Advertisement

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

04:04 PM Dec 22, 2024 | Team Udayavani |

ಕಲಬುರಗಿ : ಕಲ್ಯಾಣ ಕರ್ನಾಟಕದ ವಿಭಾಗೀಯ ಕೇಂದ್ರ ಕಲಬುರಗಿ ಹಾಗೂ ಸ್ವ ಜಿಲ್ಲೆ ಮೈಸೂರದಲ್ಲಿ ನಿಮ್ಹಾನ್ಸ್ ( ಮಾನಸಿಕ ರೋಗ) ಶಾಖೆ ತೆರೆಯಲು ಕ್ರಮ ಕೈಗೊಳ್ಳುವುದಾಗಿ ಸಿಎಂ ಸಿದ್ಧರಾಮಯ್ಯ ಹೇಳಿದರು.

Advertisement

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ 371 ಜೆ ಜಾರಿಯಾದ ದಶಮಾನೋತ್ಸವದ ಪ್ರಯುಕ್ತ 371 ಹಾಸಿಗೆಗಳ ಅತ್ಯುನ್ನತ ಆರೋಗ್ಯ ಸೌಕರ್ಯಗಳಿರುವ  ಜಯದೇವ ಹೃದ್ರೋಗ ಆಸ್ಪತ್ರೆಯನ್ನು ಲೋಕಾರ್ಪಣೆಗೊಳಿಸಿ  ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಅವರ ಮನವಿಗೆ ಸ್ಪಂದಿಸಿ ಈ ನಿರ್ಧಾರವನ್ನು ಪ್ರಕಟಿಸಿದರು.

ನಿಮ್ಹಾನ್ಸ್ ಶಾಖೆ ಜತೆಗೆ ಡಯಾಬಿಟಾಲಾಜಿ ಘಟಕ ಸಹ ಸ್ಥಾಪಿಸಲಾಗುವುದು ಎಂದು ಸಿಎಂ ಪ್ರಕಟಿಸಿದರು.

ಬೆಂಗಳೂರು, ಮೈಸೂರಿನಲ್ಲಿರುವ ಜಯದೇವ ಹೃದ್ರೋಗ ಆಸ್ಪತ್ರೆ ಶುಚಿತ್ವ ಮತ್ತು ನಿರ್ವಹಣೆಯಲ್ಲಿ ಉತ್ತಮ ಗುಣಮಟ್ಟ ಕಾಯ್ದುಕೊಂಡಿದೆ. ಕಲಬುರಗಿಯ ಜಯದೇವ ಇವೆರಡೂ ಆಸ್ಪತ್ರೆಗಳಿಗಿಂತ ಇನ್ನೂ ಹೆಚ್ಚಿನ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು ಎಂದು ಸೂಚಿಸಿದರು.

ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಹೃದ್ರೋಗ ಸಮಸ್ಯೆಗಳಿಗೆ ಈಗ ಬೆಂಗಳೂರಿಗೆ ಬರುವ ಅಗತ್ಯವೇ ಇಲ್ಲ. ಕಲಬುರಗಿಯಲ್ಲೇ ಜಯದೇವ ಲೋಕಾರ್ಪಣೆಗೊಳಿಸಿದ್ದೇವೆ ಎಂದರು‌.

Advertisement

ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಸಂಗತಿಗಳಿಗೆ ಸಿಎಂ ಓಕೆ ಎಂದರು.

ಪ್ರಮುಖವಾಗಿ ಕಲಬುರಗಿಯಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿ, ಈ ಬಗ್ಗೆ ಬೇಗ ತೀರ್ಮಾನ ತೆಗೆದುಕೊಳ್ಳುವಂತೆ ವೇದಿಕೆಯಲ್ಲಿದ್ದ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಅವರಿಗೆ ಸೂಚಿಸಿದರು. ಮೈಸೂರಿಗೂ ನಿಮ್ಹಾನ್ಸ್ ಘಟಕದ ಅಗತ್ಯವಿದ್ದು ಅದನ್ನು ಮರೆಯಬೇಡಿ ಎಂದರು‌.

371 ಜೆ ಜಾರಿಯಿಂದ ಈ ಭಾಗದ ಸಹಸ್ರಾರು ವಿದ್ಯಾವಂತರು ಉತ್ತಮ ಹುದ್ದೆಗಳನ್ನು ಪಡೆಯಲು ಸಾಧ್ಯವಾಗಿದೆ. ನಮ್ಮ ಸರ್ಕಾರ ಉತ್ತರ ಕರ್ನಾಟಕ ಸೇರಿದಂತೆ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ನೀಲನಕ್ಷೆ ಸಿದ್ದಪಡಿಸಿಕೊಂಡಿದ್ದೇವೆ. ಇದು ನಮ್ಮ ಸರ್ಕಾರದ ಬದ್ಧತೆ ಎಂದರು.

ಕಲ್ಯಾಣ ಕರ್ನಾಟಕದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು. ಇಲ್ಲಿನ ವಿಶ್ವ ವಿದ್ಯಾಲಯಗಳಲ್ಲಿ ನೂತನ ಹೊಸ ಕೋರ್ಸ್ ಗಳನ್ನು ಆರಂಭಿಸುವುದು ಮತ್ತು ಖಾಲಿ ಇರುವ ಹುದ್ದೆಗಳನ್ನು ತುಂಬುವ ಕೆಲಸವನ್ನೂ ಮಾಡಲಾಗುವುದು ಎಂದರು.

ತೊಗರಿ ಬೆಳೆ ಪ್ಯಾಕೇಜ್ ಬಗ್ಗೆ ಹಾನಿ ಕುರಿತಾದ ವರದಿ ಬಂದ ಕೂಡಲೇ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು   ಎಂದರು.

ಅನುಭವ ಮಂಟಪ ಪೂರ್ವಕ್ಕೆ ಹಣ:

ಈಗಾಗಲೇ ಅನುಭವ ಮಂಟಪ ನಿರ್ಮಾಣ ಅರ್ಧ ಮುಗಿದಿದೆ. ಪೂರ್ಣಗೊಳಿಸಲು ಅಗತ್ಯ ಹಣ ನೀಡಲಾಗಿದೆ. ಇನ್ನೂ ಅಗತ್ಯಬಿದ್ದರೆ ಹಣ ನೀಡಲಾಗುವುದು ಎಂದು ಇದೇ ಸಂದರ್ಭದಲ್ಲಿ ಸಿಎಂ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next