Advertisement

ಅರಮನೆ ನಗರಿಗೆ ವಿಮಾನಯಾನ ಸೇವೆ

07:35 PM Dec 28, 2019 | |

ಕಲಬುರಗಿ: ಕಳೆದ ನವೆಂಬರ್‌ 22ರಂದು ಲೋಕಾರ್ಪಣೆಗೊಂಡು ಸ್ಟಾರ್‌ ಏರ್‌ ಸಂಸ್ಥೆ ಮೂಲಕ ನಾಗರಿಕ ವಿಮಾನಯಾನ ಸಂಚಾರ ಆರಂಭಿಸಿದ ಕಲಬುರಗಿ ವಿಮಾನ ನಿಲ್ದಾಣದಿಂದ ತಿಂಗಳು ಮುಗಿಯುತ್ತಿದಂತೆ ಅಲಯನ್ಸ್‌ ಏರ್‌ ಸಂಸ್ಥೆಯು ಶುಕ್ರವಾರದಿಂದ ತನ್ನ ನಾಗರಿಕ ವಿಮಾನ ಸೇವೆ ಅಧಿಕೃತವಾಗಿ ಆರಂಭಿಸಿದೆ.

Advertisement

ಶುಕ್ರವಾರ ಬೆಳಗ್ಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಗ್ಗೆ 10:54 ಗಂಟೆಗೆ ಹೊರಟ ಎಟಿಆರ್‌ ಮಾದರಿಯ 72 ಸೀಟುಳ್ಳ 91509 ಸಂಖ್ಯೆಯ ವಿಮಾನವು ಮಧ್ಯಾಹ್ನ 12:50ಕ್ಕೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಭೂಸ್ಪರ್ಶ ಮಾಡಿತು.

ಅಲಯನ್ಸ್‌ ಏರ್‌ ಸಂಸ್ಥೆಯ ವಿಮಾನ ಮೊದಲ ಬಾರಿಗೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರಿಂದ ವಿಮಾನಕ್ಕೆ ನೀರು ಚಿಮ್ಮುವ ಮೂಲಕ ವಾಟರ್‌ ಸಲ್ಯೂಟ್‌ ನೀಡಲಾಯಿತು. ಇದಕ್ಕೂ ಮುನ್ನ ರೈಲಿನಿಂದ ಮೈಸೂರಿಗೆ ಹೋಗಬೇಕೆಂದರೆ 15 ಗಂಟೆಗಳ ಕಾಲ ಸಂಚರಿಸಬೇಕಿತ್ತು. ಆದರೆ ಶುಕ್ರವಾರ ಆರಂಭವಾಗಿರುವ ಮೈಸೂರು-ಬೆಂಗಳೂರು-ಕಲಬುರಗಿ ವಿಮಾನವು ಶರಣರ ನಾಡಿನಿಂದ ಅರಮನೆ ನಗರಕ್ಕೆ ಕೇವಲ ಎರಡು ಗಂಟೆಯಲ್ಲಿ ಸಂಚರಿಸಬಹುದಾಗಿದೆ.

ಅಲಯನ್ಸ್‌ ಏರ್‌ನ ಈ ವಿಮಾನವು ಬೆಳಗ್ಗೆ 6ಗಂಟೆಗೆ ಹೈದ್ರಾಬಾದ್‌ನಿಂದ ಗೋವಾಕ್ಕೆ ಹೊರಟು ಅಲ್ಲಿಂದ ಮೈಸೂರಿಗೆ ಬಂದು, ಅಲ್ಲಿಂದ ಬೆಂಗಳೂರಿಗೆ ಆಗಮಿಸಿ, ಕಲಬುರಗಿಗೆ ಬರುತ್ತದೆ. ಅದೇ ರೀತಿ ಕಲಬುರಗಿಯಿಂದ ಬೆಂಗಳೂರು- ಮೈಸೂರು-ಗೋವಾ-ಹೈದ್ರಾಬಾದ್‌ಗೆ ಮರಳುತ್ತದೆ.

