Advertisement

ಕಕ ಸಂಘದ ಕಚೇರಿ ಉದ್ಘಾಟನೆ

11:58 AM Jun 10, 2020 | Naveen |

ಕಲಬುರಗಿ: ಹೈದ್ರಾಬಾದ ಕರ್ನಾಟಕವನ್ನು ಕಲ್ಯಾಣ ಕರ್ನಾಟಕವೆಂದು ಮರುನಾಮಕರಣ ಮಾಡಲಾಗಿದ್ದು, ಜನರ ಕಲ್ಯಾಣಕ್ಕಾಗಿ ಹಲವಾರು ಕೆಲಸಗಳು ನಡೆಯಲಿವೆ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತಿಳಿಸಿದರು.

Advertisement

ನಗರದ ಐವಾನ್‌-ಎ-ಶಾಹಿ ರಸ್ತೆಯ ಲೋಕೋಪಯೋಗಿ ಇಲಾಖೆ ಕಟ್ಟಡದಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘದ ನೂತನ ಕಚೇರಿಯನ್ನು ಮಂಗಳವಾರ ಬೆಂಗಳೂರಿನಿಂದಲೇ ಆನ್‌ಲೈನ್‌ ಮೂಲಕ ಸಸಿಗೆ ನೀರೆರೆದು ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ನಿಜ ಅರ್ಥದಲ್ಲಿ ಕಲ್ಯಾಣ ಕರ್ನಾಟಕವನ್ನು ಸಾಕಾರಗೊಳಿಸಲು ಆಯವ್ಯಯದಲ್ಲಿ 500 ಕೋಟಿ ರೂ. ಗಳನ್ನು ಈ ಸಂಘಕ್ಕೆ ಮೀಸಲಿಡಲಾಗಿದೆ. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಮಾಜಿ ಸಂಸದ ಬಸವರಾಜ ಪಾಟೀಲ ಸೇಡಂ ನೇತೃತ್ವದಲ್ಲಿ 15 ಜನರ ಆಡಳಿತ ಮಂಡಳಿಯು ಪ್ರದೇಶದ ಆರು ಜಿಲ್ಲೆಗಳ ಸರ್ವಾಂಗೀಣ ಅಭಿವೃದ್ಧಿಗೆ ಸಂಘ ಶ್ರಮಿಸಲಿದೆ. ಒಟ್ಟಾರೆ ಜನರ ಕಲ್ಯಾಣಕ್ಕಾಗಿ ಸಂಘ ಕಾರ್ಯನಿರ್ವಹಿಸಲಿದೆ ಎಂದರು.

ಕೃಷಿ, ಶಿಕ್ಷಣ, ಸಾಹಿತ್ಯ, ಸ್ವಯಂ ಉದ್ಯೋಗ, ಆರೋಗ್ಯ, ಯುವಜನ ಮತ್ತು ಮಹಿಳಾ ಸಬಲೀಕರಣ, ಗ್ರಾಮ ಸಬಲೀಕರಣ ಹೀಗೆ ವಿವಿಧ ಕ್ಷೇತ್ರದಲ್ಲಿ ಪ್ರಗತಿಗೆ ಸಂಘವು ನಿರಂತರವಾಗಿ ಕಾರ್ಯನಿರ್ವಹಿಸಲಿದೆ. 3000 ಸಂಪರ್ಕ ಕೇಂದ್ರಗಳ ಮೂಲಕ ಆರೋಗ್ಯ, ವಿಚಾರ ಸಂಕಿರಣ, ಅರಿವು, ಸ್ವಯಂ ಉದ್ಯೋಗ ಕಲ್ಪಿಸುವ ಮೂಲಕ ಜನರ ಜೀವನ ಶೈಲಿಯಲ್ಲಿ ಅಮೂಲಗಾಗ್ರ ಬದಲಾವಣೆಗೆ ಸಂಘವು ನಾಂದಿ ಹಾಡಲಿದೆ ಎಂದು ಹೇಳಿದರು.

ಇತ್ತ ಕಲಬುರಗಿಯಿಂದ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ಮಾತನಾಡಿ, ಮುಖ್ಯಮಂತ್ರಿಗಳ ಆಶಯದಂತೆ ಮುಂದಿನ ಮೂರು ವರ್ಷಗಳಲ್ಲಿ ಸಂಘವು ಈ ಪ್ರದೇಶದಲ್ಲಿ ಮಾನವನ ಸಂಪೂರ್ಣ ವಿಕಸನಕ್ಕೆ ಅನೇಕ ಕಾರ್ಯಕ್ರಮ ಹಮ್ಮಿಕೊಂಡು ಪ್ರಶಂಸಾರ್ಹ ರೀತಿಯಲ್ಲಿ ಕೆಲಸ ಮಾಡಲಿದೆ. ಸಹಕಾರ ಕಾಯ್ದೆಯಡಿ ರಚನೆಯಾಗಿರುವ ಮಂಡಳಿಗೆ ಸರ್ಕಾರವು 500 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದು, ಕೆಕೆಆರ್‌ ಡಿಬಿ ಮಂಡಳಿಗೆ ನೀಡುವ ಅನುದಾನದಲ್ಲಿ ಇದು ಸೇರಿಲ್ಲ ಎಂದು ಸ್ಪಷ್ಪಪಡಿಸಿದರು.

ಬಸವಕಲ್ಯಾಣವನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಬೇಕು ಎಂಬುದು ಮುಖ್ಯಮಂತ್ರಿಗಳ ಆಶಯವಾಗಿದ್ದು, ಈ ನಿಟ್ಟಿನಲ್ಲಿಯೂ ಸಂಘ ಹೆಜ್ಜೆ ಇಡಲಿದೆ. ಬಸವಕಲ್ಯಾಣದಲ್ಲಿ 500 ಕೋಟಿ ರೂ. ವೆಚ್ಚದಲ್ಲಿ ಭವ್ಯ ಅನುಭವ ಮಂಟಪ ನಿರ್ಮಾಣ ಕಾರ್ಯ ಸಂಘದ ಮುಂದಿರುವ ಪ್ರಮುಖ ಕಾರ್ಯಕ್ರಮವಾಗಿದೆ. ಸಂಘ-ಸಂಸ್ಥೆಗಳು ಸೇರಿದಂತೆ ಜನಸಾಮಾನ್ಯರ ಸಹಕಾರ ಪಡೆದು ಈ ಪ್ರದೇಶದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.

Advertisement

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ವಿಜಯಪುರ ಜ್ಞಾನ ಯೋಗಾಶ್ರಮದ ಪೂಜ್ಯ ಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ಬಸವರಾಜ ಪಾಟೀಲ ಸೇಡಂ ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ಸಂಘವು ಕಾರ್ಯನಿರ್ವಹಿಸಲಿದೆ. ಇದು ಬಸವಣ್ಣನ ಭೂಮಿ, ಕೊಡುವುದುಂಟು ಕೇಳುವುದಲ್ಲ. ಇದರ ಮೂಲಾರ್ಥದಲ್ಲಿ ಸಂಘವು ಕಾರ್ಯನಿರ್ವಹಿಸಬೇಕಿದೆ. ಈ ಪ್ರದೇಶದಲ್ಲಿ ಬಡವ ಮತ್ತು ಕೊರತೆ ಎನ್ನುವ ಶಬ್ದ ಉದ್ಭವಿಸದಂತೆ ಸಂಘವು ಕಾರ್ಯನಿರ್ವಹಿಸಬೇಕಿದೆ. ಹೃದಯ ವೈಶಾಲ್ಯತೆ, ತಲೆಯಲ್ಲಿ ಶ್ರೀಮಂತಿಕೆ ಹಾಗೂ ಕೈನಲ್ಲಿ ಸದಾ ಕೆಲಸಗಳಿದ್ದಲ್ಲಿ ಅಸಾಧ್ಯವಾದುದನ್ನು ಸಾಧಿಸಬಹುದು ಎಂದು ಹಿತವಚನ ನುಡಿದರು. ಬಸವಣ್ಣ ಸೇರಿದಂತೆ ಇನ್ನುಳಿದ ಶರಣರು ನಡೆದಾಡಿದ ಈ ನಾಡಲ್ಲಿ ಬೇರೆ ಪ್ರದೇಶದ ಜನರು ವಾಸ ಮಾಡಲು ಹಾತೊರೆಯಬೇಕು. ಈ ನಿಟ್ಟಿನಲ್ಲಿ ಇಲ್ಲಿ ಸುಂದರ ಮತ್ತು ಸಂಪದ್ಭರಿತ ನಾಡನ್ನು ನಿರ್ಮಿಸಬೇಕಿದೆ ಎಂದು ಆಶೀರ್ವಚನ ನೀಡಿದರು.

ಸಂಸದ ಡಾ| ಉಮೇಶ ಜಾಧವ, ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ, ಸೇಡಂನ ಶ್ರೀ ಸದಾಶಿವ ಸ್ವಾಮೀಜಿ, ಜಿಲ್ಲಾಧಿಕಾರಿ ಶರತ್‌ ಬಿ., ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ|ಪಿ. ರಾಜಾ, ಸಂಘದ ಅಡಳಿತ ಮಂಡಳಿ ಸದಸ್ಯರಾದ ಈರೇಶ ಇಲ್ಲೂರ್‌, ಶ್ರೀನಿವಾಸ ನಂದಾಪುರ, ವಿ.ಎಂ. ಭೂಸನೂರಮಠ, ಲೀಲಾ ಕಾರಟಗಿ, ಪ್ರಭುರಾಜ ಸಿದ್ದರಾಮಪ್ಪ, ಶಿವರಾಮೇಗೌಡ, ಬಾಬುಲಾಲ್‌ ಜೈನ್‌, ಪ್ರಭುದೇವ ಕಪ್ಗಲ್‌, ರೇವಣಸಿದ್ಧಪ್ಪ ಜಾಲಾದಿ, ವಿ.ಶಾಂತರೆಡ್ಡಿ, ತಿಪ್ಪಣ್ಣರೆಡ್ಡಿ ಕೋಲಿ, ಮಂಜುಳಾ ಡೊಳ್ಳೆ, ದುರ್ದನಾ ಬೇಗಂ, ಹಣಮಂತ ರಾಣಪ್ಪ ತೆಗನೂರ, ನೀಲಕಂಠರಾಯ ಎಲ್ಹೇರಿ ಇದ್ದರು. ಸಂಘದ ಕಾರ್ಯದರ್ಶಿ ಭೀಮಾಶಂಕರ ತೆಗ್ಗೆಳ್ಳಿ ಸ್ವಾಗತಿಸಿದರು, ಅ ಧೀನ ಕಾರ್ಯದರ್ಶಿ ಮಲ್ಲಿಕಾರ್ಜುನ ರೆಡ್ಡಿ ಪಾಟೀಲ ನಿರೂಪಿಸಿದರು, ಭಾರತಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next