Advertisement

20 ಸಾವಿರ ಪ್ರತಿನಿಧಿಗಳ ನೋಂದಣಿ

12:41 PM Jan 23, 2020 | Naveen |

ಕಲಬುರಗಿ: ಮುಂದಿನ ತಿಂಗಳು ಫೆಬ್ರುವರಿ 5ರಿಂದ ಇಲ್ಲಿ ನಡೆಯುವ ಅಖೀಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 20 ಸಾವಿರ ಪ್ರತಿನಿಧಿಗಳ ನೋಂದಣಿ ಅಂತಿಮವಾಗಿದೆ. ಸಮ್ಮೇಳನ ಯಶಸ್ವಿಯಲ್ಲಿ ಪ್ರಮುಖ ಪಾತ್ರ ವಹಿಸುವ ಸಮ್ಮೇಳನ ನೋಂದಣಿ ಸಂಖ್ಯೆ 20284ಕ್ಕೆ ಅಂತಿಮಗೊಂಡಿರುವುದು ಹಿಂದಿನ ಸಮ್ಮೇಳನದ ಸಂಖ್ಯೆಯನ್ನು ಹಿಂದಿಕ್ಕಿದೆ. ಇದರಲ್ಲಿ 13561 ಪುರುಷರು ಹೆಸರು ನೋಂದಾಯಿಸಿದ್ದರೆ 5291 ಮಹಿಳೆಯರು ನೋಂದಣಿ ಮಾಡಿದ್ದಾರೆ.

Advertisement

ಸಮ್ಮೇಳನದ ಪ್ರತಿನಿಧಿ ನೋಂದಣಿ ಕೊನೆ ದಿನಾಂಕ ಕಳೆದ ಜ. 14 ಆಗಿತ್ತು. ಈಗ ರಾಜ್ಯದ ಎಲ್ಲ ಜಿಲ್ಲೆಗಳ ನೋಂದಣಿಯು ರಸೀದಿ ಪುಸ್ತಕಗೊಂದಿಗೆ ವಾಪಸ್ಸು ಬಂದ ನಿಖರ ನೋಂದಣಿ ಸಂಖ್ಯೆ ಹೊರ ಬಂದಿದೆ. 250 ರೂ. ನೀಡಿ ಜನರು ಸಮ್ಮೇಳನಕ್ಕೆ ತಮ್ಮ ಪ್ರತಿನಿಧಿಯಾಗಿ ಹೆಸರು ನೋಂದಾಯಿಸಿಕೊಂಡಿದ್ದಾರೆ.

ರಾಯಚೂರಲ್ಲಿ ನಡೆದ ಅಖೀಲ ಭಾರತ 82ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 12400, ಮೈಸೂರಲ್ಲಿ ನಡೆದ 83ನೇ ಸಮ್ಮೇಳನದಲ್ಲಿ 13000 ಹಾಗೂ ಧಾರವಾಡದಲ್ಲಿ 13500 ಪ್ರತಿನಿಧಿಗಳ ನೋಂದಣಿಯಾಗಿತ್ತು. ಈಗ ಕಲಬುರಗಿಯಲ್ಲಿ ಹಿಂದಿನ ದಾಖಲೆಗಳನ್ನು ಮುರಿದು 20 ಸಾವಿರ ಪ್ರತಿನಿಧಿಗಳ ನೋಂದಣಿಯಾಗಿದೆ.

ಅತಿ ಹೆಚ್ಚಿನ ಪ್ರತಿನಿಧಿಗಳ ನೋಂದಣಿ ಕಲಬುರಗಿ ಜಿಲ್ಲೆಯಲ್ಲಿ ಆಗಿದ್ದು, ಜಿಲ್ಲೆಯಲ್ಲಿ 2494 ಪ್ರತಿನಿಧಿಗಳ ನೋಂದಣಿಯಾಗಿದೆ. ಬೆಂಗಳೂರು ಕೇಂದ್ರ ಸಾಹಿತ್ಯ ಪರಿಷತ್ತಿನಲ್ಲಿ 1432 ನೋಂದಣಿಯಾಗಿದ್ದರೆ ಕಲಬುರಗಿ ಕಸಾಪದಲ್ಲಿ ತೆರೆಯಲಾಗಿದ್ದ ನೋಂದಣಿ ಕಾರ್ಯಾಲಯದಲ್ಲಿ 1794 ಜನರು ಸಮ್ಮೇಳನದ ಪ್ರತಿನಿಧಿಗಳಾಗಿ ನೋಂದಾಯಿಸಿದ್ದಾರೆ.

ಮಂಗಳೂರಿನಿಂದ ಒಬ್ಬರೂ ನೋಂದಣಿ ಇಲ್ಲ: ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇಯಾದ ಹೆಸರು ಮಾಡಿರುವ ಮಂಗಳೂರು (ದಕ್ಷಿಣ ಕನ್ನಡ ಜಿಲ್ಲೆ)ನಲ್ಲಿ ಒಬ್ಬರೂ ಕಲಬುರಗಿಯಲ್ಲಿನ ಸಾಹಿತ್ಯ ಸಮ್ಮೇಳನಕ್ಕೆ ಪ್ರತಿನಿಧಿಯಾಗಿ ತಮ್ಮ ಹೆಸರು ನೋಂದಣಿ ಮಾಡಿಸಿಲ್ಲ. ಅದೇ ರೀತಿ ಕರಾವಳಿ ಭಾಗದ ಇನ್ನೊಂದು ಜಿಲ್ಲೆಯಾದ ಉತ್ತರ ಕನ್ನಡ ಜಿಲ್ಲೆಯಲ್ಲಿ 15 ಜನ ಮಾತ್ರ ಹೆಸರು ನೋಂದಾಯಿಸಿದ್ದಾರೆ.

