ಕಲಬುರಗಿ: ಹಿರಿಯ ಹೋರಾಟಗಾರ, ರೈತ ಮತ್ತು ಕಾರ್ಮಿಕ ಮುಖಂಡರಾದ ಕರ್ನಾಟಕ ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಮಾರುತಿ ಮಾನ್ಪಡೆ (65) ಮಂಗಳವಾರ ನಿಧನರಾಗಿದ್ದಾರೆ. ಕೋವಿಡ್ ಸೋಂಕಿಗೆ ತುತ್ತಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ.
ಸುಮಾರು ನಾಲ್ಕು ದಶಕಗಳಿಂದ ರೈತ, ಹೋರಾಟದಲ್ಲಿ ತೊಡಗಿದ್ದ ಮಾರುತಿ ಮಾನ್ಪಡೆ ಅವರು ಇದೇ ಅ.4ರಂದು ಅನಾರೋಗ್ಯದಿಂದ ನಗರದ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. 5ರಂದು ಕೋವಿಡ್ ಸೋಂಕು ದೃಢಪಟ್ಟ ನಂತರ ಸೋಲಾಪುರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಇಂದು ಬೆಳಿಗ್ಗೆ 10 ಗಂಟೆ ಕೊನೆಯುಸಿರೆಳೆದರು ಎಂದು ಆಪ್ತರು ತಿಳಿಸಿದ್ದಾರೆ.
ಪಕ್ಷದಲ್ಲೂ ಸಕ್ರಿಯರಾಗಿದ್ದ ಮಾನ್ಪಡೆ ಅವರು ರಾಜ್ಯ ಸಮಿತಿಯಲ್ಲಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಹುಟ್ಟು ಹೊರಾಟಗಾರರಾಗಿದ್ದ ಅವರು ಅಗಲಿಕೆಯಿಂದ ತುಂಬಲಾಗದ ನಷ್ಟ ಆಗಿದೆ ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಶರಣಬಸಪ್ಪ ಮಮಶೆಟ್ಟಿ ಹೇಳಿದ್ದಾರೆ.
ಮಾನ್ಪಡೆ ಅವರಿಗೆ ನ್ಯುಮೋನಿಯಾ ಸಹ ಇತ್ತು ಎಂದೂ ಹೇಳಲಾಗುತ್ತಿದ್ದು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಕಮಲಾಪುರ ತಾಲೂಕಿನ ಲೇಂಗಟಿ ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ :ಮಂಗಳೂರು: ಡ್ರಗ್ಸ್ ಜಾಗೃತಿ ಬರಹದಿಂದ ಗಮನಸೆಳೆಯುತ್ತಿದೆ ಸಿಟಿ ಬಸ್