ಕಲಬುರಗಿ: ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಮೇಲ್ವಿಚಾರಣಾ ಸಮಿತಿ (ದಿಶಾ) ಸಭೆ ಕಳೆದ ಎರಡು ವರ್ಷಗಳಿಂದ ನಡೆಯದೆ ಇರುವುದಕ್ಕೆ ಸಂಸದ ಡಾ. ಉಮೇಶ ಜಾಧವ್ ಆಕ್ರೋಶ ವ್ಯಕ್ತಪಡಿಸಿದರು.
ಎರಡು ವರ್ಷಗಳಿಂದ ನಡೆಯದ ದಿಶಾ ಸಭೆ ಕೊನೆಗೆ ಅಕ್ಟೋಬರ್ 27 ರಂದು ನಿಗದಿಯಾಗಿ ತದನಂತರ ದಿಢೀರನೆ ಮುಂದೂಡಲ್ಪಟ್ಟಿರುವುದು ನಿಜಕ್ಕೂ ಹಳಿ ತಪ್ಪಿದ ಅಭಿವೃದ್ಧಿ ಕಾರ್ಯಗಳು ಮತ್ತಷ್ಟು ಪಾತಾಳಕ್ಕೆ ತಳ್ಳುವಂತಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಟೀಕಿಸಿದರು.
ದಿಶಾ ಸಭೆಗೆ ಸಂಸದರೇ ಅಧ್ಯಕ್ಷರು. ಆದರೆ ನಿಯಮವಾಳಿ ಪ್ರಕಾರ ಕಲಬುರಗಿಯಲ್ಲಿ ಎಐಸಿಸಿ ಅಧ್ಯಕ್ಷರು ಹಾಗೂ ರಾಜ್ಯಸಭೆ ವಿರೋಧ ಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರೇ ದಿಶಾ ಸಮಿತಿ ಸಭೆ ಅಧ್ಯಕ್ಷರಾಗಿದ್ದಾರೆ. ಆದರೆ ಕಳೆದೆರಡು ವರ್ಷದಿಂದ ಸಭೆ ನಡೆಸುತ್ತಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಕೇಂದ್ರ ಪುರಸ್ಕೃತ ಯೋಜನೆ ಹಾಗೂ ಕಾಮಗಾರಿಗಳು ಯಾವ ಹಂತದಲ್ಲಿವೆ ಹಾಗೂ ಕಾಮಗಾರಿ ಪೂರ್ಣಗೊಳ್ಳುವಲ್ಲಿ ಕೇಂದ್ರದ ಪಾತ್ರ ಏನೆಂಬುದನ್ನು ಅರಿಯಲು ದಿಶಾ ಸಭೆಯೇ ಸೂಕ್ತ ಪರಿಹಾರವಾಗಿದೆ. ಪ್ರಮುಖವಾಗಿ ದಿಶಾ ಸಭೆ ಕರೆದಲ್ಲಿ ಎಲ್ಲ ಅಧಿಕಾರಿಗಳು ಬರುತ್ತಾರೆ. ದಿಶಾ ಸಭೆಗೆ ಎಲ್ಲ ಇಲಾಖೆಗಳು ಬರುತ್ತವೆ. ಆದರೆ ಸಭೆ ನಡೆಸಲು ದೊಡ್ಡ ನಾಯಕರಿಗೆ ಪುರುಸೊತ್ತು ಸಿಕ್ತಾ ಇಲ್ಲ. ಹೀಗಾಗಿ ಅಭಿವೃದ್ಧಿ ಎಂಬುದು ಹಳಿ ತಪ್ಪುತ್ತಿದೆ. ಅಧಿಕಾರಿಗಳಿಗೆ ಹೆದರಿಕೆ ಇಲ್ಲ ಎನ್ನುವಂತಾಗಿದೆ. ಜನ ಸಾಮಾನ್ಯರು ತಮ್ಮೆದುರು ಅಳಲು ತೋಡಿಕೊಳ್ಳುತ್ತಾರೆ. ಈ ಬಗ್ಗೆ ಸಭೆಯಲ್ಲಿ ಧ್ವನಿ ಎತ್ತಬೇಕೆಂದರೆ ದಿಶಾ ಸಭೆಯೇ ಕರೆಯುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ವಿದ್ಯುತ್ ಸಮಸ್ಯೆ, ರಸ್ತೆ ಗಳ ನಿರ್ಮಾಣ ವಾಸ್ತವಿಕತೆ, ಹದಗೆಟ್ಟ ಕಾನೂನು ವ್ಯವಸ್ಥೆ, ಹೆಚ್ಚಳಗೊಂಡ ಅನೈತಿಕ ಚಟುವಟಿಕೆಗಳ ಕುರಿತಾಗಿ ಜಿಲ್ಲಾ ಉಸ್ತುವಾರಿ ಅಧ್ಯಕ್ಷತೆಯ ಕೆಡಿಪಿ ಸಭೆ ಸಹ ನಡೆಸುತ್ತಿಲ್ಲ. ಈ ಬಗ್ಗೆ ಚರ್ಚಿಸಲು ಕೆಡಿಪಿ ಸಭೆ ಕರೆಯುವಂತೆ ತಾವು ಆಗ್ರಹಿಸಿದರೆ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಸಲಹೆ ನೀಡಿ ಒತ್ತಾಯಿಸಿದರೆ, ಕೆಡಿಒ ಸಭೆ ನಡೆಸದಿದ್ದಕ್ಕೆ ಬಿಜೆಪಿಯವರು ಸಭೆ ನಡೆಯುವಂತಾಗಲು ಬೇಕಿದ್ದರೆ ಕೋರ್ಟ್ ಗೆ ಹೋಗಿ ಎಂದು ವ್ಯಂಗ್ಯವಾಡಿರುವುದು ಶೋಭೆ ತರುವಂತದ್ದಲ್ಲ ಡಾ. ಜಾಧವ್ ಟೀಕಿಸಿದರು.
