಕೇಬಲ್‌ನಲ್ಲಿ ತರಗತಿ: ಲಾಕ್‌ಡೌನ್ ಅವಧಿಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಚಂದನ ವಾಹಿನಿಯಲ್ಲಿ ಏ.28ರಿಂದ ಪುನರ್‌ಮನನ ತರಗತಿಗಳು ಆರಂಭವಾಗಿವೆ. ಪ್ರತಿದಿನ ಮಧ್ಯಾಹ್ನ 3 ಗಂಟೆಯಿಂದ 4:30ರ ವರೆಗೆ ತರಗತಿಗಳು ಪ್ರಸಾರವಾಗುತ್ತಿದ್ದು, ಎಲ್ಲ ವಿಷಯಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ಪಠ್ಯ ಬೋಧನೆ ಮಾಡುತ್ತಿದ್ದಾರೆ. ಮರುದಿನ ಬೆಳಗ್ಗೆ 6 ಗಂಟೆಗೆ ಮರು ಪ್ರಸಾರ ಆಗುತ್ತಿವೆ. ಚಂದನ ವಾಹಿನಿ ಮಾದರಿಯಲ್ಲಿ ಜಿಲ್ಲೆಯ ಕೇಬಲ್ ವಾಹಿನಿಯಲ್ಲಿ ಪುನರ್‌ಮನನ ತರಗತಿಗಳನ್ನು ಆರಂಭಿಸಲು ಚಿಂತನೆ ಇದೆ. ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳನ್ನು ಬಳಸಿಕೊಂಡು ತರಗತಿಗಳ ಸಿದ್ಧತೆ ಪಡಿಸಲಾಗುವುದು. ಚಂದನ ವಾಹಿನಿಯ ಪುನರ್ ಮನನ ತರಗತಿಗಳ ಪ್ರಸಾರವಾಗುವ ಪರ್ಯಾಯ ಸಮಯಕ್ಕೆ ಕೇಬಲ್ ವಾಹಿನಿಯಲ್ಲಿ ತರಗತಿಗಳ ಪ್ರಸಾರ ಮಾಡುವ ಯೋಜನೆ ಇದೆ. ಇದು ವಿದ್ಯಾರ್ಥಿಗಳನ್ನು ನಿರಂತರ ಕಲಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ನೋಡಿಕೊಳ್ಳಲು ಸಹಕಾರಿಯಾಗುವ ವಿಶ್ವಾಸ ಹೊಂದಲಾಗಿದೆ ಎನ್ನುತ್ತಾರೆ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಪಿ. ಬಾಡಂಗಡಿ.
ನಿರಂತರ ಸಂಪರ್ಕ: ಲಾಕ್‌ಡೌನ್‌ನಿಂದ 1ರಿಂದ 9ನೇ ತರಗತಿ ಪರೀಕ್ಷೆಗಳನ್ನೇ ಸರ್ಕಾರ ರದ್ದು ಮಾಡಿದೆ. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಜೀವನದ ಪ್ರಮುಖ ಮೆಟ್ಟಿಲಾಗಿರುವುದರಿಂದ ಪರೀಕ್ಷೆ ನಡೆಸುವುದು ಅಗತ್ಯವಾಗಿದೆ. ಹೀಗಾಗಿ ಲಾಕ್ ಡೌನ್ ಸಮಯದಲ್ಲೂ ವಿದ್ಯಾರ್ಥಿಗಳ ಮನೋಬಲ ವೃದ್ಧಿಸಲು ಶಿಕ್ಷಕರು ನಿರಂತರವಾಗಿ ಸಂಪರ್ಕದಲ್ಲಿ ಇರುವಂತೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಶಿಕ್ಷಕರಿಗೆ ತಮ್ಮ ಶಾಲೆಯ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ವಿದ್ಯಾರ್ಥಿಗಳನ್ನು ಹಂಚಿಕೆ ಮಾಡಲಾಗಿದೆ. ಶಿಕ್ಷಕರು ಮಕ್ಕಳ ಅಥವಾ ಪೋಷಕರ ದೂರವಾಣಿ ಸಂಖ್ಯೆ ಪಡೆದು ಪರೀಕ್ಷಾ ಸಿದ್ಧತೆಯಲ್ಲಿ ಇರುವಂತೆ ಪ್ರೋತ್ಸಾಹಿಸುತ್ತಿದ್ದಾರೆ.
