Advertisement

ಮಣ್ಣಿನ ಗಣಪನ ಮೋಡಿ

09:54 AM Sep 01, 2019 | Naveen |

ರಂಗಪ್ಪ ಗಧಾರ
ಕಲಬುರಗಿ:
ಗಣಪತಿ ಹಬ್ಬಕ್ಕೆಂದು ಎಲ್ಲೆಡೆ ಗಮನ ಸೆಳೆಯುತ್ತಿದ್ದ ಬಣ್ಣಬಣ್ಣದ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ (ಪಿಒಪಿ) ಗಣೇಶ ಮೂರ್ತಿಗಳು ತಲೆ ಎತ್ತಿದ್ದರೂ, ಇದಕ್ಕೆ ಮೀರಿಸುವಂತೆ ಪರಿಸರಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳು ಮನೆ-ಮನೆಗೂ ತಲುಪಲು ಸಜ್ಜಾಗಿವೆ.

Advertisement

ಪಿಒಪಿ ಗಣೇಶ ಮೂರ್ತಿ ನಿಷೇಧಿಸಲು ಸರ್ಕಾರದ ಆದೇಶವಿದೆ. ಆದರೆ, ಇದಕ್ಕೆ ಕಡಿವಾಣ ಹಾಕಬೇಕಾದ ಅಧಿಕಾರಿಗಳ ಜಾಣಕುರುಡುತನ ಪ್ರದರ್ಶಿಸುತ್ತಿದ್ದಾರೆ. ಇದರಿಂದ ಪಿಒಪಿ ಮೂರ್ತಿಗಳು ನಗರದ ಪ್ರಮುಖ ರಸ್ತೆಗಳಲ್ಲೂ ವಿಜೃಂಭಿಸುತ್ತಿವೆ.

ಇದರ ನಡುವೆ ಸ್ವದೇಶಿ ಚಿಂತನೆ ಮತ್ತು ಪರಿಸರ ಕಾಳಜಿಯುಳ್ಳ ‘ಸ್ವಗ್ರಾಮ’ ಎನ್ನುವ ಸಮಾನ ಮನಸ್ಕರ ಯುವಕರ ತಂಡ ಮಣ್ಣಿನ ಗಣೇಶನ ಮೂರ್ತಿಗಳ ಪ್ರತಿಷ್ಠಾಪನೆ ಬಗ್ಗೆ ಜನರಲ್ಲಿ ಅರಿವು ಮತ್ತು ಪ್ರೋತ್ಸಾಹಿಸುವ ಕಾರ್ಯದಲ್ಲಿ ತೊಡಗಿದೆ.

ಪ್ರಭು ಪಾಟೀಲ, ಸಂಗಮೇಶ ಮಡಿವಾಳ, ಸುನೀಲ ಕಣ್ಣಿ, ಕೃಷ್ಣ ಕೆಂಭಾವಿ, ಮಹೇಶ ಚವ್ಹಾಣ, ಅನಿಲ ತಂಬಾಕೆ ಹೀಗೆ ಅನೇಕ ಯುವಕರು ನಗರದಲ್ಲಿ ಮಣ್ಣಿನ ಗಣೇಶ ಮೂರ್ತಿಗಳ ಮಾರಾಟ ಮಾಡುತ್ತಿದ್ದಾರೆ.

280ರಿಂದ 30 ಸಾವಿರಕ್ಕೆ ಏರಿದ ಮಾರಾಟ: ಕಳೆದ ನಾಲ್ಕು ವರ್ಷದಿಂದ ‘ಸ್ವಗ್ರಾಮ’ ತಂಡದ ಯುವಕರು ಮಣ್ಣಿನ ಗಣಪನನ್ನು ಪಸರಿಸುವಲ್ಲಿ ನಿರತರಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕೊಣ್ಣೂರು ಗ್ರಾಮದಿಂದ ಶುದ್ಧ ಮಣ್ಣಿನ ಗಣೇಶ ಮೂರ್ತಿಗಳನ್ನು ತಂದು ಮಾರಾಟ ಮಾಡುತ್ತಿದ್ದಾರೆ. ಮೊದಲ ವರ್ಷ ಕೇವಲ 280 ಗಣೇಶ ಮೂರ್ತಿಗಳು ಮಾರಾಟವಾಗಿದ್ದವು. ಎರಡನೇ ವರ್ಷ ಮೂರು ಸಾವಿರ ಹಾಗೂ ಮೂರನೇ ವರ್ಷದಲ್ಲಿ ಹತ್ತು ಸಾವಿರ, ಪ್ರಸ್ತಕ ವರ್ಷ ಈಗಾಗಲೇ ಸುಮಾರು 30 ಸಾವಿರ ಮಣ್ಣಿನ ಮೂರ್ತಿಗಳು ಮಾರಾಟವಾಗಿವೆ.

Advertisement

ಈ ಬಾರಿ ‘ಮನೆ ಮನೆಗೂ ಮಣ್ಣಿನ ಗಣಪ’ ಎನ್ನುವ ಅಭಿಯಾನ ಹಮ್ಮಿಕೊಂಡಿದ್ದೇವೆ. ಜತೆಗೆ ನಮ್ಮೊಂದಿಗೆ ಧರಣಿ ಸ್ವದೇಶಿ ಕೇಂದ್ರ, ಸ್ವಾಭಿಮಾನಿ ಸ್ವದೇಶಿ ಕೇಂದ್ರ, ಗಂಗಾಧರ ವಿಶ್ವಕರ್ಮ ಅವರ ಸಂತೋಷ ಟ್ರೆಡರ್ ನವರು ಕೈ ಜೋಡಿಸುತ್ತಿದ್ದಾರೆ. ಪ್ರಸ್ತಕ ವರ್ಷ ಜಿಲ್ಲಾದ್ಯಂತ 60 ಕಡೆಗಳಲ್ಲಿ ಮಣ್ಣಿನ ಗಣೇಶ ಮೂರ್ತಿಗಳನ್ನು ಮಾರಾಟ ಮಾಡಲಾಗುತ್ತಿದೆ ಎನ್ನುತ್ತಾರೆ ತಂಡದ ಪ್ರಮುಖ ಪ್ರಭು ಪಾಟೀಲ.

ಕಲಬುರಗಿ ನಗರದಲ್ಲೇ 22 ಸಾವಿರ ಮಣ್ಣಿನ ಮೂರ್ತಿಗಳು ಮಾರಾಟವಾಗಿವೆ. ಸೇಡಂ-1,000, ಚಿತ್ತಾಪುರ-700, ಆಳಂದ, ಅಫಜಲಪುರ, ಜೇವರ್ಗಿಯಲ್ಲಿ ಸುಮಾರು 500 ಮಣ್ಣಿನ ಮೂರ್ತಿಗಳು ಮಾರಾಟವಾಗಿವೆ. ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳು ನಮ್ಮಲ್ಲಿ ದೊರಕುತ್ತವೆ ಎನ್ನುತ್ತಾರೆ ಸಂಗಮೇಶ ಮಡಿವಾಳ.

Advertisement

Udayavani is now on Telegram. Click here to join our channel and stay updated with the latest news.

Next