Advertisement

Kalaburagi; ಅರ್ಧ ಗಂಟೆ ಭಾಷಣದಲ್ಲಿ ಖರ್ಗೆ ಹೆಸರನ್ನೇ ಉಲ್ಲೇಖಿಸದ ಮೋದಿ

05:58 PM Mar 16, 2024 | Team Udayavani |

ಕಲಬುರಗಿ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಖಾತೆ ತೆರೆಯದ ಗ್ಯಾರಂಟಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಜನತೆಯಲ್ಲಿ‌ ಮನವಿ ಮಾಡಿದರು.

Advertisement

ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ತವರು ಜಿಲ್ಲೆಯಿಂದ ಲೋಕಸಭಾ ಚುನಾವಣಾ ಪ್ರಚಾರ ಆರಂಭಿಸಿದ ಅವರು, ನಾನು ಹಲವಾರು ಗ್ಯಾರಂಟಿ ಕೊಟ್ಟಿರುವಾಗ ರಾಜ್ಯದ ಜನ ನನಗೆ ರಾಜ್ಯದಲ್ಲಿ ಲೋಕಸಭಾ ಚುನಾವಣೆಯಲ್ಲಿ ಖಾತೆ ತೆರೆಯದ ಗ್ಯಾರಂಟಿ ನೀಡಿ ಎಂದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಸಮಾಜ ಘಾತುಕ ಶಕ್ತಿಗಳ ರಕ್ಷಣೆಗೆ ನಿಂತಿದ್ದರಿಂದ ಎಲ್ಲವೂ ಹದಗೆಡುತ್ತಿದೆ.‌ ಸಣ್ಣ ಸಣ್ಣ ಕಾಮಗಾರಿ ಗಳನ್ನು ಮಾಡಲು ಸರ್ಕಾರದ ಬಳಿ ಹಣ ಇಲ್ಲ. ಎಲ್ಲ ಶಾಸಕರಿಗೆ ದುಡ್ಡಿಲ್ಲ ಎಂದು ಹೇಳಲಾಗಿದೆ. ಪರಿಸ್ಥಿತಿ ಹೀಗಿರುವಾಗ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಹೇಗೆ ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯ ಸರ್ಕಾರದ ಆರೋಪ ಪಟ್ಟಿಯನ್ನೇ ಮಾಡಿದರು.

ಯುವಕರಿಗೆ ದೊಡ್ಡದಾದ ಭರವಸೆ ನೀಡಿ ಶಿಷ್ಯ ವೇತನ ನೀಡಲಾಗುತ್ತಿಲ್ಲ.‌ ಪ್ರಮುಖವಾಗಿ ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಹೀಗಾಗಿ ಸರ್ಕಾರದ ಭೃಷ್ಟಾಚಾರ ಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ನಿಗಾ ವಹಿಸುವಂತಾಗಲು ತಮಗೆ ಬಲ ತುಂಬಬೇಕು. ‌28 ಕ್ಕೆ 28 ಸೀಟುಗಳನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

ತಮ್ಮ ಬಿಜೆಪಿ‌ ಸರ್ಕಾರವಿದ್ದಾಗ ಕೆಕೆಆರ್ ಡಿಬಿ ಗೆ ಸಾವಿರಾರು ಕೋ.ರೂ ನೀಡಲಾಗಿತ್ತು. ‌ಆದರೆ ಕಾಂಗ್ರೆಸ್ ಸರ್ಕಾರ  ಹೆಚ್ಚು ಹಣ ನಿಗದಿ ಮಾಡಲು ಇಚ್ಚಾಶಕ್ತಿ ತೋರುತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.

