Advertisement

ಸಾಹಿತ್ಯ ಸಮ್ಮೇಳನ ರೂಪುರೇಷೆ ಸಲ್ಲಿಕೆಗೆ ಸೂಚನೆ

04:12 PM Dec 22, 2019 | Team Udayavani |

ಕಲಬುರಗಿ: ನಗರದಲ್ಲಿ ನಡೆಯಲಿರುವ 85ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮೇಳನ ಸಿದ್ಧತೆಗಾಗಿ ರಚಿಸಿರುವ 16 ಸಮಿತಿಗಳು ಒಂದು ವಾರದೊಳಗೆ ಸಭೆ ನಡೆಸಿ, ಕಾರ್ಯಕ್ರಮಗಳ ರೂಪುರೇಷೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಬಿ. ಶರತ್‌ ಸೂಚಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ 85ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಸಮ್ಮೇಳನ ದಿನಗಳಂದು ಯಾವುದೇ ಗೊಂದಲ-ಸಮಸ್ಯೆಯಾಗದಂತೆ ಈಗಿಂದಲೇ ಸಿದ್ಧತೆ ಮಾಡಿಕೊಳ್ಳಬೇಕೆಂದು ವಿವಿಧ ಸಮಿತಿಯಲ್ಲಿರುವ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿದರು.

ವೇದಿಕೆ ಸಮಿತಿ: ಸಮ್ಮೇಳನದ ಮುಖ್ಯ ವೇದಿಕೆಯಲ್ಲಿ 30 ಸಾವಿರ ಜನರು ಕುಳಿತುಕೊಳ್ಳುವಂತೆ ಗಣ್ಯರಿಗೆ ಮತ್ತು ಸಾರ್ವಜನಿಕರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಬೇಕು. ವೇದಿಕೆಯನ್ನು ಕಲಬುರಗಿ ಜಿಲ್ಲೆಯ ಐತಿಹಾಸಿಕ ಪ್ರೇಕ್ಷಣೇಯ ಸ್ಥಳಗಳ ಬಗ್ಗೆ ಮಾಹಿತಿ ನೀಡುವ ಹಾಗೆ ಸಿದ್ಧಪಡಿಸಬೇಕು ಎಂದರು.

ಮೆರವಣಿಗೆ ಸಮಿತಿ: ರಥದಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ಅದ್ಧೂರಿಯಾಗಿ ನಡೆಸಬೇಕು. ಮೆರವಣಿ ಗೆಯಲ್ಲಿ ವಿವಿಧ ಕಲಾ-ತಂಡಗಳನ್ನು ವ್ಯವಸ್ಥೆ ಮಾಡಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಆಹಾರ ಸಮಿತಿ: ರಾಜ್ಯದ ಮೂಲೆ- ಮೂಲೆಯಿಂದ ಸಾಹಿತ್ಯಾಸಕ್ತರು, ಗಣ್ಯರು ಮತ್ತು ಸಾರ್ವಜನಿಕರು ಸಮ್ಮೆಳನಕ್ಕೆ ಆಗಮಿಸುವುದರಿಂದ ಬೆಳಗಿನ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟದ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಬೇಕು. ಗಣ್ಯರಿಗೆ, ಪ್ರತಿನಿಧಿಗಳಿಗೆ ಹಾಗೂ ಸಾರ್ವಜನಿಕರಿಗಾಗಿ ಪ್ರತ್ಯೇಕ ಕೌಂಟರ್‌ ತೆರೆಯಬೇಕು ಎಂದರು.

Advertisement

ಪ್ರಚಾರ ಸಮಿತಿ: ಒಂದು ಪ್ರಚಾರ ರಥ ಸಿದ್ಧಪಡಿಸಿಕೊಂಡು ಸಮ್ಮೇಳನ ದಿನಕ್ಕಿಂತ ಮುಂಚಿತವಾಗಿ ಜಿಲ್ಲೆಯ ಪ್ರತಿಯೊಂದು ಗ್ರಾಮ ಪಂಚಾಯಿತಿಗಳಿಗೆ ತೆರಳಿ ಅಲ್ಲಿ ಸಾರ್ವಜನಿಕರಿಗೆ ನುಡಿ ಸಮ್ಮೇಳನ ಕುರಿತು ಜಾಗೃತಿ ಮೂಡಿಸಬೇಕು. ಪತ್ರಿಕೆಗಳು, ಸ್ಥಳೀಯ ಕೇಬಲ್‌ ಟಿ.ವಿ., ರೇಡಿಯೋ, ಎಫ್‌.ಎಂ.ಗಳಲ್ಲಿ ಇದರ ಬಗ್ಗೆ ಹೆಚ್ಚಿನ ಪ್ರಚಾರ ನೀಡಬೇಕು, ಪ್ರಮುಖ ವೃತ್ತಗಳಲ್ಲಿ ಬ್ಯಾನರ್‌ಗಳನ್ನು ಅಳವಡಿಸಬೇಕು ಎಂದರು.

