Advertisement

ಕಲಬುರಗಿಯಲ್ಲೂತಲೆ ಎತ್ತಲಿದೆ ಕೃಷಿ ಭವನ

10:56 AM Oct 26, 2019 | Naveen |

ಕಲಬುರಗಿ: ಸರ್ವ ವರ್ಗಗಳಿಗೆ ಬೇಕಾದ ಹಾಗೂ ಜಾತಿ ಧರ್ಮ ಇಲ್ಲದ ರೈತ ವರ್ಗದ ಕೃಷಿ ಭವನ ನಿರ್ಮಾಣಕ್ಕೆ ಶಾಸಕರು ತಮ್ಮ ಅನುದಾನದಿಂದ ನೀಡಲಾಗುವ ಅನುದಾನಕ್ಕಿಂತ 10 ಲಕ್ಷ ರೂ. ಹೆಚ್ಚಿಗೆ ಅನುದಾನ ನೀಡಿ, ಕೃಷಿ ಭವನ ನಿರ್ಮಾಣಕ್ಕೆ ಸಹಾಯ, ಸಹಕಾರ ನೀಡುವುದಾಗಿ ವಿಧಾನ ಪರಿಷತ್‌ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಪ್ರಕಟಿಸಿದರು.

Advertisement

ಜಿಲ್ಲಾ ಪಂಚಾಯಿತಿ ಹಳೆ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಕೃಷಿಕ ಸಮಾಜದ ವಿಶೇಷ ಕಾರ್ಯಕಾರಿ ಸಮಿತಿ, ಕೃಷಿ ಭವನ ಕಟ್ಟಡ ನಿರ್ಮಾಣ ಮತ್ತು ಜಿಲ್ಲೆಯ ರೈತರ ಸಮಸ್ಯೆಗಳ ಚಿಂತನಾ ಸಭೆಯಲ್ಲಿ ಅವರು ಮಾತನಾಡಿದರು.

ಎಲ್ಲ ವರ್ಗ ಸಮುದಾಯಗಳ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಹತ್ತರಿಂದ ಹದಿನೈದು ಲಕ್ಷ ರೂ. ಅನುದಾನ ನೀಡುತ್ತೇವೆ. ಆದರೆ ರೈತನಿಗೆ ನಿರ್ದಿಷ್ಟ ಸಮುದಾಯವಿಲ್ಲ. ರೈತರು ಎಲ್ಲ ಸಮುದಾಯಗಳ ಸಂಕಿರ್ಣ ಆಗಿರುವುದರಿಂದ ಐತಿಹಾಸಿಕ ಎನ್ನುವಂತೆ ತಮ್ಮ ಅನುದಾನದ ಜತೆಗೆ ವೈಯಕ್ತಿಕವಾಗಿಯೂ ಅನುದಾನ ನೀಡಲಾಗುವುದು. ಜತೆಗೆ ಇದಕ್ಕೆ ಸಂಬಂಧಿಸಿದಂತೆ ಎಲ್ಲಿ ಕರೆದರೂ ಬರುತ್ತೇನೆ ಎಂದು ಭರವಸೆ ನೀಡಿದರು.

ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ ಧಂಗಾಪುರ ಭೂಗಳ್ಳರ ಬೆದರಿಕೆ, ಒತ್ತಾಯದ ನಡುವೆ ಜಿಲ್ಲಾ ನ್ಯಾಯಾಲಯದ ಹತ್ತಿರ ಬಹುಕೋಟಿ ಮೌಲ್ಯದ ಕೃಷಿಕ ಸಮಾಜದ ಜಮೀನನ್ನು ಉಳಿಸಿಕೊಂಡು ಬಂದಿದ್ದಾರೆ. ಹೀಗಾಗಿ ರಾಜ್ಯಕ್ಕೆ ಮಾದರಿ ಎನ್ನುವಂತೆ ಕೃಷಿ ಭವನ ನಿರ್ಮಾಣವಾಗುವುದು ಅಗತ್ಯವಾಗಿದೆ ಎಂದು ಹೇಳಿದರು.

ಕೃಷಿಕ ಸಮಾಜದ ರಾಜ್ಯ ಕಾರ್ಯಕಾರಿಣಿ ಸದಸ್ಯ, ರೈತರ ಮುಖಂಡ ಕೇದಾರಲಿಂಗಯ್ಯ ಹಿರೇಮಠ ಮಾತನಾಡಿ, ಕೃಷಿ ಸಮಾಜದ ಇಂತಹ ಕೃಷಿಕ ಭವನಗಳಿಗೆ ಅನುದಾನ ನೀಡಲು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಿಂದೆ ಬೀಳುವುದಿಲ್ಲ. ಹೀಗಾಗಿ ಬಿಜೆಪಿ ಮುಖಂಡರೊಂದಿಗೆ ನಿಯೋಗ ಹೋಗಿ ಬಂದಲ್ಲಿ ಸರ್ಕಾರದಿಂದ ಸೂಕ್ತ ಅನುದಾನ ದೊರಕಲು ಸಾಧ್ಯವಾಗುತ್ತದೆ ಎಂದರು.

