Advertisement

ಪಾಲಿಕೆ ಚುನಾವಣೆ: ಬಿಜೆಪಿಗೆ ಮತ ಹಾಕದಂತೆ ಸ್ವಪಕ್ಷದ ಉಪಾಧ್ಯಕ್ಷರಿಂದಲೇ ಮನವಿ

08:27 PM Aug 31, 2021 | Team Udayavani |

ಕಲಬುರಗಿ: ಇಲ್ಲಿನ ಮಹಾನಗರ ಪಾಲಿಕೆ ಚುನಾವಣೆಗೆ ಎರಡೇ ದಿನಗಳು ಬಾಕಿ ಉಳಿದಿವೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ವರಿಷ್ಠರು ಮತ ಸೆಳೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಆರೋಪ- ಪ್ರತ್ಯಾರೋಪ ಸುರಿಮಳೆಯಾಗುತ್ತಿದೆ. ಇದರ ನಡುವೆ ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷ ರೇ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕದೆ ಕಮಲ ಪಾಳೆಯಕ್ಕೆ ತಕ್ಕಪಾಠ ಕಲಿಸುವಂತೆ ಕರೆ ನೀಡಿರುವುದು ಸಂಚಲನ ಮೂಡಿಸಿದೆ.

Advertisement

ಯುವ ಘಟಕದ ಉಪಾಧ್ಯಕ್ಷರು ಸ್ವತ: ತಮ್ಮ ಪಕ್ಷಕ್ಕೆ ಮತ ನೀಡಬೇಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಿಕೊಂಡಿರುವ ವಿಡಿಯೋ ಈಗ ಕಲಬುರಗಿ ಮಹಾನಗರ ಪಾಲಿಕೆಯ ಚುನಾವಣೆಯ ಅಖಾಡದಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ.

ಸತತವಾಗಿ ಕಲಬುರಗಿಗೆ ಬಿಜೆಪಿ ವರಿಷ್ಠರಿಂದ ಆಗುತ್ತಿರುವ ಅನ್ಯಾಯ ಹಾಗೂ ವರಿಷ್ಠರಲ್ಲಿ ಅಧಿಕಾರದ ಮದ ನೆತ್ತಿಗೆ ಏರಿದ ಬಗ್ಗೆ ವಿವರಿಸುತ್ತಾ ಜತೆಗೆ ಕಲಬುರಗಿಯವರನ್ನು ಹುಚ್ಚರೆಂದು ತಿಳಿದುಕೊಂಡಿದ್ದರಿಂದ ಈ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಮತ ಹಾಕದೇ ನೊಟಾ ಚಲಾಯಿಸಿ ಎಂದು ಮನವಿ ಮಾಡಿರುವುದು ಎಲ್ಲೇಡೆ ಸದ್ದು ಮಾಡುತ್ತಿದೆ.‌

ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷರಾಗಿರುವ ಡಾ. ರಾಘವೇಂದ್ರ ಚಿಂಚನಸೂರ ಅವರೇ ಬಿಜೆಪಿ ನಾಯಕರಿಗೆ ಕೆಲವು ಪ್ರಶ್ನೆ ಗಳನ್ನು ಮಾಡಿ  ಬಿಜೆಪಿಗೆ ಮತ ಹಾಕುವ ಬದಲು ನೊಟಾಕ್ಕೆ ಒತ್ತಿ ಎಂದಿದ್ದಾರೆ.

  • ಕಲಬುರಗಿ ಜಿಲ್ಲೆಗೆ ಸಚಿವ ಸ್ಥಾನ ಯಾಕೆ ನೀಡಿಲ್ಲ
  • ಶೇ.20ರ ಜನವಸತಿ ಪ್ರದೇಶಕ್ಕೆ ನೀವು ನೀಡುತ್ತಿರುವ ಅನುದಾನ ಎಷ್ಟು
  • ಪಕ್ಷದ ಧ್ವಜ ಕಟ್ಟಲು, ಪ್ರಚಾರ ಮಾಡಲು, ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಲು ನಾವು ಬೇಕು. ಆದರೆ, ಅಧಿಕಾರದ ವಿಷಯ ಬಂದಾಗ ನಾವು ಬೇಡ. ಏಕೆ ಈ ತಾರತಮ್ಯ.
  • ಬಿಜೆಪಿಯಲ್ಲಿರುವ ಪ್ರಮುಖರಿಗೆ ಅಧಿಕಾರದ ಮದ ಏರಿದೆ
  • ಈ ಭಾಗದ ದೊಡ್ಡ ದೊಡ್ಡ ಅಭಿವೃದ್ಧಿ ಕಾರ್ಯ ಹಾಗೂ ಇತರ ಸಂಸ್ಥೆಗಳನ್ನು ದಕ್ಷಿಣ ಕರ್ನಾಟಕಕ್ಕೆ ವರ್ಗಾಯಿಸಲಾಗುತ್ತಿದೆ.
  • ಕಲಬುರಗಿ ಭಾಗದ ಕಾರ್ಯಕರ್ತರು ಬೆಂಗಳೂರಿಗೆ ಹೋದಾಗ ಕೋವಿಡ್ ನೆಪ ಹೇಳಿ ಪಕ್ಷದ ಕಚೇರಿಯಲ್ಲೂ ಒಳಗೆ ಬಿಡಲಿಲ್ಲ.
  • ಬಜೆಟ್ ಗಾತ್ರಕ್ಕೆ ಲೆಕ್ಕ ಹಾಕಿದರೆ ನಮ್ಮ ಭಾಗಕ್ಕೆ ದೊರೆಯುತ್ತಿರುವುದು ಕವಡೆ ಕಾಸಿನ ಮೊತ್ತದ ಸ್ವಲ್ಪ ಪ್ರಮಾಣ ಮಾತ್ರವೇ ಆಗಿದೆ.
  • ಹೀಗಾಗಿ ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡಿಬೇಡಿ ಎಂದು ಮನವಿ ಮಾಡಿದ್ದಾರೆ.

ಪಕ್ಷದ ಒಳಗಿದ್ದುಕೊಂಡೆ ಪಕ್ಷದ ವರ್ತನೆಗೆ ತೀರುಗೇಟು ನೀಡಿರುವ ಪಕ್ಷದ ಉಪಾಧ್ಯಕ್ಷ ಡಾ. ರಾಘವೇಂದ್ರ ಚಿಂಚನಸೂರ ಅವರ ನಡೆಗೆ ಸ್ವಪಕ್ಷ ಬಿಜೆಪಿ ಸೇರಿದಂತೆ ವಿರೋಧ ಪಕ್ಷವಾದ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಭೇಷ್ ಎನ್ನುತ್ತಿದ್ದಾರೆ. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಅವರು ಎತ್ತಿರುವ ಎಲ್ಲ ಪ್ರಶ್ನೆಗಳು ಮತ್ತು ಅಂಕಿ ಸಂಖ್ಯೆಗಳು ಸಮರ್ಪಕವಾಗಿವೆ ಎಂದು ಮುಕ್ತ ಪ್ರಶಂಸೆಯ ಮಾತುಗಳು ಕೇಳಿ ಬರುತ್ತಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next