ಕಲಬುರಗಿ: ಕಲಬುರಗಿ ರೈಲ್ವೆ ವಿಭಾಗದಲ್ಲಿ ಕೈಗೊಳ್ಳಬೇಕಾದ ರೈಲ್ವೆ ಯೋಜನೆಗಳು ಹಾಗೂ ಕಾಮಗಾರಿ ಪೂರ್ತಿಗೊಳ್ಳದ ಯೋಜನೆಗಳ ಕುರಿತು ಸಂಸದ ಡಾ| ಉಮೇಶ ಜಾಧವ ರೈಲ್ವೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಮುಂಬೈನಲ್ಲಿ ನಡೆದ ಮಧ್ಯ ರೈಲ್ವೆ ವಲಯ ವ್ಯಾಪ್ತಿಯ ಸೊಲ್ಲಾಪುರ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಹಿತೇಂದ್ರ ಮಲೊØೕತ್ರಾ ಅವರಿಗೆ ಕಲಬುರಗಿ ವಿಭಾಗದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಕಲಬುರಗಿ ಪ್ಲಾಟ್ಫಾರ್ಮ್ 1ರಲ್ಲಿ ಪಾರ್ಕ್ – ಪ್ಲೈಗಳನ್ನು ನಿರ್ಮಿಸಬೇಕು. ರೈಲ್ವೆ ನಿಲ್ದಾಣದಲ್ಲಿರುವ ಎಸ್ಕಲೇಟ್ರ ಬಳಿ ಯಾರನ್ನು ನೇಮಿಸದ ಕಾರಣ ತೊಂದರೆಯಾಗುತ್ತಿದ್ದು, ಕೂಡಲೇ ಸೆಕ್ಯುರಿಟಿ ಗಾರ್ಡ್‌ನ್ನು ನೇಮಕ ಮಾಡಬೇಕು ಎಂದರು.
ರೈಲ್ವೆ ನಿಲ್ದಾಣದಲ್ಲಿ ಪ್ರತಿ ಗಂಟೆಗೊಮ್ಮೆ ರೈಲು ಬರುವ, ಹೋಗುವ ಬಗ್ಗೆ 10 ನಿಮಿಷ ಮೊದಲು ಪ್ರಯಾಣಿಕರಿಗೆ ಮಾಹಿತಿ ನೀಡುವ ವ್ಯವಸ್ಥೆ ಮಾಡಬೇಕು. ನಿಲ್ದಾಣದಲ್ಲಿ ಹವಾನಿಯಂತ್ರಿತ ವಿಶ್ರಾಂತಿ ಕೋಣೆಗಳ ಅವಶ್ಯಕತೆಯಿದೆ. ಏಕೆಂದರೆ ಕಲಬುರಗಿ ಕರ್ನಾಟಕದ ‘ಕಚ್’ ಎಂದು ಹೆಸರುವಾಸಿಯಾಗಿದ್ದು, ಬೇಸಿಗೆಯಲ್ಲಿ ಇಲ್ಲಿ ಉಷ್ಣಾಂಶ 46 ಡಿಗ್ರಿ ತಲುಪುತ್ತದೆ ಎನ್ನುವುದನ್ನು ತಿಳಿದು, ವಿಶ್ರಾಂತಿ ಕೋಣೆ ನಿರ್ಮಿಸಬೇಕು ಎಂದರು.
ಎಲ್ಲ ಪ್ಲಾಟ್ಫಾರ್ಮ್ಗಳಲ್ಲಿ ಎಸ್ಕಲೇಟರ್‌ಗಳನ್ನು ಶೀಘ್ರವೇ ಸ್ಥಾಪಿಸಬೇಕು. ವಯಸ್ಸಾದವರಿಗೆ ಹಾಗೂ ಅಂಗವಿಕಲರಿಗೆ ಅನುಕೂಲವಾಗಲು ರೈಲ್ವೆ ನಿಲ್ದಾಣದ ಪ್ಲಾಟ್ ಫಾರ್ಮನಲ್ಲಿ ರ್‍ಯಾಂಪ್ ನಿರ್ಮಿಸಬೇಕು. ರೈಲ್ವೆ ಪೊಲೀಸರಿಗೆ ಕಲಬುರಗಿಯಲ್ಲಿ ವಸತಿ ಗೃಹ ನಿರ್ಮಿಸಬೇಕು. ರೈಲ್ವೆ ಪೊಲೀಸ್ ಔಟ್ಪೋಸ್ಟ್ ಗಾಗಿ ಹೊಸ ಕಟ್ಟಡ ನಿರ್ಮಿಸಬೇಕು. ರೈಲ್ವೆ ಪೊಲೀಸ್ ಸಿಬ್ಬಂದಿ ಹೆಚ್ಚಿಸಬೇಕು. ಚಿತ್ತಾಪುರ ಮತ್ತು ಶಹಾಬಾದ ರೈಲ್ವೆ ನಿಲ್ದಾಣಗಳಲ್ಲಿ ವಿಶಾಖಪಟ್ಟಣಂನಿಂದ ಲೋಕಮಾನ್ಯ ತಿಲಕ-ವಿಶಾಖಪಟ್ಟಣಂ ರೈಲು ಹಾಗೂ ಕಲಬುರಗಿ-ಹೈದ್ರಾಬಾದ-ಕಲಬುರಗಿ (ಇಂಟರ್‌ಸಿಟಿ ಪ್ಯಾಸೆಂಜರ್) ರೈಲನ್ನು ನಿಲ್ಲಿಸುವ ಮೂಲಕ ಈ ಭಾಗದ ಜನರ ಬಹುದಿನಗಳ ಬೇಡಿಕೆ ಈಡೇರಿಸಬೇಕು. ಈ ರೈಲುಗಳನ್ನು ಥಾಣೆಯಲ್ಲಿ ನಿಲ್ಲಿಸುವ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು. ಬೀದರ-ಕಲಬುರಗಿ ರೈಲನ್ನು ವಾಡಿ ರೈಲ್ವೆ ನಿಲ್ದಾಣದ ವರೆಗೆ ವಿಸ್ತರಿಸಬೇಕು. ಸೊಲ್ಲಾಪುರ -ಕೊಲ್ಲಾಪುರ ಎಕ್ಸಪ್ರಸ್‌ನ್ನು ಕಲಬುರಗಿ ವರೆಗೆ ವಿಸ್ತರಿಸಿ, ಈ ಭಾಗದ ಭಕ್ತರಿಗೆ ಅನುಕೂಲ ಮಾಡಿಕೊಡಬೇಕು. ಚೆನ್ನೈ- ಅಹಮದಾಬಾದ- ಚೆನ್ನೈ ರೈಲು ಕಲಬುರಗಿ ನಿಲ್ದಾಣದಲ್ಲಿ ನಿಲ್ಲಲು ಕ್ರಮ ಕೈಗೊಳ್ಳಬೇಕು. ಸೊಲ್ಲಾಪುರ- ಹಾಸನ ರೈಲನ್ನು ಕಲಬುರಗಿ ಮೂಲಕ ಆರಂಭಿಸಬೇಕು. ದುರಾಂಟೋ ಎಕ್ಸಪ್ರಸ್‌ನ್ನು ಕಲಬುರಗಿ ನಿಲ್ದಾಣದಲ್ಲಿ ನಿಲ್ಲಲು ಕ್ರಮ ಕೈಗೊಳ್ಳಬೇಕು ಎನ್ನುವ ಬೇಡಿಕೆಗಳನ್ನು ಸಲ್ಲಿಸಿದರು.