Advertisement

ಖ್ಯಾತ ವಾಸ್ತುಶಿಲ್ಪಿ ಬಸವರಾಜ ಖಂಡೇರಾವ್‌ ಮಾತನಾಡಿ, ಜಿಲ್ಲಾ ನ್ಯಾಯಾಲಯ ಬಳಿ ಇರುವ 33 ಗುಂಟೆ ಜಾಗದಲ್ಲಿ ರಾಜ್ಯದಲ್ಲಿಯೇ ಮಾದರಿ ಎನ್ನಬಹುದಾದ ಬಹುಮಡಿ ಕೃಷಿ ಭವನ ನಿರ್ಮಾಣಕ್ಕೆ 15 ಕೋಟಿ ರೂ. ತಗುಲಬಹುದೆಂದು ಅಂದಾಜಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ ಧಂಗಾಪುರ ಅಧ್ಯಕ್ಷತೆ ವಹಿಸಿ, ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಉತ್ತಮ ಕೃಷಿ ಭವನ ಇವೆ. ಕಲಬುರಗಿಯಲ್ಲೂ ಕೃಷಿ ನಿರ್ಮಾಣ ತಮ್ಮ ಕನಸಿನ ಕೂಸಾಗಿದೆ. ಈ ಜಾಗದ ಮೇಲೆ ಭೂಗಳ್ಳರ ಕಣ್ಣು ಬಿದ್ದಿತ್ತು. ತಮಗೆ ಬೆದರಿಕೆ ಕರೆಗಳು ಬಂದವು. ಇನ್ನೂ ಕೆಲವೊಮ್ಮೆ ಹಣದ ಆಮಿಷವನ್ನು ಒಡ್ಡಲಾಗಿತ್ತು. ಆದರೆ ಯಾವುದಕ್ಕೂ ಬಗ್ಗದ ಪರಿಣಾಮ ಭವನ ನಿರ್ಮಾಣಕ್ಕೆ ಬಂದು ನಿಂತಿದೆ. ಖ್ಯಾತ ವಾಸ್ತುಶಿಲ್ಪಿ ಬಸವರಾಜ ಖಂಡೇರಾವ್‌ ಯಾವುದೇ ಶುಲ್ಕ ಪಡೆಯದೇ ಉಚಿತವಾಗಿ ನೀಲನಕ್ಷೆ ರೂಪಿಸಿ ಕೊಟ್ಟಿದ್ದಾರೆ. ಅಲ್ಲದೇ ಪಾಲಿಕೆಯಿಂದ ಕಟ್ಟಡ ಅನುಮತಿಗೂ ಶ್ರಮಿಸಿದ್ದಾರೆ ಎಂದು ಹೇಳಿದರು.

ಜಂಟಿ ಕೃಷಿ ನಿರ್ದೇಶಕ ರಿತೇಂದ್ರನಾತ ಸುಗೂರ ಮಾತನಾಡಿ, ಕೃಷಿ ಭವನ ನಿರ್ಮಾಣಕ್ಕಾಗಿ ಇಲಾಖೆ ಬಳಿ 50 ಲಕ್ಷ ರೂ. ಇದೆ. ಕಟ್ಟಡ ನಿರ್ಮಾಣ ಕಾರ್ಯ ಶುರುವಾದಲ್ಲಿ ಬ್ಯಾಂಕ್‌ನಲ್ಲಿ ಇಡಲಾದ ಠೇವಣಿ ಮರಳಿ ಪಡೆಯಬಹುದಾಗಿದೆ ಎಂದರು.

ಜಿ.ಪಂ ಕೃಷಿ ಹಾಗೂ ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಮಾಜಿ ಶಾಸಕ ನಾಗರೆಡ್ಡಿ ಪಾಟೀಲ, ಬಸವರಾಜ ಪಾಟೀಲ ಉಡಗಿ, ಚಂದ್ರಶೇಖರ ಪರಸರೆಡ್ಡಿ, ಶರಣಪ್ಪ ತಳವಾರ, ಶಿವಶರಣಪ್ಪ ನಿಗ್ಗುಡಗಿ, ಶಿವಶರಣಪ್ಪ ತಳ್ಳಳ್ಳಿ, ಶಿವಕುಮಾರ ಘಂಟಿ, ಚಿತ್ರಶೇಖರ ತಾಡತೆಗನೂರ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next