Advertisement

ಮೈಸೂರು ಜಿಲ್ಲೆಯಲ್ಲಿ 1174 ಸಾಹಿತಿಗಳು-ಸಾಹಿತ್ಯಾಸಕ್ತರು ಸಮ್ಮೇಳನದ ತಿನಿಧಿಯಾಗಿ ನೋಂದಣಿ ಮಾಡಿದ್ದರೆ ಸಾಹಿತ್ಯದ ಸಮ್ಮೇಳನದ ಪಕ್ಕದ ಜಿಲ್ಲೆ ಬೀದರ್‌ದಲ್ಲಿ 400 ಮಾತ್ರ ನೋಂದಣಿ ಮಾಡಿಸಿದ್ದಾರೆ. ಉಳಿದಂತೆ ರಾಯಚೂರಲ್ಲಿ 1400, ಯಾದಗಿರಿ ಜಿಲ್ಲೆಯಲ್ಲಿ 980, ಬೆಂಗಳೂರು ಗ್ರಾಮಾಂತರದ ಜಿಲ್ಲೆಯಲ್ಲಿ
200, ರಾಮನಗರ ಜಿಲ್ಲೆಯಲ್ಲಿ 500, ಕೋಲಾರ 100, ಚಿತ್ರದುರ್ಗ 600, ಚಿಕ್ಕಬಳ್ಳಾಪುರ 371, ತುಮಕೂರು 1500, ದಾವಣಗೆರೆ 600, ಶಿವಮೊಗ್ಗ 540, ಗದಗ 688, ಕೊಪ್ಪಳ 834, ಬಳ್ಳಾರಿ 700, ಮೈಸೂರು 1174, ಚಾಮರಾಜ ನಗರ 460, ಮಂಡ್ಯ 800, ಹಾಸನ 800, ಕೊಡಗು 55, ಚಿಕ್ಕಮಗಳೂರು 500, ಉಡುಪಿ 55, ಬೆಳಗಾವಿ 200, ವಿಜಯಪುರ 700, ಬಾಗಲಕೋಟೆ 886, ಹುಬ್ಬಳ್ಳಿ 500, ಹಾವೇರಿ ಜಿಲ್ಲೆಯಲ್ಲಿ 800 ಜನರು ಸಮ್ಮೇಳನದ ಪ್ರತಿನಿಧಿಯಾಗಿ ಹೆಸರು ನೋಂದಣಿ ಮಾಡಿದ್ದಾರೆ.

ಏನೇನು ಸೌಲಭ್ಯ?
ಸಮ್ಮೇಳನದ ಪ್ರತಿನಿಧಿಯಾದವರಿಗೆ ಓಓಡಿ ಸೌಲಭ್ಯ, ವಸತಿ ಹಾಗೂ ಊಟದ ವ್ಯವಸ್ಥೆ. ಸಮ್ಮೇಳನ ಕಿಟ್‌ ಸೇರಿದಂತೆ ಇತರ ಸೌಲಭ್ಯಗಳು ಸಿಗಲಿವೆ. ಸಮ್ಮೇಳನದಲ್ಲಿ ಪ್ರತಿನಿಧಿ ನೋಂದಣಿದಾರರಿಗೆ ಪ್ರತ್ಯೇಕ ಊಟದ ವ್ಯವಸ್ಥೆಯಿದೆ. ಕಲಬುರಗಿ ಜಿಲ್ಲೆಯಲ್ಲಿ ನೋಂದಣಿ ಮಾಡಿಸಿದ ಪ್ರತಿನಿಧಿಗಳಿಗೆ ವಸತಿ ವ್ಯವಸ್ಥೆ ಇಲ್ಲ.

ಸಮ್ಮೇಳನದ ಪ್ರತಿನಿಧಿ ನೋಂದಣಿ ಮತ್ತೆ ಇಲ್ಲ. ಸಮ್ಮೇಳನದ ಆರಂಭದ ದಿನ ಪ್ರತಿನಿಧಿ ನೋಂದಣಿ ಆರಂಭಿಸುವಂತೆ ಒತ್ತಾಯಗಳು ಬರುತ್ತಿವೆ. ಆದರೆ ಈಗಲೇ 20 ಸಾವಿರ ಜನರು ನೋಂದಣಿ ಮಾಡಿದ್ದರಿಂದ ಇವರಿಗೆಲ್ಲ ಸೌಲಭ್ಯದತ್ತ ನಿಗಾ ವಹಿಸಲಾಗುವುದು.
ತಿಪ್ಪಣ್ಣಪ್ಪ ಕಮಕನೂರ, ನೋಂದಣಿ
ಸಮಿತಿ ಅಧ್ಯಕ್ಷರು ಹಾಗೂ ಶಾಸಕರು

ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next