Advertisement

ನುಡಿ ಜಾತ್ರೆಯಲ್ಲಿ ಏಕರೂಪ ಭೋಜನ

12:57 PM Jan 18, 2020 | Naveen |

ಕಲಬುರಗಿ: ಸೂರ್ಯನಗರಿ, ತೊಗರಿ ಕಣಜ ಕಲಬುರಗಿಯಲ್ಲಿ ಮೂರು ದಶಕಗಳ ಬಳಿಕ ನಡೆಯುತ್ತಿರುವ ನುಡಿ ಜಾತ್ರೆಯಲ್ಲಿ ಎಲ್ಲರಿಗೂ ಏಕರೂಪ ಊಟವನ್ನೇ ನೀಡುವ ನಿರ್ಧಾರಕ್ಕೆ ಬರಲಾಗಿದೆ.

Advertisement

ಗುಲಬರ್ಗಾ ವಿಶ್ವವಿದ್ಯಾಲಯ ಆವರಣದಲ್ಲಿ ಫೆ.5ರಿಂದ ಮೂರು ದಿನ 85ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು, ಉತ್ತರ ಕರ್ನಾಟಕ, ಕರಾವಳಿ ಕರ್ನಾಟಕ, ಮೈಸೂರು ಕರ್ನಾಟಕ ಭಾಗದ ಸಾಹಿತಿಗಳು, ಸಾಹಿತ್ಯಾಸಕ್ತರಿಗೆ ಆಯಾ ಭಾಗದ ಊಟ ನೀಡಬೇಕೆಂದು ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಸಲಹೆ ನೀಡಿದ್ದರು. ಜತೆಗೆ ಊಟದ ತಯಾರಿಕೆಯನ್ನು ಪ್ಲೇಟ್‌ ಲೆಕ್ಕದಲ್ಲಿ ಗುತ್ತಿಗೆ ನೀಡುವ ಬದಲಿಗೆ, ಎಲ್ಲ ಸಾಮಗ್ರಿಗಳನ್ನು ತಂದುಕೊಟ್ಟು ಅಡುಗೆ ಮಾಡಲು ಮಾತ್ರವೇ ಗುತ್ತಿಗೆ ಕೊಡಬೇಕು. ಇದರಿಂದ ಸಮ್ಮೇಳನಕ್ಕೆ ಬರುವ ಪ್ರತಿಯೊಬ್ಬರಿಗೆ ಊಟ ಪೂರೈಸಬಹುದು. ಪ್ಲೇಟ್‌ ಲೆಕ್ಕ ಮಾಡಿದರೆ ಉಳಿದವರು ಉಪವಾಸ ಹೋಗುವ ಸಾಧ್ಯತೆ ಇರುತ್ತದೆ ಎನ್ನುವ ಆತಂಕವನ್ನು ಡಿಸಿಎಂ ವ್ಯಕ್ತಪಡಿಸಿದ್ದರು.

