ಕಲಬುರಗಿ: ಸಂಪೂರ್ಣ ಪೂರ್ಣಗೊಂಡಿರುವ ನಗರದ ವಿಮಾನ ನಿಲ್ದಾಣದಿಂದ ಸಾರ್ವಜನಿಕ ವಿಮಾನ ಹಾರಾಟಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಹೈದ್ರಾಬಾದ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಎಚ್ಕೆಸಿಸಿಐ) ಆಗ್ರಹಿಸಿದೆ.
ಎಚ್ಕೆಸಿಸಿಐ ಅಧ್ಯಕ್ಷ ಅಮರನಾಥ ಪಾಟೀಲ ಹಾಗೂ ಗೌರವ ಕಾರ್ಯದರ್ಶಿ ಶಶಿಕಾಂತ ಪಾಟೀಲ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧ್ಯಕ್ಷ ಗುರುಪ್ರಸಾದ ಮೋಹನ್‌ಪಾತ್ರ ಅವರಿಗೆ ಪತ್ರ ಬರೆದು ನಿಲ್ದಾಣ ಪೂರ್ಣಗೊಂಡ ಹಾಗೂ ಮಾಡಬೇಕಿರುವ ಒಪ್ಪಂದ ಅಂತಿಮಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕಲಬುರಗಿ ವಿಮಾನ ನಿಲ್ದಾಣದ ಕಾಮಗಾರಿ 2008ರಲ್ಲಿ ಕೈಗೆತ್ತಿಕೊಂಡಲಾಗಿದೆ. ಅದನ್ನು 2012ರಲ್ಲಿ ಪೂರ್ತಿಗೊಳಿಸುವ ಉದ್ದೇಶ ಹೊಂದಲಾಗಿತ್ತು. ಆದರೆ ಕಾರಣಾಂತರಗಳಿಂದ ಅದನ್ನು ಪೂರ್ತಿಗೊಳಿಸದೇ, ಮುಂದೂಡಲಾಗುತ್ತಿತ್ತು. ಆದರೆ ಈಗ ವಿಮಾನ ನಿಲ್ದಾಣದ ಕಾಮಗಾರಿ ಪೂರ್ತಿಗೊಂಡಿದ್ದು, ವಿಮಾನ ಹಾರಾಟಕ್ಕೆ ಸಿದ್ದವಾಗಿದೆ.
ಈಗಾಗಲೇ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಕಲಬುರಗಿ ವಿಮಾನ ನಿಲ್ದಾಣಕ್ಕೆ ಎಎನ್‌ಎಸ್ ಸೇವೆ ಒದಗಿಸುವ ಕುರಿತು ಕಳೆದ ಜನವರಿ 21ರಂದು ಸಿಎನ್‌ಎಸ್, ಎಟಿಎಂ ಒಪ್ಪಂದಕ್ಕೆ ರುಜುವಾತು ಹಾಕಿದೆ. ಜತೆಗೆ ಪ್ರಾಧಿಕಾರದ ತಾಂತ್ರಿಕ ತಂಡ ಕಳೆದ ಜನವರಿ 3ರಂದು ಕಲಬುರಗಿ ವಿಮಾನ ನಿಲ್ದಾಣ ಕಾರ್ಯಗತಗೊಳಿಸಲು ಅವಶ್ಯವಿರುವ ಸಿಎನ್‌ಎಸ್-ಎಟಿಎಂ ಉಪಕರಣ ಮತ್ತು ಭೌತಿಕ ಮೂಲಭೂತ ಸೌಕರ್ಯಗಳ ಕಾಮಗಾರಿ ಕುರಿತು ಪರಿಶೀಲನೆ ಮಾಡಿದೆ. ಇದರ ಜತೆಗೆ ಬ್ಯುರೋ ಆಫ್ ಸಿವಿಲ್ ಎವಿಯೇಷನ್ ಸೆಕ್ಯುರಿಟಿ ಮತ್ತು ಡೈರೆಕ್ಟರ್ ಜನರಲ್ ಆಫ್ ಸಿವಿಲ್ ಎವಿಯೆಷನ್ ಅಧಿಕಾರಿಗಳ ತಂಡ ತಪಾಸಣೆ ಕೂಡ ಮಾಡಿದೆ. ಎಎಐ ಮಾದರಿಯಂತೆ ಬೆಂಗಳೂರಿನ ಕರ್ನಾಟಕ ಔದ್ಯೋಗಿಕ ಮತ್ತು ಮೂಲಭೂತ ಸೌಕರ್ಯಾಭಿವೃದ್ಧಿ ವ್ಯವಸ್ಥಾಪಕ ನಿರ್ದೇಶಕರು ಕಲಬುರಗಿ ವಿಮಾನ ನಿಲ್ದಾಣಕ್ಕೆ ಎಸ್‌ಪಿವಿ ರಚಿಸುವ ಕುರಿತು ಒಡಂಬಡಿಕೆ ಸಲ್ಲಿಸಿ ಕಲಬುರಗಿ ವಿಮಾನ ನಿಲ್ದಾಣವನ್ನು ವಾಣಿಜ್ಯ ಉದ್ದೇಶಕ್ಕೆ ಉಪಯೋಗಿಸಲು ಅನುಮತಿ ನೀಡಬೇಕು ಎಂದು ತಮ್ಮಲ್ಲಿ ವಿನಂತಿಸಿದ್ದಾರೆ. ಮುಂದುವರಿದ ಭಾಗವಾಗಿ ಕರ್ನಾಟಕ ಸರಕಾರದ ಬೆಂಗಳೂರಿನ ಮೂಲಭೂತ ಸೌಕರ್ಯಾಭಿವೃದ್ಧಿ ಇಲಾಖೆ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಕಳೆದ ಮೇ 21ರಂದು ಪತ್ರದ ಮೂಲಕ ಅವಶ್ಯಕವಿರುವ ಕ್ರಮ ತೆಗೆದುಕೊಂಡು ರಾಜ್ಯದ ಅಧಿಕಾರಿಗಳು ಮತ್ತು ಎಎಐದವರು ಚರ್ಚಿಸಿ ಅಂತಿಮಗೊಳಿಸಬೇಕು ಎಂದು ವಿನಂತಿಸಿದ್ದಾರೆ. ಕಾರಣ ಈ ಎಲ್ಲ ಅಂಶಗಳನ್ನು ಅವಲೋಕಿಸಿ ಕಲಬುರಗಿ ವಿಮಾನ ನಿಲ್ದಾಣಕ್ಕೆ ಪರವಾನಗಿ ನೀಡಿ ಸಾರ್ವಜನಿಕರ ಉಪಯೋಗಕ್ಕಾಗಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಹೈದ್ರಾಬಾದ್ ಕರ್ನಾಟಕ ಪ್ರದೇಶ ಸಂವಿಧಾನದ ಅನುಚ್ಛೇದ 371(ಜೆ)ದಡಿ ಭಾರತ ಸರಕಾರದಿಂದ ವಿಶೇಷ ಸ್ಥಾನಮಾನ ಮಂಜೂರು ಮಾಡಿರುವುದರಿಂದ ಹಾಗೂ ವಾಣಿಜ್ಯ ಚಟುವಟಿಕೆಗಳು ಶೀಘ್ರ ಗತಿಯಲ್ಲಿ ಅಭಿವೃದ್ಧಿ ಹೊಂದಲು, ಆದ್ಯತೆ ಮೇರೆಗೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಅನುಮತಿ ನೀಡುವ ಮತ್ತು ಕರ್ನಾಟಕ ಸರಕಾರದ ಜತೆಯಲ್ಲಿ ಎಸ್‌ಪಿವಿ ರಚಿಸುವ ಕುರಿತು ಒಡಂಬಡಿಕೆ ಪ್ರಕ್ರಿಯೆಯನ್ನು ಶೀಘ್ರವಾಗಿ ಅಂತಿಮಗೊಳಿಸುವ ಮೂಲಕ ಈ ಭಾಗದ ಜನರ ಆಶೋತ್ತರಕ್ಕೆ ಸ್ಪಂದಿಸಬೇಕು ಎಂದು ಒತ್ತಾಯಿಸಿದ್ದಾರೆ.