ಕಲಬುರಗಿ:” ಕಳೆದ ವರ್ಷ ಕಬ್ಬು ಜಾಸ್ತಿ ಇದ್ದ ಸಮಯದಲ್ಲಿ ಕಾರ್ಖಾನೆಗೆ ಹೋಗಿ ಕಾಲಿಗೆ ಬಿದ್ದರೂ ಕಬ್ಬು ತೆಗದುಕೊಂಡು ಹೋಗಲಿಲ್ಲ. ಆದರೆ ಈ ವರ್ಷ ಕಬ್ಬು ಕಡಿಮೆ ಪ್ರದೇಶದಲ್ಲಿರುವುದರಿಂದ ಕಾರ್ಖಾನೆಯವರು ಆ ಕಾರ್ಖಾನೆಗೆ ಹಾಕಬೇಡಿ, ನಮ್ಮಲ್ಲಿಯೇ ಹಾಕಿ ಎನ್ನುವುದು ರೈತರನ್ನು ಶೋಷಣೆ ಮಾಡುವಂತಾಗಿದೆ. ಪ್ರಮುಖವಾಗಿ ಕಾರ್ಖಾನೆ ಕಾರ್ಯವ್ಯಾಪ್ತಿ ತೆಗದು ಹಾಕಿ” – ಇದು ಜಿಲ್ಲೆಯ ಅಫಜಲಪುರ ತಾಲೂಕಿನ ಹಾವಳಗಾ ಬಳಿಯ ರೇಣುಕಾ ಸಕ್ಕರೆ ಕಾರ್ಖಾನೆ ವಿರುದ್ದ ರೈತರ ಆಕ್ರೋಶದ ಧ್ವನಿ.
ಸೋಮವಾರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಜಿಲ್ಲಾಡಳಿತ ಹಾಗೂ ರೈತರ ಸಭೆಯಲ್ಲಿ ರೇಣುಕಾ ಸಕ್ಕರೆ ಕಾರ್ಖಾನೆ ಅಡಳಿತ ವಿರುದ್ದ ಅದರಲ್ಲೂ ಕಾರ್ಯಕ್ಷೇತ್ರದ ವ್ಯಾಪ್ತಿಯೊಳಗೆ ರೈತರು ಕಡ್ಡಾಯವಾಗಿ ರೇಣುಕಾ ಕಾರ್ಖಾನೆಗೆ ಹಾಕಬೇಕೆಂದು ನ್ಯಾಯಾಲಯ ಮೋರೆ ಹೋಗಿದ್ದು ಸರಿಯಲ್ಲ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ರೈತರ ನೆರವಿಗೆ ಬರಬೇಕೆಂದು ವಿನಂತಿಸಿದರು.
ಕಳೆದ ವರ್ಷ ಕಬ್ಬು ಜಾಸ್ತಿ ಇದ್ದ ಸಮಯದಲ್ಲಿ ರೇಣುಕಾ ಸಕ್ಕರೆ ಕಾರ್ಖಾನೆಯವರು ರೈತರ ಕಬ್ಬು ಪಡೆಯಲು ಮುಂದಾಗಲಿಲ್ಲ. ಆ ಸಮಯದಲ್ಲಿ ಅಫಜಲಪುರ ತಾಲೂಕಿನ ಚಿಣಮಗೇರಾ ಬಳಿಯ ಕೆಪಿಆರ್ ಸಕ್ಕರೆ ಕಾರ್ಖಾನೆಗೆ ಕಬ್ಬು ಹಾಕಲಾಗಿದೆ. ಆದರೆ ಈ ವರ್ಷ ಕಬ್ಬು ಕಡಿಮೆ ಇರುವ ಹಿನ್ನೆಲೆಯಲ್ಲಿ ಕಬ್ಬು ತಮ್ಮ ಕಾರ್ಖಾನೆ ಹಾಕಬೇಕೆಂದು ರೇಣುಕಾ ಸಕ್ಕರೆ ಕಾರ್ಖಾನೆಯವರು ನ್ಯಾಯಾಲಯದ ಮೋರೆ ಹೋಗಿದ್ದಾರೆ. ಕಾರ್ಖಾನೆಯವರು