ಕಲಬುರಗಿ: ಜಿಲ್ಲೆಯ ಯಡ್ರಾಮಿ ವ್ಯಾಪ್ತಿಯಲ್ಲಿ ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಶಿಕ್ಷಕನಿಂದಲೇ ಅತ್ಯಾಚಾರ ಪ್ರಕರಣ ಖಂಡಿಸಿ ಬಂಜಾರ ಸಮುದಾಯ ನೇತೃತ್ವದಲ್ಲಿ ಸಕಲ ಹಿಂದೂಪರ ಸಂಘಟನೆ ವತಿಯಿಂದ ಬೃಹತ್ ಪ್ರತಿಭಟನೆ ಸೋಮವಾರ (ಡಿ.09) ನಡೆಯಿತು.
ಪ್ರತಿಭಟನೆ ವೇಳೆ ಅಲ್ಲಲ್ಲಿ ಕಲ್ಲು ತೂರಾಟದ ಘಟನೆಗಳು ನಡೆದಿವೆ. ಈ ಸಂದರ್ಭದಲ್ಲಿ ಕೆಲವು ಕಾರ್, ಬೈಕ್, ಆಟೋ ಹಾಗೂ ಅಂಗಡಿಗಳ ಮೇಲೂ ಕಲ್ಲು ತೂರಾಟ ನಡೆದಿದೆ. ಕಲ್ಲು ತೂರಾಟದಿಂದ ಕಾರ್, ಆಟೋಗಳು ಜಖಂಗೊಂಡಿದ್ದು, ಆಟೋ ಚಾಲಕನಿಗೂ ಕಲ್ಲೇಟು ಬಿದ್ದಿದೆ.
ಬಂಜಾರಾ ಸಮುದಾಯದ ಸಹಸ್ರಾರು ಜನರು ಬೃಹತ್ ಪ್ರತಿಭಟನೆ ಪಾಲ್ಗೊಂಡಿದ್ದರು. ಪ್ರತಿಭಟನೆಯಲ್ಲಿ ಜಿಲ್ಲೆಯ ವಿವಿಧ ಮಠಾಧೀಶರು, ರಾಜಕೀಯ ಮುಖಂಡರು ಹಾಗೂ ಸಹಸ್ರಾರು ಜನ ಭಾಗಿಯಾಗಿದ್ದಾರೆ.
ಮುಸ್ಲಿಂ ಸಮಾಜದ ಬಗ್ಗೆ ಅವಹೇಳನಕಾರಿ ಮಾತನಾಡಿರುವ ಮಣಿಕಂಠ ರಾಢೋಡ್ ವಿರುದ್ದ ಬ್ರಹ್ಮಪೂರ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರು ದಾಖಲು ಹಿನ್ನಲೆ ಮಣಿಕಂಠ ರಾಠೋಡ್ ಬಂಧನಕ್ಕೆ ಪೊಲೀಸರು ಮುಂದಾಗಿದ್ದಾರೆ. ತಲೆ ಮರೆಸಿಕೊಂಡಿರುವ ಮಣಿಕಂಠ ರಾಠೋಡ್ ಇಂದಿನ ಪ್ರತಿಭಟನೆಯಲ್ಲಿ ಭಾಗವಹಿಸುವ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಮಾಜಿ ಸಂಸದ ಡಾ. ಉಮೇಶ ಜಾಧವ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಹಿಂದೂಗಳ ಮೇಲೆ ದೌರ್ಜನ್ಯ ಹೆಚ್ಚುತ್ತಿವೆ. ಯಡ್ರಾಮಿ ವಿದ್ಯಾರ್ಥಿ ನಿ ಮೇಲಿನ ಅತ್ಯಾಚಾರಿಗೆ ಗಲ್ಲು ಶಿಕ್ಷೆಯಾಗಲಿ ಎಂದು ಆಗ್ರಹಿಸಿದರು.
ಆಂದೋಲಾದ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಯಡ್ರಾಮಿಯಲ್ಲದೆ ಕಲಬುರಗಿ ಜಿಲ್ಲೆಯಲ್ಲಿ ಹಿಂದೂಗಳ ಅದರಲ್ಲೂ ದಲಿತರ ಮೇಲೂ ಅತ್ಯಾಚಾರ ನಡೆದಿವೆ ಎಂದು ಉದಾಹರಣೆ ಸಮೇತ ವಿವರಣೆ ನೀಡಿದರಲ್ಲದೆ, ಎಲ್ಲದಕ್ಕೂ ಬಾಯಿ ತೆರೆಯುವ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಯಾಕೆ ಉತ್ತರ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಡ್ರಾಮಿ ಬಾಲಕಿಗೆ ಪರಿಹಾರ ಬೇಡ. ಸರ್ಕಾರಿ ನೌಕರಿ ಕೊಡಿ ಎಂದರು. ನಾಡಿನ ವಿವಿಧ ಮಠಾಧೀಶರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಜಿಲ್ಲಾಧಿಕಾರಿ ಬಂದು ಮನವಿ ಸ್ವೀಕರಿಸುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಮನವಿ ಸ್ವೀಕರಿಸದಿದ್ದರೆ ಕಲಬುರಗಿ ಬಂದ್ ಗೆ ಕರೆ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಯಿತು.