Advertisement

ಸ್ಲಂಗಳಲ್ಲಿ ಜನೌಷಧಿ ಕೇಂದ್ರ ತೆರೆಯಿರಿ

11:50 AM Mar 08, 2020 | Naveen |

ಕಲಬುರಗಿ: ಬಡಜನರ ಪಾಲಿಗೆ ಸಂಜೀವಿನಿಯಾಗಿರುವ ಜನೌಷಧಿ ಕೇಂದ್ರಗಳು ಪ್ರತಿ ಸ್ಲಂ, ಕಾಲೋನಿ, ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೆರೆಯುವಂತಾಗಲಿ ಎಂದು ಸಂಸದ ಡಾ| ಉಮೇಶ ಜಾಧವ ಹೇಳಿದರು.

Advertisement

ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಕೇಂದ್ರ ಸರ್ಕಾರದ ಪೋಷಣ ಅಭಿಯಾನ ಮತ್ತು ಜನೌಷಧಿ ದಿವಸ್‌ ನಾಲ್ಕನೇ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮದ ನೇರ ಪ್ರಸಾರ ವ್ಯವಸ್ಥೆ ಕಾರ್ಯಕ್ರಮಕ್ಕೂ ಮುನ್ನ ಪ್ರಾಸ್ತಾವಿಕವಾಗಿ ಅವರು ಮಾತನಾಡಿದರು. ದುಡಿದು ತಿನ್ನುವ ಬಡಜನರು ಮಾರಣಾಂತಿಕ ಕಾಯಿಲೆಗೆ ತುತ್ತಾದರೆ ಆಸ್ಪತ್ರೆ, ಔಷಧಿ ಎಂದು ಅಲೆಯಬೇಕಾಗುತ್ತದೆ. ಮೊದಲೇ ಆರ್ಥಿಕವಾಗಿ ಕುಗ್ಗಿರುವವರಿಗೆ ಇದು ಗಾಯದ ಮೇಲೆ ಬರೆ ಎಳೆದಂತೆ. ಹೀಗಾಗಿ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಔಷಧಿಗಳು ಸರ್ವರಿಗೂ ಸಿಗಬೇಕು ಎನ್ನುವ ಸದುದ್ದೇಶದಿಂದ ಕೇಂದ್ರ ಸರ್ಕಾರವು ಜನೌಷಧಿ ಕೇಂದ್ರಗಳನ್ನು ತೆರೆದಿದೆ. ಇಲ್ಲಿ ಶೇ.50 ರಿಂದ 75ರ ವರೆಗೆ ಕಡಿಮೆ ದರದಲ್ಲಿ ಔಷಧಿಗಳು ಸಿಗುತ್ತವೆ ಎಂದರು.

250ರೂ. ಬೆಲೆಯ ಎಂಟಿಬಯೋಟಿಕ್‌ 10 ಮಾತ್ರೆಗೆ ಜನೌಷಧಿ  ಕೇಂದ್ರಗಳಲ್ಲಿ 51ರೂ. ಗಳಿಗೆ ನೀಡಲಾಗುತ್ತದೆ. ಅದೇ ರೀತಿ 2000ರೂ. ಬೆಲೆಯ ಆ್ಯಂಟಿ ಕ್ಯಾನ್ಸರ್‌ 10 ಮಾತ್ರೆ 350ರೂ. ಗಳಿಗೆ, 80ರೂ. ಬೆಲೆಯ ಪೇನ್‌ ಕಿಲ್ಲರ್‌ 10 ಮಾತ್ರೆ 12ರೂ. ಗಳಿಗೆ, 100ರೂ. ಬೆಲೆಯ ಬೇಬಿ ಕೇರ್‌ 5 ಪ್ಯಾಡ್‌ 25ರೂ. ಗಳಿಗೆ, 1000 ರೂ. ಬೆಲೆಯ 200 ಗ್ರಾಂ ಪ್ರೊಟೀನ್‌ ಪೌಡರ್‌ 225 ರೂ. ಗಳಿಗೆ ಲಭ್ಯವಿದೆ. ಹೀಗೆ ಅನೇಕ ಔಷ ಧಿಗಳು ಕಡಿಮೆ ದರದಲ್ಲಿ ಸಿಗಲಿದ್ದು, ಬಡಜನರು ಇದರ ಲಾಭ ಪಡೆಯಬೇಕು ಎಂದು ಹೇಳಿದರು.

ಮಹಿಳೆಯರ ಮತ್ತು ವಿದ್ಯಾರ್ಥಿನಿಯರ ಆರೋಗ್ಯ ದೃಷ್ಟಿಯಿಂದ ಜನೌಷಧಿ ಕೇಂದ್ರಗಳಲ್ಲಿ ನ್ಯಾಪ್‌ಕಿನ್‌ ಪ್ಯಾಡ್‌ 1ರೂ.ಗೆ ನೀಡಲಾಗುತ್ತಿದೆ. ಶಾಲೆ-ಕಾಲೇಜು, ಗ್ರಾಮಗಳಲ್ಲಿ ಅಂಗನವಾಡಿ- ಆಶಾ ಕಾರ್ಯಕರ್ತೆಯರು ಇದರ ಬಗ್ಗೆ ಆಂದೋಲನದ ಮಾದರಿಯಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದರು.

ಗುಣಮಟ್ಟದ ಮಾತ್ರೆ: ಕೆಲವರು ಅನಾವಶ್ಯಕವಾಗಿ ಕಡಿಮೆ ದರದ ಜನೌಷಧಿ ಮಾತ್ರೆಗಳು ಗುಣಮಟ್ಟದ್ದಿಲ್ಲವೆಂದು ಜನರನ್ನು ತಪ್ಪು ದಾರಿಗೆ ಎಳೆಯಲು ಬಯಸುತ್ತಿದ್ದಾರೆ. ಇದ್ಯಾವುದಕ್ಕೂ ಕಿವಿಗೊಡಬೇಡಿ ಎಂದು ಮನವಿ ಮಾಡಿದ ಅವರು, ಜನೌಷಧಿ ಮಾತ್ರೆಗಳು ಜಿ.ಎಂ.ಪಿ ದೃಢೀಕೃತ ಮಾತ್ರೆಗಳಾಗಿದ್ದು, ಶೇ.100ರಷ್ಟು ಗುಣಮಟ್ಟದಿಂದ ಕೂಡಿದೆ ಎಂದು ಸ್ಪಷ್ಟಪಡಿಸಿದರು.

Advertisement

ನೇರ ಪ್ರಸಾರ ವ್ಯವಸ್ಥೆ: ಜನೌಷಧಿ  ದಿವಸದ ನಾಲ್ಕನೇ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಷಣ ಅಲಿಸಲು ಕಲಬುರಗಿಯಲ್ಲಿಯೂ ನೇರ ಪ್ರಸಾರದ ವ್ಯವಸ್ಥೆ ಕಲ್ಪಿಸಲಾಗಿತ್ತು. ನೇರ ಪ್ರಸಾರದಲ್ಲಿ ದಿಲ್ಲಿಯಿಂದ ವಿಡಿಯೋ ಕಾನ್ಫ ರೆನ್ಸ್‌ ಮೂಲಕ ದೇಶದ ವಿವಿಧ ಸ್ಥಳಗಳಲ್ಲಿನ ಜನೌಷ ಧಿ ಕೇಂದ್ರಗಳ ಆಪರೇಟರ್‌ ಮತ್ತು ಸಾರ್ವಜನಿಕರೊಂದಿಗೆ ಪ್ರಧಾನಮಂತ್ರಿಗಳು ಮುಕ್ತ ಸಂವಾದ ನಡೆಸಿ ಯೋಜನೆಗಳ
ಸಾಧಕ-ಬಾಧಕಗಳ ವಿವರಣೆ ಪಡೆದರು.

ಶಾಸಕರಾದ ದತ್ತಾತ್ರೇಯ ಪಾಟೀಲ, ಬಸವರಾಜ ಮತ್ತಿಮಡು, ವಿಧಾನ ಪರಿಷತ್‌ ಸದಸ್ಯ ಬಿ.ಜಿ. ಪಾಟೀಲ, ಅಪರ ಜಿಲ್ಲಾಧಿಕಾರಿ ಡಾ| ಶಂಕರ ವಣಿಕ್ಯಾಳ್‌, ಜಿಲ್ಲಾ ಪಂಚಾಯತ್‌ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಎಂ.ಎ. ಜಬ್ಟಾರ್‌, ಇ.ಎಸ್‌.ಐ.ಸಿ ಮೆಡಿಕಲ್‌ ಕಾಲೇಜಿನ ಡಾ| ನಾಗರಾಜ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next