ಕಲಬುರಗಿ: ಫೆ. 5ರಿಂದ ನಡೆಯುವ ಸಮ್ಮೇಳನಕ್ಕೆ ನಾಡಿನುದ್ದಕ್ಕೂ ಜನರು ಬರುವುದರಿಂದ ಶೌಚಾಲಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಸಮ್ಮೇಳನದ ಮೆರವಣಿಗೆ ರಸ್ತೆ ಹಾಗೂ ಜನರು ಓಡಾಡುವ ರಸ್ತೆಗಳಲ್ಲಿ ಅಲ್ಲಲ್ಲಿ ತಾತ್ಕಾಲಿಕ ಶೌಚಾಲಯಗಳನ್ನು ಸ್ಥಾಪಿಸುವಂತೆ ಸಮ್ಮೇಳನದ ಸ್ವಚ್ಛತಾ ಸಮಿತಿ ಅಧ್ಯಕ್ಷರಾಗಿರುವ ಶಾಸಕ ಎಂ.ವೈ. ಪಾಟೀಲ ಸೂಚನೆ ನೀಡಿದರು.
ಪಾಲಿಕೆ ಆಯುಕ್ತರ ಸಭಾಂಗಣದಲ್ಲಿ ಸಮಿತಿ ಸಭೆ ನಡೆಸಿದ ಅವರು, ಚಳಿಗಾಲ ಇರುವುದರಿಂದ ಜನರು ಶೌಚಾಲಯಕ್ಕಾಗಿ ಪರದಾಡುವುದನ್ನು ತಪ್ಪಿಸಲು ಹಾಗೂ ಸಮ್ಮೇಳನ ಸ್ಥಳದಲ್ಲಿ ಅದರಲ್ಲೂ ಊಟದ ಮಳಿಗೆಯಲ್ಲಿ ಎಲ್ಲೆಂದರಲ್ಲಿ ತಟ್ಟೆಗಳನ್ನು ಬೀಳುವುದನ್ನು ತಪ್ಪಿಸಲು ಜಾಗೃತಿ ವಹಿಸಬೇಕೆಂದರು.
ವೇದಿಕೆ ಸುತ್ತಮುತ್ತ, ವಾಹನ ನಿಲುಗಡೆ ಸ್ಥಳವನ್ನು ಈಗಾಗಲೇ ಸ್ವತ್ಛಗೊಳಿಸಲಾಗಿದೆ. ಕಸವನ್ನು ಆಗಿಂದಾಗೆ ತೆರವುಗೊಳಿಸಲು ಸ್ವಚ್ಛತಾ ಸಿಬ್ಬಂದಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಬೇಕು. ಪುಸ್ತಕ ಹಾಗೂ ವಾಣಿಜ್ಯ ಮಳಿಗೆಗಳ ಸ್ಥಳವು ಹೆಚ್ಚಿನ ಜನಸಂದಣಿ ಇರುವುದರಿಂದ ಅಲ್ಲಿ ಸಚ್ಛವಾಗಿಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಮಹಾನಗರ ಪಾಲಿಕೆ ಕಾರ್ಯನಿರ್ವಾಹಕ ಎಂಜಿನಿಯರ್ ಆರ್.ಪಿ. ಜಾಧವ ಮಾತನಾಡಿ, ಈಗಾಗಲೇ ಸ್ವತ್ಛತಾ ಕಾರ್ಯಕ್ಕೆ ಸಿಬ್ಬಂದಿ ನೇಮಿಸಲಾಗಿದೆ. ಸ್ವಚ್ಛತೆಯ ಎಲ್ಲಾ ಕೆಲಸಗಳನ್ನು ಪಾಲಿಕೆ ವತಿಯಿಂದಲೇ ಮಾಡಲಾಗುತ್ತದೆ. ಸ್ವಚ್ಛತೆಗೆ ಸಂಬಂಧಿಸಿದ ವಸ್ತುಗಳನ್ನು ಖರೀದಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಸ್ವಚತಾ ಕಾರ್ಯಕ್ಕೆ 38 ಲಕ್ಷ ಕ್ರಿಯಾ ಯೋಜನೆ ರೂಪಿಸಲಾಗಿರುವಲ್ಲಿ 5ರಿಂದ 6 ಲಕ್ಷ ರೂ.
ತಕ್ಷಣ ಒದಗಿಸಲು ಹಾಗೂ ಈ ಹಣದಲ್ಲಿ ಕೆಲವು ಸಾಮಗ್ರಿಗಳನ್ನು ಖರೀದಿ ಮಾಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡುವುದಾಗಿ ಶಾಸಕ ಎಂ.ವೈ. ಪಾಟೀಲ ತಿಳಿಸಿದರು. ಕಸ ಹಾಕಲು ದೊಡ್ಡ ಡ್ರಮ್‌ಗಳನ್ನು ಖರೀದಿಸಲಾಗುತ್ತಿದೆ. ಸಮಿತಿಯ ಎಲ್ಲ ಸದಸ್ಯ ಮತ್ತು ಅ ಧಿಕಾರಿಗಳಿಗೆ ನಿಗದಿತ ಕೆಲಸಗಳನ್ನು ನೀಡಲಾಗುತ್ತದೆ. ಸಮ್ಮೇಳನ ನಡೆಯುವ ಸ್ಥಳದಲ್ಲಿ ಕಾರ್ಪೆಟ್‌ಗಳನ್ನು ಅಳವಡಿಸಲಾಗುತ್ತದೆ. ರಾತ್ರಿ ಸಮಯದಲ್ಲಿ ರಸ್ತೆಗಳಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಿದರು. ಮಹಾನಗರ ಪಾಲಿಕೆ ಕಾರ್ಯನಿರ್ವಾಹಕ ಎಂಜಿನಿಯರ್ ದಶವಂತ ಗಾಜರೆ, ಪರಿಸರ ಅಭಿಯಂತರ ಮುನಾಫ್ ಪಟೇಲ್, ಸಮಿತಿ ಸದಸ್ಯ ಗೋವಿಂದ ರಾಠಿ ಹಾಜರಿದ್ದರು.