ರಂಗಪ್ಪ ಗಧಾರ
ಕಲಬುರಗಿ: ಕಲ್ಯಾಣ ಕರ್ನಾಟಕ ಜನರ ಬಹುಬೇಡಿಕೆಯಾಗಿರುವ ಕಲಬುರಗಿ ರೈಲ್ವೆ ವಿಭಾಗ ಸ್ಥಾಪನೆ ಕನಸು ಸಾಕಾರಗೊಳ್ಳುವುದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರ ಮೇಲೆ ಅವಲಂಬನೆ ಆಗಿದೆ.
ಸುರೇಶ ಅಂಗಡಿ ಅವರು ತಮ್ಮ ಇಲಾಖೆಯಿಂದ ಕೇವಲ 100 ಕೋಟಿ ರೂ. ಕೊಡಿಸಿದಲ್ಲಿ ಕಲಬುರಗಿ ರೈಲ್ವೆ ವಿಭಾಗ ಆರಂಭವಾಗುತ್ತದೆ. ವಿವಿಧ ರೈಲ್ವೆ ವಲಯ, ವಿಭಾಗಗಳಲ್ಲಿ ಕಲ್ಯಾಣ ಕರ್ನಾಟಕದ ಬೀದರ, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳು ಹರಿದು ಹಂಚಿಹೋಗಿವೆ. ಈ ಭಾಗದಲ್ಲಿ ರೈಲ್ವೆ ಅಭಿವೃದ್ಧಿಗೋಸ್ಕರ ಪ್ರತ್ಯೇಕ ವಿಭಾಗ ಸ್ಥಾಪಿಸಬೇಕು ಎಂಬ ಕೂಗು ಮೂರು ದಶಕಗಳಿಂದ ಪ್ರತಿಧ್ವನಿಸುತ್ತಲೇ ಇದೆ. ಈ ನಡುವೆ ಯುಪಿಎ ಸರ್ಕಾರ-2ರ ಕೊನೆ ಘಳಿಗೆಯಲ್ಲಿ ರೈಲ್ವೆ ಇಲಾಖೆ ಜವಾಬ್ದಾರಿ ಹೊತ್ತಿದ್ದ ಕಾಂಗ್ರೆಸ್ ಹಿರಿಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ಕಲಬುರಗಿ ರೈಲ್ವೆ ವಿಭಾಗ ಘೋಷಿಸುವ ಮೂಲಕ ಈ ಧ್ವನಿಗೆ ಶಕ್ತಿ ತುಂಬಿದ್ದರು.
ಇನ್ನೇನು ಕಲಬುರಗಿ ರೈಲ್ವೆ ವಿಭಾಗ ಆರಂಭವಾಗಲಿದೆ ಎನ್ನುವಾಗಲೇ ಬದಲಾದ ರಾಜಕೀಯ ಕಾಲಮಾನ ರೈಲ್ವೆ ವಿಭಾಗದ ಕನಸಿನ ಮೇಲೆ ಮಸುಕು ಕವಿಯುವಂತೆ ಮಾಡಿತು. ಈ ಕವಿದ ಮುಸುಕು ತೆಗೆದುಹಾಕಿ ಕಲ್ಯಾಣ ಕರ್ನಾಟಕದಲ್ಲಿ ರೈಲ್ವೆ ಕಲ್ಯಾಣ ಮಾಡಲು ರಾಜ್ಯದವರೇ ಆದ ಸುರೇಶ ಅವರು ತಮ್ಮ ರೈಲ್ವೆ ‘ಅಂಗಡಿ’ಯಿಂದ ಅನುದಾನ ಕೊಡಬೇಕಿದೆ ಅಷ್ಟೆ.
ಧೂಳು ಹಿಡಿಯುತ್ತಿದೆ ಡಿಪಿಆರ್: 2013-14ರಲ್ಲಿ ರೈಲ್ವೆ ಖಾತೆ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಪ್ರತ್ಯೇಕ ಕಲಬುರಗಿ ರೈಲ್ವೆ ವಿಭಾಗ ಘೋಷಿಸಿದ್ದರು. ರೈಲ್ವೆ ವಿಭಾಗೀಯ ಕಚೇರಿ ಆರಂಭಿಸಲು ನಗರದ ಐವಾನ್-ಇ-ಶಾಹಿ ಸಮೀಪ 37 ಎಕರೆ ಭೂಮಿ ಗುರುತಿಸಿ ಸ್ವಾಧೀನ ಪಡಿಸಿಕೊಂಡು ಶಂಕುಸ್ಥಾಪನೆ ಮಾಡಿದ್ದರು. ಅಲ್ಲದೇ, ರೈಲ್ವೆ ವಿಭಾಗ ರಚಿಸಲು ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗಿತ್ತು.
ಕಲಬುರಗಿ ವಿಭಾಗವನ್ನು ನೈಋತ್ಯ ರೈಲ್ವೆ ವಲಯ (ಎಸ್‌ಡಬ್ಲ್ಯುಆರ್)ದಲ್ಲಿ ಸೇರ್ಪಡೆ ಮಾಡುವ ನಿರ್ಧಾರ ಮಾಡಲಾಗಿತ್ತು. ಡಿಪಿಆರ್ ಪ್ರಕಾರ ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳು ಮಾತ್ರವಲ್ಲದೇ ವಿಜಯಪುರ, ಬಾಗಲಕೋಟೆ ಜಿಲ್ಲೆಯ ಅಲ್ಪ ಭಾಗ ಮತ್ತು ತೆಲಂಗಾಣದ ವಿಕಾರಾಬಾದ ನಿಲ್ದಾಣವನ್ನು ಕಲಬುರಗಿ ರೈಲ್ವೆ ವಿಭಾಗಕ್ಕೆ ಒಳಪಡಿಸಲಾಗಿದೆ. ರೈಲ್ವೆ ಬೋರ್ಡ್‌ಗೆ 2014ರಲ್ಲೇ ಡಿಪಿಆರ್ ಸಲ್ಲಿಸಲಾಗಿದೆ. ಕಲಬುರಗಿ ರೈಲ್ವೆ ವಿಭಾಗಕ್ಕೆ ವಿಶೇಷ ಅಧಿಕಾರಿಯನ್ನು ನಿಯೋಜಿಸಲಾಗಿದೆ. ಆದರೆ, ಡಿಪಿಆರ್‌ಗೆ ಇದುವರೆಗೂ ರೈಲ್ವೆ ಸಚಿವಾಲಯದ ಅನುಮೋದನೆ ಸಿಕ್ಕಿಲ್ಲ. ಇದರಿಂದ ಡಿಪಿಆರ್ ಧೂಳು ಹಿಡಿಯುವಂತಾಗಿದೆ. ಹೀಗಾಗಿ ರೈಲ್ವೆ ಸಚಿವ ಸುರೇಶ
ಅಂಗಡಿ ರೈಲ್ವೆ ಸಚಿವಾಲಯದಲ್ಲಿ ಡಿಪಿಆರ್‌ಗೆ ಅನುಮೋದನೆ ಕೊಡಿಸಿ ಅದು ಕಾರ್ಯಗತಗೊಳಿಸಲು ಅನುದಾನ ಬಿಡುಗಡೆ ಮಾಡಬೇಕು ಎಂದು ಕಲ್ಯಾಣ ಕರ್ನಾಟಕ ಜನತೆ ಮತ್ತು ರೈಲ್ವೆ ಹೋರಾಟಗಾರರ ಒತ್ತಾಸೆಯಾಗಿದೆ.