Advertisement

ಕಲಬುರಗಿ: 148 ಗ್ರಾಮಗಳಿಗೆ ‘ಭೀಮ’ಪ್ರವಾಹ ಭೀತಿ! ನದಿ ಪಾತ್ರದ ಜನರ ಸ್ಥಳಾಂತರಕ್ಕೆ ಸೂಚನೆ

07:14 PM Oct 15, 2020 | sudhir |

ಕಲಬುರಗಿ: ಜಿಲ್ಲೆಯಲ್ಲಿ ಮಳೆಯ ಆರ್ಭಟ ಕಡಿಮೆಯಾದರೂ ಭೀಮ ನದಿಯ ಪ್ರವಾಹ ಭೀತಿ ಎದುರಾಗಿದೆ. ಮಹಾರಾಷ್ಟ್ರದಿಂದ ನೀರು ಬಿಡುಗಡೆದಿಂದಾಗಿ ನದಿ ಪಾತ್ರದ ಭಾಗದ 148 ಗ್ರಾಮಗಳಿಗೆ ಪ್ರವಾಹ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಬೀದರ್-ಬೆಂಗಳೂರು-ಹುಬ್ಬಳ್ಳಿ ನಡುವಿನ ಹೆದ್ದಾರಿಯಲ್ಲಿರುವ ಜೇವರ್ಗಿ ತಾಲೂಕಿನ ಕಟ್ಟಿಸಂಗಾವಿ ಬಳಿ ಸೇತುವೆ ಮೇಲೆ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ.

Advertisement

ಭೀಮ ಜಲಾನಯನ ಪ್ರದೇಶಗಳಲ್ಲಿ ವ್ಯಾಪಕ ಮಳೆ ಸುರಿಯುತ್ತಿದ್ದು, ಮಹಾರಾಷ್ಟ್ರದ ಉಜನಿ ಮತ್ತು ವೀರ್ ಜಲಾಶಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡಲಾಗಿದೆ. ಇದರಿಂದ ಅಫಜಲಪುರ ತಾಲೂಕಿನ ಸೊನ್ನಾ ಬ್ಯಾರೇಜ್ ಗೆ ನೀರು ಹರಿದು ಬರುತ್ತಿದ್ದು, ಸಂಪೂರ್ಣವಾಗಿ ಭರ್ತಿಯಾಗಿದೆ. 5.11 ಲಕ್ಷ ಕ್ಯೂಸೆಕ್ ನೀರು ಒಳ ಹರಿವು ಇದ್ದು, ಅಷ್ಟೇ ಪ್ರಮಾಣದ ನೀರು ಭೀಮ ನದಿಗೆ ಹರಿಸಲಾಗುತ್ತಿದೆ. ಅಪಾಯ ಮಟ್ಟಕ್ಕೆ ನದಿ ಬಂದು ತಲುಪಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಕಟ್ಟಿಸಂಗಾವಿ ಸೇತುವೆಯಲ್ಲಿ ಸಂಚಾರ ರದ್ದುಗೊಳಿಸಲಾಗಿದೆ.

ಮಹಾರಾಷ್ಟ್ರದಿಂದ ನದಿಗೆ ಒಟ್ಟಾರೆ 7.50 ಲಕ್ಷ ಕ್ಯೂಸೆಕ್ ನೀರು ಹರಿದು ಬರುವ ಸಾಧ್ಯತೆ. ಹೀಗಾಗಿ ಕಲಬುರಗಿ, ಅಫಜಲಪುರ, ಜೇವರ್ಗಿ, ಚಿತ್ತಾಪುರ, ಸೇಡಂ ತಾಲೂಕುಗಳಲ್ಲಿ ಕಟ್ಟೆಚ್ಚರ ವಹಿಸಲು ಜಿಲ್ಲಾಡಳಿತ ಕ್ರಮ ವಹಿಸಿದೆ. ಈಗಾಗಲೇ ನದಿ ಪಾತ್ರದಲ್ಲಿ ಬರುವ 50ಕ್ಕೂ ಹೆಚ್ಚು ಗ್ರಾಮಗಳಿಗೆ ಪ್ರವಾಹದ ಹೊಡೆತ ತಟ್ಟಿದೆ. ಇನ್ನೂ ಸುಮಾರು 40 ಗ್ರಾಮಗಳಿಗೆ ಪ್ರವಾಹದ ಭೀತಿ ದಟ್ಟವಾಗಿದೆ. ಒಟ್ಟಾರೆ ಮುನ್ನೆಚ್ಚರಿಕೆ ಕ್ರಮವಾಗಿ 148 ಗ್ರಾಮಗಳ ನದಿ ಪಾತ್ರದ ಜನರನ್ನು ಸ್ಥಳಾಂತರಕ್ಕೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.

