ಕಲಬುರಗಿ: ಜೀವ ಸಂಕುಲಕ್ಕೆ ಮಣ್ಣೇ ಆಧಾರ. ಈ ಮಣ್ಣಿಗಾಗಿ ನಾವೀಗ ಬೇರೆ-ಬೇರೆ ಗ್ರಹಗಳಿಗೆ ಹೊರಟಿದ್ದೇವೆ. ನಮ್ಮಲ್ಲಿನ ಮಣ್ಣನ್ನು ಸುರಕ್ಷಿತ ಮತ್ತು ಆರೋಗ್ಯವಾಗಿ ಇಟ್ಟುಕೊಳ್ಳಲು ಒಕ್ಕಲುತನದಿಂದ ಮಾತ್ರ ಸಾಧ್ಯ. ಹೀಗಾಗಿ ಕೃಷಿಯನ್ನು ವ್ಯವಹಾರಿಕ, ಲಾಭದಾಯಕವಾಗಿ ಮಾಡಲು ವಿಜ್ಞಾನಾಧಾರಿತ ಕೃಷಿಗೆ ಪ್ರೋತ್ಸಾಹಿಸುವುದು ಅತ್ಯಗತ್ಯವಾಗಿದೆ ಎಂದು ವಿಶ್ರಾಂತ ಕುಲಪತಿ, ಕೃಷಿ ತಜ್ಞ ಡಾ| ಎಸ್.ಎ. ಪಾಟೀಲ ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಆಯೋಜಿಸಿದ್ದ 12ನೇ ಅಖೀಲ ಕರ್ನಾಟಕ ಕನ್ನಡ ವಿಜ್ಞಾನ ಸಮ್ಮೇಳನದಲ್ಲಿ ರವಿವಾರ “ಪ್ರಸ್ತುತ ಸನ್ನಿವೇಶದಲ್ಲಿ ಕೃಷಿ’ ಕುರಿತು ನಡೆದ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಅಮೆರಿಕಾದಂತ ರಾಷ್ಟ್ರಗಳು ಮುಂದುವರಿಯಲು ಸಂಶೋಧನೆಗಳೇ ಕಾರಣ. ಕೃಷಿ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿ ಹೊಸ-ಹೊಸ ಸಂಶೋಧನೆಗಳು ನಡೆಯುತ್ತಲೇ ಇವೆ. ನಮ್ಮಲ್ಲೂ ಸಂಶೋಧನೆಗಳು ನಡೆಯುತ್ತಿವೆ. ಆದರೆ, ಕೃಷಿ ಸಂಬಂಧಿ ಸಿದ ಸಂಶೋಧನೆ ಮಾಡುವಲ್ಲಿ ನಾವು ವಿಫಲರಾಗಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು. ಜಗತ್ತಿನಲ್ಲೇ ಭಾರತದಂತ ವೈವಿಧ್ಯಮಯ ಭೂಮಿ ಸಂಪತ್ತು ಎಲ್ಲೂ ಸಿಗುವುದಿಲ್ಲ. ಹೊಸ ಬೆಳೆ, ತಳಿ ಶೋಧನೆಯಲ್ಲಿ ಬೇರೆ ರಾಷ್ಟ್ರಗಳಿಂತ ಮುಂದೆ ಇದ್ದೇವೆ. ಆದರೆ, ರೈತರಿಗೆ ಆದಾಯ ತರುವಂತ ಹಾಗೂ ಬಹು ವಿಧದ ಕೃಷಿ ಬಗ್ಗೆ ವೈಜ್ಞಾನಿಕ ಸಂಶೋಧನೆಗಳು ನಡೆದಿಲ್ಲ. ಇದರಿಂದ ಕೃಷಿ ಎಂದರೆ ದಡ್ಡರಿಗೆ ಮಾತ್ರ. ಕೃಷಿ ಮಾಡುವವರು ದಡ್ಡರು ಎನ್ನುವಂತಾಗಿದೆ. ಮಣ್ಣಿನಿಂದಲೇ ನಮ್ಮ ಆಚಾರಗಳು ಬೆಳೆದಿದ್ದು, ದೇಶ ಉಳಿದಿದ್ದು ಎನ್ನುವುದನ್ನು ಯಾರು ಮರೆಯುವಂತಿಲ್ಲ. ದೇಶ ಉಳಿಯಬೇಕಾದರೆ ಮಣ್ಣು, ಕೃಷಿ ಉಳಿಯಬೇಕೆಂದು ಪ್ರತಿಪಾದಿಸಿದರು.
ದೇಶಾದ್ಯಾಂತ 75 ಕೃಷಿ ವಿಶ್ವವಿದ್ಯಾಲಯಗಳು ಇವೆ. ಒಂದು ಸಾವಿರ ಜನ ಮಣ್ಣಿನ ವಿಜ್ಞಾನಿಗಳು ಇದ್ದಾರೆ. 50 ಸಾವಿರ ವಿದ್ಯಾರ್ಥಿಗಳು ಮಣ್ಣಿನ ಸಂಶೋಧನೆಯಲ್ಲಿ ತೊಡಗಿದ್ದಾರೆ. ವೈಜ್ಞಾನಿಕ ಸಂಶೋಧನೆಗಳು ಆಗುತ್ತಿಲ್ಲ. ಕೃಷಿ ಉಳಿಯಬೇಕಾದರೆ ಮೆಡಿಕಲ್, ಎಂಜಿನಿಯರಿಂಗ್ ಕ್ಷೇತ್ರದ ರೀತಿಯಲ್ಲಿ ಕೃಷಿಯಲ್ಲೂ ಹೊಸ ಶೋಧನೆಗಳಾಗಬೇಕು. ವಿದ್ಯಾರ್ಥಿಗಳು ಕೃಷಿ ಪದವಿಗಳತ್ತ ಹೆಚ್ಚೆಚ್ಚು ಮುಖ ಮಾಡಬೇಕು ಎಂದರು.
ಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ವಿವಿಯ ಸೂಕ್ಷ್ಮ ಜೀವಶಾಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ| ಕೆ.ನಿಂಗಪ್ಪ ಮಾತನಾಡಿದರು. ಶಿವರಾಜ ಶೀಲವಂತ, ಅನುಪಮಾ, ಶಿವರಾಜ ಪಾಟೀಲ, ಮಹೇಶಕುಮಾರ ದೇವಣಿ ಇದ್ದರು.