ವಿದ್ಯಾರ್ಥಿಗಳೊಂದಿಗೆ ಪರೀಕ್ಷಾ ವಿಷಯ ಹೊರತು ಪಡಿಸಿ ಬೇರೆ ಯಾವುದೇ ವಿಷಯಗಳ ಚರ್ಚಿಸದಂತೆ ಕಟ್ಟುನಿಟ್ಟಿನ ಸೂಚನೆಯನ್ನು ಶಿಕ್ಷಕರಿಗೆ ನೀಡಲಾಗಿದೆ. ರೇಡಿಯೋ, ವಾಟ್ಸ್‌ಆ್ಯಪ್ ಗ್ರೂಪ್: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಾಗಿ ಶರಣಬಸವೇಶ್ವರ ಅಂತರ ವಾಣಿ ಸಮುದಾಯ ರೇಡಿಯೋ ಕೇಂದ್ರ 90.8ರಲ್ಲೂ ಪುನರ್‌ಮನನ ತರಗತಿಗಳು ಬೆಳಗ್ಗೆ 11 ಗಂಟೆಯಿಂದ 12:30ರ ವರೆಗೆ ಪ್ರಸಾರ ಮಾಡಲಾಗುತ್ತಿದೆ. ಜತೆಗೆ ಅದರ ಆಡಿಯೋ ಕ್ಲಿಪ್‌ಗ್ಳನ್ನು ಬಿಇಓಗಳ ವಾಟ್ಸಪ್‌ಗೆ ರವಾನಿಸಿ, ಎಲ್ಲ ವಿದ್ಯಾರ್ಥಿಗಳಿಗೆ ತಲುಪಿಸಲಾಗುತ್ತಿದೆ.
ಆಯಾ ಶಾಲೆಗಳ ವಿದ್ಯಾರ್ಥಿಗಳ ವಾಟ್ಸಪ್ ಗ್ರೂಪ್ ರಚಿಸಲಾಗಿದೆ. ಪ್ರತಿ ದಿನ ಒಂದೊಂದು ವಿಷಯದ ಬಗ್ಗೆ ರಸ ಪ್ರಶ್ನೆ ಮತ್ತು ಎರಡು ಅಂಕದ ಪ್ರಶ್ನೆ ಸಿದ್ಧಪಡಿಸಿ ವಾಟ್ಸ ಆ್ಯಪ್ ಗ್ರೂಪ್‌ನಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಅದೇ ಗ್ರೂಪ್‌ನಲ್ಲಿ ವಿದ್ಯಾರ್ಥಿಗಳಿಂದ ಶಿಕ್ಷಕರು ಉತ್ತರ ಪಡೆಯುತ್ತಿದ್ದಾರೆ. ಸರಿ-ತಪ್ಪು ಏನೇ ಇದ್ದರೂ ಅದರಲ್ಲೇ ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಲಿದ್ದಾರೆ ಎನ್ನುತ್ತಾರೆ ಎಸ್ಸೆಸ್ಸೆಲ್ಸಿ ವಿಷಯ ಪರಿವೀಕ್ಷಕ ರಮೇಶ.
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ನಿರಂತರ ಕಲಿಕೆಯಲ್ಲಿ ಇರುವಂತೆ ನೋಡಿಕೊಳ್ಳಲು ಒತ್ತು ನೀಡಲಾಗುತ್ತಿದೆ. ಚಂದನ ವಾಹಿನಿ ಮಾದರಿಯಲ್ಲಿ
ಸ್ಥಳೀಯ ಕೇಬಲ್ ವಾಹಿನಿಯಲ್ಲಿ ಪುನರ್‌ಮನನ ತರಗತಿಗಳ ಪ್ರಸಾರ ಚಿಂತನೆ ನಡೆದಿದೆ. ಶೀಘ್ರದಲ್ಲಿ ವಾಹಿನಿಯೊಂದನ್ನು ಅಂತಿಮಗೊಳಿಸಿ ತರಗತಿಗಳ ಪ್ರಸಾರದ ಸಮಯ ನಿಗದಿ ಮಾಡಲಾಗುವುದು.
ಎಸ್.ಪಿ. ಬಾಡಂಗಡಿ,
ಡಿಡಿಪಿಐ
ರಂಗಪ್ಪ ಗಧಾರ