ತಮ್ಮ ಅನುಕೂಲಸಿಂಧುದಂತೆ ನಡೆದುಕೊಳ್ಳುತ್ತಿದ್ದಾರೆ. ಇದಕ್ಕೆಲ್ಲ ಬ್ರೇಕ್ ಹಾಕಬೇಕೆಂದು ರೈತರು ಮನವಿ ಮಾಡಿದರು. ರೈತರು ಸ್ವತಂತ್ರವಾಗಿ ಯಾವುದೇ ಕಾರ್ಖಾನೆಗೆ ಕಬ್ಬು ಹಾಕಲು ಅನುಮತಿ ನೀಡಬೇಕು. ಕಾರ್ಯವ್ಯಾಪ್ತಿ ಎಂಬ ನಿಯಮ ತೆಗೆದು ಹಾಕಿ ಎಂದು ರೈತರೆಲ್ಲ ಒಕ್ಕೊರಲಿನಿಂದ ಮನವಿ ಮಾಡಿದರು.
ಕಷ್ಟಪಟ್ಟು ಕಬ್ಬು ಬೆಳೆಯಲಾಗುತ್ತದೆ. ಆದರೆ ಕಾರ್ಖಾನೆಯವರ ಕಾನೂನು ಸಂಘರ್ಷದಿಂದ ರೈತ ಶೋಷಣೆಗೆ ಒಳಗಾಗುವಂತಾಗಿದೆ. ಕಾರ್ಯವ್ಯಾಪ್ತಿ ಬೇಡ. ನಾವು ಬೆಂಗಳೂರಿಗೂ ಹಾಕ್ತೇವೆ. ನಮಗ್ ಕಾರ್ಯವ್ಯಾಪ್ತಿ ತೆಗೆದು ಹಾಕಿ. ದ್ವಿಪಕ್ಷೀಯ ಒಪ್ಪಂದ ಪ್ರಕಾರ ಕಬ್ಬು ಕಟಾವು ನಿಗದಿತ ದಿನಾಂಕದೊಳಗೆ ಒಂದು ರೂ ಪಡೆಯದೆ(ಟೋಲಿಗೆ ಹಣ) ಕಬ್ಬು ಪಡೆಯಬೇಕು. ಆದರೆ ಇದನ್ನೆಲ್ಲ ಗಾಳಿಗೆ ತೂರಿ ರೈತರನ್ನು ಶೋಷಣೆ ಮಾಡಲಾಗುತ್ತಿದೆ. ಟ್ರಾನ್ಸ್ ಫೋರ್ಟ ಖರ್ಚನ್ನು ಯಥೇಚ್ಚವಾಗಿ ರೈತರ ಮೇಲೆ ಹಾಕಲಾಗುತ್ತಿದೆ. 10 ಸಾವಿರ ರೂ ನೀಡಿ ಒಪ್ಪಂದ ಮಾಡಿಕೊಳ್ಳುವುದು ಯಾವ ನ್ಯಾಯ? ಒಟ್ಟಾರೆ ಸಕ್ಕರೆ ಕಾರ್ಖಾನೆಗಳ ಶೋಷಣೆ ತಪ್ಪಿಸಬೇಕೆಂದರು.
ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರು ರೈತರ ಅಭಿಪ್ರಾಯವನ್ನೇ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಸಭೆಯಲ್ಲಿ ಪ್ರಕಟಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಆಯುಕ್ತೆ ಮಮತಾ ಕುಮಾರಿ, ಆಹಾರ, ನಾಗರಿಕ ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಶಾಂತಗೌಡ ಗುಣಕಿ ಉಪಸ್ಥಿತರಿದ್ದರು.