ಸಾಧಕ-ಬಾಧಕ ಚರ್ಚೆ: ಊಟದ ವ್ಯವಸ್ಥೆ ಬಗ್ಗೆ ಡಿಸಿಎಂ ಕಾರಜೋಳ ಸೂಚಿಸುವ ವೇಳೆಗಾಗಲೇ ಸಮ್ಮೇಳದನ ಆಹಾರ ಸಮಿತಿಯುವರು, ಈ ಹಿಂದಿನ ಸಮ್ಮೇಳನದಲ್ಲಿನ ಊಟದ ವ್ಯವಸ್ಥೆ ಹಾಗೂ ಅಲ್ಲಿ ಎಷ್ಟು ಜನ ಊಟ ಮಾಡಿದ್ದರು ಎನ್ನುವ ಮಾಹಿತಿ ಕಲೆ ಹಾಕಿದ್ದರು. ಹಲವು ಸುತ್ತಿನ ಸಭೆಗಳನ್ನು ನಡೆಸಿ ಅಡುಗೆ ತಯಾರಿಸುವುದನ್ನು ಅನುಭವಿ ಸಂಸ್ಥೆಗೆ ವಹಿಸುವ ಮತ್ತು ಗಣ್ಯರು, ಪ್ರತಿನಿಧಿಗಳು, ಸಾರ್ವಜನಿಕರ ಮಧ್ಯೆ ಯಾವುದೇ ತಾರತಮ್ಯ ಮಾಡದೇ ಎಲ್ಲರಿಗೂ ಒಂದೇ ರೀತಿಯ ಊಟದ ವ್ಯವಸ್ಥೆ ಮಾಡುವ ನಿರ್ಧಾರಕ್ಕೆ ಬಂದಿದ್ದರು. ಮೂರು ದಿನಗಳಲ್ಲಿ 5.74 ಲಕ್ಷಕ್ಕೂ ಅಧಿಕ ಜನರು ಊಟ ಮಾಡುವ ಅಂದಾಜನ್ನು ಸಿದ್ಧಪಡಿಸಿ, ವಾರದ ಹಿಂದೆ ನಡೆದ ಪೂರ್ವಭಾವಿ ಸಭೆಯಲ್ಲಿ ಡಿಸಿಎಂಗೆ ವಿವರಿಸಿದ್ದರು.

ಅಂದು ಸಭೆಯಲ್ಲಿ ಡಿಸಿಎಂ ಹೇಳಿದ್ದ ಸಲಹೆಗೂ ಆಹಾರ ಸಮಿತಿಯವರು ಸಮ್ಮತಿ ಸೂಚಿಸಿದ್ದರು. ಆದರೆ, ಸಮ್ಮೇಳನಕ್ಕೆ ಕೆಲವೇ ದಿನಗಳು ಬಾಕಿ ಉಳಿರುವುದರಿಂದ ಡಿಸಿಎಂ ಕೊಟ್ಟ ಸಲಹೆ ಸಾಧಕ-ಬಾಧಕ ಕುರಿತು ಆಹಾರ ಸಮಿತಿ ಅಧ್ಯಕ್ಷ ಬಸವರಾಜ ಮತ್ತಿಮಡು ಮತ್ತು ಜಿಲ್ಲಾಧಿಕಾರಿ ಶರತ್‌ ಬಿ. ಅವರು ಸುದೀರ್ಘ‌ವಾಗಿ ಅವಲೋಕನ ಮಾಡಿ, ಅಡುಗೆ ಸಾಮಗ್ರಿ ತಂದು ಕೊಡುವುದು ಮತ್ತು ಅದರ ನಿಗಾ ವಹಿಸುವುದು ಕಷ್ಟವಾಗಲಿದೆ.

ಅಲ್ಲದೇ, ಅಡುಗೆ ಮಾಡಲು ಮೂರ್‍ನಾಲ್ಕು ಸಂಸ್ಥೆಯವರು ಮುಂದೆ ಬಂದಿದ್ದು, ಅನುಭವವುಳ್ಳ ಸಂಸ್ಥೆಗೆ ವಹಿಸುವ ನಿರ್ಧಾರಕ್ಕೆ ಬರಲಾಗಿದೆ. ಈಗ ಕೇವಲ ಅಡುಗೆ ಮಾಡಿ ಕೊಡಿ ಎಂದು ಸಂಸ್ಥೆಯವರಿಗೆ ಹೇಳುವುದು ಅಸಾಧ್ಯವಾಗಲಿದೆ. ಆಯಾ ಭಾಗದ ಅಡುಗೆ ಮಾಡಿಸಿದರೂ, ಕೆಲವೊಮ್ಮೆ ವ್ಯರ್ಥವಾಗುವ ಸಾಧ್ಯತೆ ಇರುತ್ತದೆ. ಸಮ್ಮೇಳನಕ್ಕೆ ಕಡಿಮೆ ಸಮಯ ಇರುವುದರಿಂದ ಮೊದಲಿನ ತಿರ್ಮಾನಕ್ಕೆ ಬರಲಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement

ಒಂದು ವಿಶೇಷ ಖಾದ್ಯ: ಮೂರು ದಿನಗಳ ಸಮ್ಮೇಳನದಲ್ಲಿ ಗಣ್ಯರು, ಸಾರ್ವಜನಿಕರಿಗೆ ಊಟದ ತಾತ್ಕಾಲಿಕ ಮೆನು ಈ ಹಿಂದೆಯೇ ತಯಾರಿಸಲಾಗಿದ್ದು, ಉಪಹಾರ ಶಿರಾ, ಉಪ್ಪಿಟ್ಟು, ಸುಸಲಾ, ಜವಿಗೋಧಿ ಉಪ್ಪಿಟ್ಟು, ಊಟಕ್ಕೆ ಸಜ್ಜೆ ರೊಟ್ಟಿ, ಜೋಳದ ರೊಟ್ಟಿ, ಚಪಾತಿ, ಪುಂಡಿ ಪಲ್ಯ, ಬದನೆಕಾಯಿ ಎಣ್ಣೆಗಾಯಿ, ಶೇಂಗಾ ಹೋಳಿಗೆ, ಜಿಲೇಬಿ, ಶಾವಿಗೆ ಪಾಯಸ, ಅನ್ನ-ಸಾಂಬಾರ ಹಾಗೂ ಶುದ್ಧ ಕುಡಿಯುವ ನೀಡಲು ತೀರ್ಮಾನಿಸಲಾಗಿದೆ.

ಸಮ್ಮೇಳನಕ್ಕೆ ರಾಜ್ಯದ ಎಲ್ಲ ಭಾಗಗಳಿಂದಲೂ ಜನರು ಬರುವುದರಿಂದ ಡಿಸಿಎಂ ಸೂಚನೆಯಂತೆ ಆಯಾ ಪ್ರದೇಶದ ಒಂದು ವಿಶೇಷ ಖಾದ್ಯದ ಸವಿಯನ್ನು ಉಣಬಡಿಸುವ ನಿರ್ಧಾರಕ್ಕೆ ಬರಲಾಗಿದೆ ಎಂದು ಮೂಲಗಳು ಖಚಿತ ಪಡಿಸಿವೆ.

150 ಊಟದ ಕೌಂಟರ್‌ ನಿರ್ಮಾಣಕ್ಕೆ ತೀರ್ಮಾನ
ಸಮ್ಮೇಳನದ ಯಶಸ್ವಿಗೆ ಊಟದ ವ್ಯವಸ್ಥೆಯೂ ಮುಖ್ಯ ಎನ್ನುವುದನ್ನು ಆಹಾರ ಸಮಿತಿಯವರು ಮನಗಂಡಿದ್ದು, ಊಟದ ಕೌಂಟರ್‌ಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಿದ್ದಾರೆ. ಇದಕ್ಕೂ ಮುನ್ನ 80ರಿಂದ 100 ಕೌಂಟರ್‌ಗಳನ್ನು ತೆರೆಯಲು ನಿರ್ಧರಿಸಲಾಗಿತ್ತು. ಆದರೆ, ಕೇಂದ್ರ ಕಸಾಪ ಅಧ್ಯಕ್ಷ ಮನು ಬಳಿಗಾರ, ಧಾರವಾಡ ಸಮ್ಮೇಳನದಲ್ಲಿ 140 ಊಟದ ಕೌಂಟರ್‌ಗಳು ಇದ್ದವು. ಹೀಗಾಗಿ ಕೌಂಟರ್‌ಗಳ ಸಂಖ್ಯೆ ಹೆಚ್ಚಿಸಬೇಕೆಂದು ಆಹಾರ ಸಮಿತಿಯವರನ್ನು ಕೋರಿದ್ದರು.

ಅದರಂತೆ ಈಗ 100ರಿಂದ 150ಕ್ಕೆ ಊಟದ ಕೌಂಟರ್‌ಗಳನ್ನು
ಹೆಚ್ಚಿಸಲು ತೀರ್ಮಾನಿಸಲಾಗಿದೆ. ಊಟಕ್ಕೆ ಜನರು ಪರದಾಡಬಾರದು. ಬೇರೆ-ಬೇರೆ ಊರುಗಳಿಂದ ಬರುವ ಪ್ರತಿನಿಧಿಗಳಿಗೆ ತೊಂದರೆ ಆಗದಂತೆ ಪ್ರತ್ಯೇಕ ಕೌಂಟರ್‌ಗಳು ಇರಲಿವೆ. ಊಟದ ವ್ಯವಸ್ಥೆ ಅಚ್ಚುಕಟ್ಟಾಗಿ ನಿರ್ವಹಿಸಲು ಆಹಾರ ಸಮಿತಿಯಲ್ಲೇ ಉಸ್ತುವಾರಿ ಸಮಿತಿಗಳನ್ನು ರಚಿಸಲಾಗಿದೆ. ಒಬ್ಬರಿಗೆ ಅಡುಗೆ ಉಸ್ತುವಾರಿ, ಮತ್ತೂಬ್ಬರಿಗೆ ಗಣ್ಯರ ಊಟದ ಉಸ್ತುವಾರಿ, ಸಾರ್ವಜನಿಕರ ಊಟದ ಉಸ್ತುವಾರಿ ಹೀಗೆ ಬೇರೆ-ಬೇರೆ ಮೇಲುಸ್ತುವಾರಿಯಾಗಿ ನೇಮಿಸಲಾಗುವುದು. ಊಟ ಬಡಿಸಲು ಮತ್ತು ಇತರ ಕಾರ್ಯಗಳಿಗೆ ಅಕ್ಷರ ದಾಸೋಹ ಸಿಬ್ಬಂದಿ, ಎನ್‌ಎಸ್‌ಎಸ್‌, ಎನ್‌ಸಿಸಿ ಸ್ವಯಂ ಸೇವಕರು ಇರಲಿದ್ದಾರೆ. ಇದರಿಂದ ಯಾವುದೇ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಲಾಗುತ್ತಿದೆ ಎಂದು ಆಹಾರ ಸಮಿತಿ ಕಾರ್ಯಾಧ್ಯಕ್ಷರಾದ ಜಿ.ಪಂ ಯೋಜನಾಧಿಕಾರಿ ಪ್ರವೀಣ ಪ್ರಿಯಾ ಮಾಹಿತಿ ನೀಡಿದ್ದಾರೆ.

ಸಾಹಿತ್ಯ ಸಮ್ಮೇಳನದ ಸಂಪೂರ್ಣ ಅಡುಗೆ ತಯಾರಿಕೆಯನ್ನು ಅನುಭವಿ ಸಂಸ್ಥೆಗೆ ಗುತ್ತಿಗೆ ನೀಡುವ ಅಂತಿಮ ತೀರ್ಮಾನಕ್ಕೆ ಬರಲಾಗಿದೆ. ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಪ್ರದೇಶವಾರು ಊಟಕ್ಕೆ ಸೂಚಿಸಿದ್ದರು. ಆದರೆ, ಕಡಿಮೆ ಸಮಯಾವಕಾಶ ಇರುವುದರಿಂದ ಪ್ರದೇಶವಾರು ಊಟಕ್ಕಿಂತ ಆಯಾ ಭಾಗದ ವಿಶೇಷ ಖಾದ್ಯ ಮಾಡಿಸಿ, ಅವರ ಸೂಚನೆ ಪಾಲಿಸಲಾಗುತ್ತದೆ.
ಬಸವರಾಜ ಮತ್ತಿಮಡು,
ಶಾಸಕ,
ಸಮ್ಮೇಳನದ ಆಹಾರ ಸಮಿತಿ ಅಧ್ಯಕ್ಷ

„ರಂಗಪ್ಪ ಗಧಾರ

Advertisement

Udayavani is now on Telegram. Click here to join our channel and stay updated with the latest news.

Next