Advertisement

35 ವರ್ಷದ ವಿರೋಧಿ ಖರ್ಗೆ ಕೈ ಹಿಡಿಯುವರೇ?

12:25 AM Mar 26, 2019 | Sriram |

ಯಾದಗಿರಿ: ಕಲಬುರಗಿ ಲೋಕಸಭೆ ಕದನ ದಿನೇದಿನೆ ಬಿಸಿಲ ಝಳದೊಂದಿಗೆ ಕಾವೇರುತ್ತಿದ್ದು, ಗುರುಮಿಠಕಲ್‌ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಜೆಡಿಎಸ್‌ ಬೆಂಬಲ ಸಿಗುವುದೇ ಎಂಬ ಚರ್ಚೆ ಜೋರಾಗಿದೆ.

Advertisement

1972ರಿಂದ 2004ರವರೆಗೆ ಸತತ ಬಾರಿ 8 ಬಾರಿ ವಿಧಾನಸಭೆಗೆ ಗುರುಮಿಠಕಲ್‌ ಕ್ಷೇತ್ರದಿಂದಲೇ ಡಾ| ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗಿದ್ದರು. ಈಗ ಜೆಡಿಎಸ್‌ ಶಾಸಕರಿದ್ದಾರೆ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಖರ್ಗೆ ತಮ್ಮ ಆಪ್ತರಾಗಿದ್ದ ಬಾಬುರಾವ್‌ ಚಿಂಚನಸೂರ ಅವರನ್ನು 2008ರಲ್ಲಿ ಗುರುಮಿಠಕಲ್‌ಗೆ ಪರಿಚಯಿಸಿದ್ದರು. ಸತತ 2 ಬಾರಿ ಚಿಂಚನಸೂರ ಕೂಡ ಆಯ್ಕೆಯಾಗಿದ್ದಾರೆ. 35 ವರ್ಷಗಳಿಂದಲೂ ಜೆಡಿಎಸ್‌ ಸಂಘಟನೆ ಮಾಡುವುದರೊಂದಿಗೆ ಖರ್ಗೆ ಅವರ ರಾಜಕೀಯ ವಿರೋಧಿ ಯಾಗಿದ್ದ ಜೆಡಿಎಸ್‌ನ ನಾಗನಗೌಡ ಕಂದಕೂರ 2018ರ ವಿಧಾನಸಭೆ ಚುನಾವಣೆಯಲ್ಲಿ ಗುರುಮಿಠಕಲ್‌ ಶಾಸಕರಾಗಿ ಆಯ್ಕೆಯಾಗಿದ್ದಾರೆ. ರಾಜಕೀಯ ವಿರೋ ಧಿಯನ್ನು ಖರ್ಗೆ ಯಾವ ರೀತಿ ಮನವೊಲಿಸುತ್ತಾರೆ ಎಂಬುದೇ ಈಗ ಯಕ್ಷಪ್ರಶ್ನೆ.

ಖರ್ಗೆ ಪರೋಕ್ಷವಾಗಿ ಬೇರೆ ವ್ಯಕ್ತಿಗಳಿಂದ ಮನವೊಲಿಸುವ ತಂತ್ರಗಾರಿಕೆ ನಡೆಸುತಿದ್ದಾರೆ ಎನ್ನುವ ಮಾತಿಗೆ ಪುಷ್ಟಿ ನೀಡುವಂತೆ ರಾಯಚೂರು-ಯಾದಗಿರಿ ಲೋಕಸಭೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಬಿ.ವಿ. ನಾಯಕ ಅವರು 2 ದಿನದ ಹಿಂದೆ ಜೆಡಿಎಸ್‌ ಶಾಸಕ ನಾಗನಗೌಡ ಕಂದಕೂರ ಅವರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ರಾಜ್ಯದಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಇದೆ. ಹಾಗಾಗಿ ಜೆಡಿಎಸ್‌ ಹೈಕಮಾಂಡ್‌ ನಿರ್ದೇಶನದಂತೆ ಗುರುಮಿಠಕಲ್‌ ಕ್ಷೇತ್ರದಲ್ಲಿ ನಿರ್ಣಯ ಕೈಗೊಳ್ಳುವ ನಿರ್ಧಾರ ಮಾಡಲಾಗುತ್ತಿದೆ. ಇವೆಲ್ಲದ್ದರ ಮಧ್ಯೆ ನಾಗನಗೌಡ ಕಂದಕೂರ ಅವರ ಮನವೊಲಿಸಲು ಖರ್ಗೆ ಜೆಡಿಎಸ್‌ ಹೈಕಮಾಂಡ್‌ ಕದ ತಟ್ಟುವ ಸಾಧ್ಯತೆಯೂ ಇದೆ.

ಬಿ.ವಿ.ನಾಯಕ ಭೇಟಿ ಸಂಚಲನ
ಗುರುಮಿಠಕಲ್‌ ಜೆಡಿಎಸ್‌ ಶಾಸಕ ನಾಗನಗೌಡ ಕಂದಕೂರ ಅವರ ಮನೆಗೆ ರಾಯಚೂರು-ಯಾದಗಿರಿ ಸಂಸದ ಬಿ.ವಿ. ನಾಯಕ ಭೇಟಿ ನೀಡಿ ಚರ್ಚಿಸಿರುವುದು ರಾಜಕೀಯ ಸಂಚಲನ ಮೂಡಿಸಿದೆ. ಕಂದಕೂರ ಅವರ ಮನವೊಲಿಸಲು ಖರ್ಗೆ ಪರ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇದಕ್ಕೂ ಮೊದಲು ಗುರುಮಿಠಕಲ್‌ನಲ್ಲಿ ನಡೆದ ಸಮಾರಂಭದಲ್ಲಿ “ಖರ್ಗೆ ಈ ಭಾಗದ ಶಕ್ತಿ. ಅವರನ್ನು ಗೆಲ್ಲಿಸಬೇಕು. ನಾವು ಗೆದ್ದರೆ 10ರಲ್ಲಿ 11 ಆಗಿ ಉಳಿಯುತ್ತೇವೆ ‘ ಎಂದು ಬಿ.ವಿ.ನಾಯಕ್‌ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

35 ವರ್ಷಗಳಿಂದ ಕ್ಷೇತ್ರದಲ್ಲಿ ಖರ್ಗೆ ಅವರ ವಿರುದ್ಧ ಹೋರಾಟ ಮಾಡುತ್ತಿದ್ದೇನೆ. ನಮಗೂ ಅವರಿಗೂ ರಾಜಕೀಯ ವಿರೋಧವಿದೆ. ನಮ್ಮನ್ನು ವೈಯಕ್ತಿವಾಗಿ ಸಂಪರ್ಕ ಮಾಡಿಲ್ಲ. ನಮ್ಮೊಂದಿಗೆ ನೇರವಾಗಿ ಮಾತನಾಡುವ ನೈತಿಕತೆಯೂ ಅವರಿಗಿಲ್ಲ. ನಮಗೂ ಸ್ವಾಭಿಮಾನ ಎನ್ನುವುದಿದೆ. ಹೈಕಮಾಂಡ್‌ನೊಂದಿಗೆ ಮಾತನಾಡಿ ಬೆಂಬಲಿಸುವಂತೆ ಹೇಳಬಹುದು ಅಥವಾ ನೇರವಾಗಿ ಮಾತನಾಡುವ ಧೈರ್ಯ ಮಾಡುತ್ತಾರೆಯೇ ಎಂಬುದನ್ನು ನೋಡಿ ಮುಂದಿನ ನಿರ್ಧಾರಕ್ಕೆ ಬರಲಾಗುವುದು.
– ನಾಗನಗೌಡ ಕಂದಕೂರ, ಜೆಡಿಎಸ್‌ ಶಾಸಕರು,

Advertisement

ಕೊಳಚೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಇರುವುದರಿಂದ ಇಲ್ಲಿ ಬೆಂಬಲಿಸದಿರುವ ಮಾತಿಲ್ಲ. ಗುರುಮಿಠಕಲ್‌ನಲ್ಲಿ ಜೆಡಿಎಸ್‌ ಶಾಸಕರು ಕಾಂಗ್ರೆಸ್‌ ಬೆಂಬಲಿಸುತ್ತಾರೆ. ಒಂದೆರಡು ದಿನದಲ್ಲಿ ಮಾತನಾಡಿ ಎಲ್ಲವನ್ನು ಬಗೆಹರಿಸಿಕೊಳ್ಳಲಾಗುವುದು.
– ಮರಿಗೌಡ ಹುಲಕಲ್‌, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಯಾದಗಿರಿ

– ಅನೀಲ ಬಸೂದೆ

Advertisement

Udayavani is now on Telegram. Click here to join our channel and stay updated with the latest news.

Next