ಅಲಯನ್ಸ್‌ ಏರ್‌ ಸಂಸ್ಥೆ ಬೆಂಗಳೂರು ಮೂಲದ ಮುಖ್ಯ ಪೈಲಟ್‌ ಎ.ಮಾಕನ್‌, ದೆಹಲಿ ಮೂಲದ ಮಹಿಳಾ ಕೋ-ಪೈಲಟ್‌ ಶಾಲು ಸುರಕ್ಷತೆಯಿಂದ ವಿಮಾನವನ್ನು ಲ್ಯಾಂಡ್‌ ಮಾಡಿದರು. ಎಂಜಿನಿಯರ್‌ ಕ್ರಾಂತಿಕುಮಾರ ತಂಡ ಜೊತೆಯಲ್ಲಿತ್ತು. ಬೆಂಗಳೂರಿನಿಂದ ಶಾಸಕ ಬಸವರಾಜ ಮತ್ತಿಮಡು, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಸೇರಿದಂತೆ ವಿಮಾನದಲ್ಲಿ 56 ಪ್ರಯಾಣಿಕರು ಆಗಮಿಸಿದ್ದರು. ಅಷ್ಟೆ ಸಂಖ್ಯೆ ಪ್ರಯಾಣಿಕರು ಇಲ್ಲಿಂದ ಬೆಂಗಳೂರಿಗೆ ಗಗನ ಹಾರಾಟ ಆರಂಭಿಸಿದರು.

Advertisement

ಶಾಸಕ ದತ್ತಾತ್ರೇಯ ಪಾಟೀಲ ಸಿ. ರೇವೂರ, ಬಿ.ಜಿ. ಪಾಟೀಲ, ತಿಪ್ಪಣ್ಣಪ್ಪ ಕಮಕನೂರ, ಬಸವಕಲ್ಯಾಣ ಶಾಸಕ ಬಿ. ನಾರಾಯಣರಾವ್‌, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ, ಕಲಬುರಗಿ ವಿಮಾನ ನಿಲ್ದಾಣದ ಎಎಏ ನಿರ್ದೇಶಕ ಜ್ಞಾನೇಶ್ವರ ರಾವ್‌, ಡಿಸಿಪಿ ಕಿಶೋರ ಬಾಬು, ಅಲಯನ್ಸ್‌ ಏರ್‌ ಸಂಸ್ಥೆಯ ವಾಣಿಜ್ಯ ವಿಭಾಗದ ಮುಖ್ಯಸ್ಥ ಮನು ಆನಂದ, ವಾಣಿಜ್ಯ ವಿಭಾಗದ ಮ್ಯಾನೇಜರ್‌ ಶಿವಾನಿ ವಿಜಾನಿ, ಕಲಬುರಗಿ ವಿಮಾನ ನಿಲ್ದಾಣದ ಮ್ಯಾನೇಜರ್‌ ಉಪೇಂದ್ರ ಸಿಂಗ್‌ ಶೇಖಾವತ್‌, ಸ್ಥಳೀಯ ಜನಪ್ರತಿನಿ ಧಿಗಳು, ಅಧಿಕಾರಿಗಳು ಹಾಗೂ ವಿಮಾನದ ಪೈಲಟ್‌ ಮತ್ತು ಯಾತ್ರಿಕರನ್ನು ಸ್ವಾಗತಿಸಿದರು.

ಪ್ರಸ್ತುತ ಸ್ಟಾರ್‌ ಏರ್‌ ಸಂಸ್ಥೆಯು ಕಳೆದ ನವೆಂಬರ್‌ 22ರಿಂದ ಸೋಮವಾರ, ಶುಕ್ರವಾರ ಮತ್ತು ಶನಿವಾರ ಹೀಗೆ ವಾರದಲ್ಲಿ ಮೂರು ದಿನ ಕಲಬುರಗಿ-ಬೆಂಗಳೂರು ಮಧ್ಯೆ ವಿಮಾನ ಸೇವೆ ನೀಡುತ್ತಿದೆ. ಇದೀಗ ಅಲಯನ್ಸ್‌ ಏರ್‌ ಸಂಸ್ಥೆಯು ಕಲಬುರಗಿ-ಬೆಂಗಳೂರು-ಮೈಸೂರು ಮಧ್ಯೆ ಸಂಚಾರ ಆರಂಭಿಸಿದೆ. ಇದು ಎರಡನೇ ವಿಮಾನ ಸೌಲಭ್ಯವಾಗಿದ್ದು, ಹೆಚ್ಚಿನ ಅನೂಕೂಲವಾಗಿದೆ.

ಶುಭ ಕೋರಿಕೆ: ಕಲಬುರಗಿ-ಬೆಂಗಳೂರು ಮಧ್ಯದ ಆರಂಭಿಕ ಹಾರಾಟದಲ್ಲಿ ಪ್ರಯಾಣಿಸಲು ಪ್ರಥಮವಾಗಿ ಟಿಕೆಟ್‌ ಬುಕ್‌ ಮಾಡಿದ ಕೋಮಲ ಪಾಟೀಲ ಅವರಿಗೆ ಗಣ್ಯರು ಬೋರ್ಡಿಂಗ್‌ ಪಾಸ್‌, ಹೂಗುತ್ಛ ನೀಡಿ ಶುಭ ಕೋರಿದರು.

Advertisement

Udayavani is now on Telegram. Click here to join our channel and stay updated with the latest news.

Next