ಕಲಬುರಗಿ: ನಗರ ಹೊರವಲಯದ ಕಲಬುರಗಿ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ಮಟ್ಟದ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಮುಂದಿನ ವರ್ಷದಿಂದ ಅಂತಾರಾಷ್ಟ್ರೀಯ ವಿಮಾನ ಹಾರಾಟ ಮಾಡಬಹುದಾಗಿದೆ ಎಂದು ರಾಜ್ಯ ಮೂಲ ಸೌಕರ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕಪಿಲ್ ಮೋಹನ್ ತಿಳಿಸಿದರು.
ಬೆಂಗಳೂರಿನಿಂದ ಬುಧವಾರ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರು, ವಿಮಾನ ನಿಲ್ದಾಣದಲ್ಲಿನ ಸೌಕರ್ಯಗಳನ್ನು ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಕಲಬುರಗಿಯಿಂದ ಮಧ್ಯ ಏಷ್ಯಾಕ್ಕೆ ಸಾಕಷ್ಟು ಪ್ರಯಾಣಿಕರು ಸಂಚರಿಸುತ್ತಾರೆ. ಹೈದ್ರಾಬಾದ ಅಥವಾ ಮುಂಬೈಗೆ ತೆರಳಿ ಅಲ್ಲಿಂದ ಹೊರದೇಶಕ್ಕೆ ಹೋಗುತ್ತಾರೆ. ಕಲಬುರಗಿ ವಿಮಾನ ನಿಲ್ದಾಣ ದೊಡ್ಡ ವಿಮಾನ ನಿಲ್ದಾಣವಾಗಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸೌಕರ್ಯಗಳನ್ನು ಹೊಂದಿದೆ. ದೇಶ, ವಿದೇಶಕ್ಕೂ ವಿಮಾನ ಹಾರಾಟ ಸಾಮರ್ಥ್ಯ ಹೊಂದಿದೆ ಎಂದು ಹೇಳಿದರು. ಅಂತಾರಾಷ್ಟ್ರೀಯ ವಿಮಾನ ಹಾರಾಟ ನಿಟ್ಟಿನಲ್ಲಿ ಸದ್ಯಕ್ಕೆ ಪಾಸ್‌ಪೋರ್ಟ್ ತಪಾಸಣಾ ಕೇಂದ್ರ, ಕಸ್ಟಮ್ ಇಲಾಖೆ ಮಾತ್ರ ಬೇಕಾಗುತ್ತದೆ. ಉಳಿದಂತೆ ಮುಂದಿನ ಹಂತದಲ್ಲಿ ಅಗತ್ಯ ಸೌಕರ್ಯ ಕಲ್ಪಿಸಲಾಗುವುದು. ಶೇ.80ರಷ್ಟು ಜನರ ಬೇಡಿಕೆ ಇದಾಗಿದೆ. ಈಗಾಗಲೇ ದೇಶಿಯ ವಿಮಾನ ಹಾರಾಟದ ಕನಸು, ಉಡಾನ್ ಯೋಜನೆ ಮೂಲಕ ಸಾಕಾರಗೊಂಡಿದೆ ಎಂದರು.
ಪ್ರಸ್ತಾವನೆ ಸಲ್ಲಿಕೆ: ವಿಮಾನ ನಿಲ್ದಾಣ ಸಾರ್ವಜನಿಕರಿಗೆ, ಉದ್ಯಮಿಗಳಿಗೆ ಅತ್ಯುಪಯುಕ್ತವಾಗಿದೆ. ಖಾಸಗಿ ಕಂಪನಿಗಳ ಬಂಡವಾಳ ಹೂಡಿಕೆಯಿಂದ ವಿಮಾನ ನಿಲ್ದಾಣದ ಸುತ್ತ-ಮುತ್ತಿನ ಪ್ರದೇಶ ಅಭಿವೃದ್ಧಿ ಆಗಲಿದೆ. ಇಲ್ಲಿನ ಕೃಷಿ ಹಾಗೂ ಸ್ಥಳೀಯ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲಿದೆ. ವಿಮಾನ ನಿಲ್ದಾಣದ ಹೊರಗೆ ಅಧಿಕ ಅಭಿವೃದ್ಧಿ ಕಾಣಲಿದೆ. ಐಟಿ ಸೇವೆಗಳು ಹಾಗೂ ಇನ್ನಿತರ ಮಾರುಕಟ್ಟೆ ಸಂಸ್ಥೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತದೆ ಎಂದು ವಿವರಿಸಿದರು.
ವಿಮಾನ ನಿಲ್ದಾಣ ಅಭಿವೃದ್ಧಿಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಸಹಕಾರ ಪಡೆಯಲಾಗುತ್ತಿದೆ. ಈಗಾಗಲೇ ಅನೇಕ ಖಾಸಗಿ ಸಂಸ್ಥೆಗಳು ಬಂಡವಾಳ ಹೂಡಲು ಮುಂದೆ ಬಂದಿದ್ದು, ಸೂಕ್ಷ್ಮವಾಗಿ ಪರಿಶೀಲಿಸಿ ಅವಕಾಶ ನೀಡಲಾಗುತ್ತದೆ. ಪಾರ್ಕಿಂಗ್ , ವಾಣಿಜ್ಯ ಮಳಿಗೆ ಸೌಲಭ್ಯ ಅಭಿವೃದ್ಧಿ ಪಡಿಸಬೇಕಿದ್ದು, ವಿಮಾನ ನಿಲ್ದಾಣ ಸಂಪೂರ್ಣ ಅಭಿವೃದ್ಧಿಯಾಗುವ ನಿಟ್ಟಿನಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.