ಇದನ್ನೂ ಓದಿ:ಅಕ್ಟೋಬರ್ 19ರಿಂದ ಆಲಮಟ್ಟಿ ಶಾಸ್ತ್ರಿ ಜಲಾಶಯ, ಉದ್ಯಾವನ ಸಾರ್ವಜನಿಕ ವೀಕ್ಷಣೆಗೆ ಮುಕ್ತ

Advertisement

ಅಫಜಲಪುರ ತಾಲೂಕಿನ ದಿಕ್ಸಂಗಾ, ಜೇವರ್ಗಿ (ಕೆ), ಜೇವರ್ಗಿ (ಬಿ), ನಂದರಗಿ, ಅಳ್ಳಗಿ, ಗೌರ, ಬಂಕಲಗಾ, ಮಣ್ಣೂರು ಸೇರಿ 12 ಗ್ರಾಮಗಳು ಸಂಪೂರ್ಣ ಜಲಾವೃತಗೊಂಡಿವೆ. ಕಲಬುರಗಿ ತಾಲೂಕಿನ ಹಾಗರಗುಂಡಗಿ, ಫೀರೋಜಾಬಾದ್, ಜೇವರ್ಗಿ ತಾಲೂಕಿನ ಇಟಗಾ, ಚಿತ್ತಾಪುರ ತಾಲೂಕಿನ ಕಡಬೂರು, ಸನ್ನತಿ, ಕೊಳ್ಳೂರು, ಇಂಗಳಗಿ, ಕುಂದನೂರ, ಚಾಮನೂರು, ಮಾರಡಗಿ, ತುನ್ನೂರ ಗ್ರಾಮಗಳ ನದಿ ಪಾತ್ರದ ಜನರನ್ನು ಶಾಲಾ ಕಟ್ಟಡಗಳು ಸೇರಿ ಸುರಕ್ಷಿತಾ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ.

ಪ್ರವಾಹ ಸ್ಥಳಗಳಿಗೆ ಎಸಿ ರಾಮಚಂದ್ರ ಗಡದೆ ಸೇರಿ ಆಯಾ ತಾಲೂಕುಗಳ ತಹಸೀಲ್ದಾರ್ ಗಳು ಭೇಟಿ ಮಾಡಿ ಪರಿಶೀಲನೆ ಮಾಡಿದರು. ಕಲಬುರಗಿ ತಾಲೂಕಿನ ನದಿ ಶಿರೂರ, ಸರಡಗಿ, ಮೈನಾಳ ಸೇರಿ 9 ಗ್ರಾಮಗಳಿಗೆ ನದಿ ನೀರು ನುಗ್ಗುವ ಸಾಧ್ಯತೆ ಇದೆ. ನದಿ ದಂಡೆಯ ಈ ಜನರನ್ನು ಸ್ಥಳಾಂತರಕ್ಕೆ ಕ್ರಮ ವಹಿಸಲಾಗಿದೆ. ಕಳೆದ 48 ಗಂಟೆಗಳಿಂದ ಎರಡು ಎನ್ ಡಿ ಆರ್ ಎಫ್ ತಂಡಗಳು, ಅಗ್ನಿಶಾಮಕ ಮತ್ತು ಪೊಲೀಸರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

ಇದನ್ನೂ ಓದಿ:ಯಾರತ್ತ ಗುರಿ ಅಮೆರಿಕ, ಭಾರತ:ಯುದ್ಧಕ್ಕೆ ಸಿದ್ಧತೆ ನಡೆಸಿ…ಚೀನಾ ಸೇನೆಗೆ ಅಧ್ಯಕ್ಷ ಕ್ಸಿ ಸೂಚನೆ

8 ಸಾವಿರ ಜನರು ಅತಂತ್ರ: ಭಾರಿ ಮಳೆಯಿಂದ ಗ್ರಾಮಗಳು ಜಲಾವೃತಗೊಂಡು ಮನೆ-ಮಠ ಕಳೆದುಕೊಂಡು ಎಂಟು ಸಾವಿರಕ್ಕೂ ಅಧಿಕ ಜನರು ಅತಂತ್ರರಾಗಿದ್ದಾರೆ. ನೀರಿನಲ್ಲಿ ಸಿಲುಕಿದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ. ಜಿಲ್ಲಾದ್ಯಂತ 50 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಕಡಬೂರು ಸೇರಿ ಹಲವು ಕಡೆಗಳಲ್ಲಿ ಜನರು ಮನೆಯ ಛಾವಣಿ ಮೇಲೆ ಪ್ರಾಣ ರಕ್ಷಿಸಿಕೊಂಡಿದ್ದಾರೆ. ಕಲಬುರಗಿ ತಾಲೂಕಿನ ಗುಂಡಗುರ್ತಿ ಬಳಿ ಸೇತುವೆಗೆ ಹಾನಿಯಾಗಿ ಕಲಬುರಗಿಯಿಂದ ಸೇಡಂ, ಹೈದರಾಬಾದ್ ಗೆ ಹೋಗುವ ರಸ್ತೆ ಸಂಚಾರ ಸಹ ಬಂದ್ ಆಗಿದೆ.

ಮತ್ತೊಂದು ಸಾವು: ರಣಭೀಕರ ಮಳೆಗೆ ಜಿಲ್ಲೆಯಲ್ಲಿ ಮತ್ತೊಂದು ಬಲಿಯಾಗಿದೆ. ಕಮಲಾಪುರ ತಾಲೂಕಿನಲ್ಲಿ ಬುಧವಾರ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದ 32 ವರ್ಷದ ಕುಪ್ಪಣ್ಣ ಶವವಾಗಿ ಪತ್ತೆಯಾಗಿದ್ದಾರೆ. ಜವಳಗಾ ಗ್ರಾಮದ ಕುಪ್ಪಣ್ಣ ಬುಧವಾರ ಸಂಜೆ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿದ್ದ. ಬುಧವಾರ ಓರ್ವ ಯುವಕ ಮತ್ತು ವೃದ್ಧೆ ಬಲಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next