ಪಶ್ಚಿಮ ಬಂಗಾಳವಾದ ಕಲಬುರಗಿ: ಪಶ್ಚಿಮ ಬಂಗಾಳದಲ್ಲಿ ಕೇಂದ್ರ ಸರ್ಕಾರದ ಪುರಸ್ಕೃತ ಕಾಮಗಾರಿಗಳ ಪರಿಶೀಲನೆ ಮಾಡುವ ದಿಶಾ ಸಭೆಯು ಪಶ್ಚಿಮ ಬಂಗಾಳ ರಾಜ್ಯದಲ್ಲಿ ನಡೆಯುವುದೇ ಇಲ್ಲ. ಅದೇ ತರಹ ಕಲಬುರಗಿಯಾಗಿದೆ ಎಂದು ಸಂಸದ ಡಾ. ಜಾಧವ್ ವಾಗ್ದಾಳಿ ನಡೆಸಿದರು.
ದೂರು: ದಿಶಾ ಸಮಿತಿ ಸಭೆ ಮೂರು ತಿಂಗಳಿಗೊಮ್ಮೆ ನಡೆಯಬೇಕು. ಸಭೆಗೆ 15 ದಿನ ಮೊದಲೇ ಜಿಲ್ಲಾ ಪಂಚಾಯತ್ ಸಿಇಒ ಅವರು ನೋಟಿಸ್ ನೀಡಬೇಕು. ಈಗಲಾದರೂ ಶೀಘ್ರ ಸಭೆ ನಡೆಸುವಂತೆ ಸಿಇಒ ಅವರ ಗಮನಕ್ಕೆ ತರಲಾಗಿದೆ. ಆದರೂ ನಿಗದಿತವಾಗಿ ಸಭೆ ನಡೆಯದಿರುವ ಕುರಿತಾಗಿ ಸಂಬಂಧಪಟ್ಟವರಿಗೆ ದೂರಶಿಕ್ಷಣ ಸಲ್ಲಿಸುವುದಾಗಿ ಡಾ. ಜಾಧವ್ ಇದೇ ಸಂದರ್ಭದಲ್ಲಿ ತಿಳಿಸಿದರು.
ಸಚಿವ ಪ್ರಿಯಾಂಕ್ ಖರ್ಗೆ ಯಾವುದನ್ನು ಟೀಕಿಸುತ್ತಾರೆಯೋ ಅದಕ್ಕಷ್ಟೇ ಉತ್ತರ ನೀಡಿದ್ದೇನೆ. ಬಾಲ್ ಹಾಕಿದ್ದಕ್ಕೆ ಬ್ಯಾಟ್ ದಿಂದ ಉತ್ತರ ನೀಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ತಮ್ಮನ್ನು ಗೌರವದಿಂದ ಮಾತನಾಡುತ್ತಾರೆ. ಇವರು ಹೇಗೆ ಮಾತನಾಡುತ್ತಾರೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಭೀಕರ ಬರಗಾಲ ಪರಿಸ್ಥಿತಿ ನಿರ್ಮಾಣವಾಗಿ ಜನ ಗೂಳೆ ಹೋಗುತ್ತಿದ್ದಾರೆ. ತೊಗರಿ ಸಂಪೂರ್ಣ ನಾಶವಾಗಿದೆ. ಅಭಿವೃದ್ಧಿ ಕುಂಠಿತವಾಗಿವೆ. ಹೀಗಾಗಿ ಕಲಬುರಗಿಯಲ್ಲೇ ಠಿಕಾಣಿ ಹೂಡಿ ಸ್ಪಂದಿಸಬೇಕು. ಅದನ್ನು ಬಿಟ್ಟು ಬೆಳಿಗ್ಗೆ ವಿಮಾನ ಮೂಲಕ ಬಂದು ಸಂಜೆ ಹೋದರೆ ಹೇಗೆ? ಜನ ಇದನ್ನೆಲ್ಲಾ ಮತ್ತೆ ಅರಿಯುತ್ತಿದ್ದಾರೆ ಎಂದರು.