Advertisement

ರಣಕಹಳೆ ಮೊಳಗಿಸಿದ ಮೋದಿ
ಲೋಕಸಮರಕ್ಕೆ ಮುಹೂರ್ತ ಘೋಷಣೆಯಾಗುತ್ತಿದ್ದ ವೇಳೆಯೇ ಪ್ರಧಾನಿ ನರೇಂದ್ರ ಮೋದಿ ಶನಿವಾರ ಇಲ್ಲಿ ಬಿಜೆಪಿಯ ಮೊದಲ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡುವ ಮೂಲಕ ರಣಕಹಳೆ ಮೊಳಗಿಸಿದರು. ಕಳೆದ ಹತ್ತು ವರ್ಷಗಳಿಂದಲೂ ತಮ್ಮ ರಾಜಕೀಯ ಎದುರಾಳಿಯಾಗಿರುವ ಎಐಸಿಸಿ ಅಧ್ಯಕ್ಷ, ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ತವರಿನಿಂದಲೇ ರಾಜ್ಯದಲ್ಲಿ ಮತಬೇಟೆ ಆರಂಭಿಸಿದ ಮೋದಿ ಕಾಂಗ್ರೆಸ್ ಮತ್ತು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ವಿಶೇಷವೆಂದರೆ ಅರ್ಧ ಗಂಟೆಯ ಭಾಷಣದಲ್ಲಿ ಖರ್ಗೆಯವರನ್ನು ಟೀಕಿಸುವುದಿರಲಿ, ಅವರ ಹೆಸರನ್ನು ಕೂಡ ತೆಗೆದುಕೊಳ್ಳಲಿಲ್ಲ.

`ಅಬ್ ಕೀ ಬಾರ್ ಚಾರ್ ಸೌ ಪಾರ್’ ಎಂದು ದೃಢವಿಶ್ವಾಸದೊಂದಿಗೆ ಘೋಷಣೆ ಮೊಳಗಿಸಿ ನೆರೆದಿದ್ದ ಸಹಸ್ರಾರು ಜನರನ್ನು ಹುರಿದುಂಬಿಸಿ ಮೋಡಿ ಮಾಡಿದರು.

ನನ್ನ ಮಾತನ್ನು ಕನ್ನಡದಲ್ಲೂ ಕೇಳಿ
ಕನ್ನಡ ಭಾಷೆ ಬಗ್ಗೆ ತಾವು ಹೆಚ್ಚಿನ ಗೌರವ ಹೊಂದಿದ್ದು, ಅದಕ್ಕಾಗಿ ಕನ್ನಡಿಗರು ತಮ್ಮ ಭಾಷಣವನ್ನು ಕನ್ನಡದಲ್ಲೂ ಕೇಳುವಂತಾಗಲೆಂದು ಸಾಮಾಜಿಕ ಜಾಲತಾಣ, `ಎಕ್ಸ್’ನಲ್ಲಿ ವ್ಯವಸ್ಥೆ ಮಾಡಲಾಗಿದೆ. `ನಮೋ ಇನ್ ಕನ್ನಡ’ ಮೂಲಕ ಜನರು ತಮ್ಮನ್ನು ಸಂಪರ್ಕಿಸಬಹುದು. ಆ ಮೂಲಕ ನಿಮ್ಮ ಸೇವೆಗೆ ಹಾಜರಾಗಲು ಸಾಧ್ಯವಾಗುತ್ತದೆ. ಅಲ್ಲದೇ ನೀವು ಕೂಡ `ಮೋದಿ ನನ್ನ ಜೇಬಿನಲ್ಲಿದ್ದಾರೆ’ ಎಂದು ಹೇಳಿಕೊಳ್ಳಬಹುದೆಂದರು.

ಬಿಜೆಪಿ ನಾಯಕರ ದಂಡು
ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರ ದಂಡೇ ಪಾಲ್ಗೊಂಡಿತ್ತು. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಭಗವಂತ ಖೂಬಾ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಸಚಿವರಾದ ಮಾಲೀಕಯ್ಯ ಗುತ್ತೇದಾರ್, ನರಸಿಂಹ ನಾಯಕ್, ಸುನೀಲ ವಲ್ಯಾಪುರೆ, ಸಂಸದ, ಬಿಜೆಪಿ ಅಭ್ಯರ್ಥಿ ಡಾ. ಉಮೇಶ ಜಾಧವ್ ಸೇರಿದಂತೆ ಹಲವಾರು ಮುಖಂಡರು, ಜಿಲ್ಲೆಯ ಹಾಲಿ-ಮಾಜಿ ಶಾಸಕರು, ವಿಧಾನ ಪರಿಷತ್ ಸದಸ್ಯರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next