ಮಹಿಳಾ ಸಮಿತಿ: ಸಮ್ಮೇಳನದ ಸ್ಥಳಗಳಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ಕೌಂಟರ್‌ಗಳನ್ನು ತೆರೆಯಬೇಕು, ಸಾರಿಗೆ ವ್ಯವಸ್ಥೆ, ವಸತಿ ವ್ಯವಸ್ಥೆ, ಊಟ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ, ಆಸನ ವ್ಯವಸ್ಥೆ, ಆಸ್ಪತ್ರೆ ಮುಂತಾದೆಡೆಗಳಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಬೇಕು ಎಂದರು.

ಸ್ವಚ್ಛತೆ-ನಿರ್ವಹಣಾ ಸಮಿತಿ: ಸಮ್ಮೇಳನದ ವೇದಿಕೆ, ಸುತ್ತಮುತ್ತಲಿನ ಸ್ಥಳ, ಆಹಾರದ ಕೌಂಟರ್‌ ಮುಂತಾದೆಡೆ ನಿತ್ಯ ಸ್ವಚ್ಛತೆ ಕಾಪಾಡಬೇಕು. ಸ್ಥಳದಲ್ಲಿ ಕಸದ ಬುಟ್ಟಿಗಳನ್ನು ಇಟ್ಟಿರಬೇಕು. ಹಾಗೆ ಕಸ ವಿಲೇವಾರಿ ಮಾಡಬೇಕು ಎಂದರು.

ಆರೋಗ್ಯ ಸಮಿತಿ: ಸಮ್ಮೇಳನ ಆಗಮಿಸುವ ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಎರಡು ಆರೋಗ್ಯ ಕೇಂದ್ರ ತೆರೆಯಬೇಕು. ಓರ್ವ ಡಾಕ್ಟರ್‌ ಮತ್ತು ಇಬ್ಬರು ಶೂಶ್ರುಷಕಿಗಳನ್ನು ಇಲ್ಲಿ ನಿಯೋಜಿಸಬೇಕು. ತುರ್ತು ಸಂದರ್ಭದಲ್ಲಿ ಎರಡು ಅಂಬುಲೆನ್ಸ್‌ ವ್ಯವಸ್ಥೆಗೊಳಿಸಿ ಎಂದರು.

ಚಿತ್ರಕಲಾ ಸಮಿತಿ: ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿರುವ 85 ಅಧ್ಯಕ್ಷರ ಭಾವಚಿತ್ರಗಳನ್ನು ಹಾಕಬೇಕು. ಇದರ ಜೊತೆಯಲ್ಲಿ ಕನ್ನಡ ಸಾಹಿತ್ಯ, ಕರ್ನಾಟಕ ಮತ್ತು ಕಲಬುರಗಿಯ ಹಿರಿಮೆಯನ್ನು ಸಾರಬೇಕು ಎಂದರು.

ವಸತಿ ಮತ್ತು ಸಾರಿಗೆ ಸಮಿತಿ: ಸಮ್ಮೇಳನ ಅಧ್ಯಕ್ಷರು, ಪರಿಷತ್‌ ರಾಜ್ಯಾಧ್ಯಕ್ಷರು, ಪ್ರತಿಯೊಂದು ಜಿಲ್ಲೆಯಿಂದ ಬರುವ ಜಿಲ್ಲಾಧ್ಯಕ್ಷರು, ತಾಲೂಕು ಅಧ್ಯಕ್ಷರು, ಕಾರ್ಯದರ್ಶಿಗಳಿಗೆ ಪ್ರತ್ಯೇಕವಾದ ವಸತಿ ವ್ಯವಸ್ಥೆಯನ್ನು ಮಾಡಬೇಕು ಎಂದು ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next