Advertisement

ಜಿಲ್ಲಾದ್ಯಂತ ಮೂರು ದಿನ ನಿಷೇಧಾಜ್ಞೆ

12:33 PM Mar 20, 2020 | Naveen |

ಕಲಬುರಗಿ: ಕೊರೊನಾ ಸೋಂಕು ಹರಡುವಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ಗುರುವಾರ ರಾತ್ರಿ 8 ಗಂಟೆಯಿಂದಲೇ ಜಿಲ್ಲಾದ್ಯಂತ ಸೆಕ್ಷನ್‌ 144ರಡಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಶರತ್‌ ಬಿ. ತಿಳಿಸಿದರು.

Advertisement

ನಗರದ ವಾರ್ತಾ ಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೊರೊನಾ ಸೋಂಕು ತಡೆಗಟ್ಟಲು ಅಘೋಷಿತ ಬಂದ್‌ ಜಾರಿಯಲ್ಲಿದೆ. ಅಗತ್ಯವಾಗಿದ್ದರೆ ಮಾತ್ರ ಮನೆಯಿಂದ ಹೊರಗೆ ಬನ್ನಿ ಎಂದು ಸಾರ್ವಜನಿಕರಿಗೆ ಮನವರಿಕೆ ಮಾಡಲಾಗಿದೆ. ಮತ್ತಷ್ಟು ಮುನ್ನೆಚ್ಚರಿಕೆ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಹೆಚ್ಚು ಜನರು ಅನವಶ್ಯಕವಾಗಿ ಹೊರಗೆ ಬರಬೇಡಿ ಎಂದು ಮನವಿ ಮಾಡಿದರು.

ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಅಗತ್ಯ ವಸ್ತುಗಳ ಖರೀದಿಗೆ ನಿರ್ಬಂಧ ಇರುವುದಿಲ್ಲ. ಮನೆಗೆ ಬೇಕಾದ ದಿನಸಿ ವಸ್ತುಗಳು, ಔಷಧಿ ಅಂಗಡಿ, ಆಸ್ಪತ್ರೆಗಳು ಎಂದಿನಂತೆ ಇರುತ್ತವೆ. ಈಗಾಗಲೇ ಹೇಳಿರುವಂತೆ ಯಾವುದೇ ರೀತಿಯ ವಾಣಿಜ್ಯ ಚಟುವಟಿಕೆಗಳನ್ನು ನಡೆಸುವಂತಿಲ್ಲ ಎಂದು ಎಚ್ಚರಿಸಿದರು.

4720 ಮನೆಗಳ ಸರ್ವೇ: ಕೊರೊನಾ ಹರಡದಂತೆ ನೋಡಿಕೊಳ್ಳಲು ಮೃತ ವೃದ್ಧನ ಮನೆಯಿರುವ ವಾರ್ಡ್‌ ನಂ. 30ರ ಜೊತೆಗೆ ವಾರ್ಡ್‌ ನಂ.14 ಸೇರಿ ಎರಡು ವಾರ್ಡ್‌ಗಳನ್ನು ಕಂಟೇನ್‌ಮೆಂಟ್‌ ಝೋನ್‌ (ನಿರ್ಬಂಧಿತ ಪ್ರದೇಶ) ಎಂಬುದಾಗಿ ಘೋಷಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಇದುವರೆಗೆ ಮೃತ ವ್ಯಕ್ತಿ ಹಾಗೂ ಕೊರೊನಾ ಪಾಸಿಟಿವ್‌ ರೋಗಿಗಳ ಮನೆ ಸುತ್ತಮುತ್ತ ಒಟ್ಟಾರೆ 4720 ಮನೆಗಳ ಸರ್ವೇ ಮಾಡಲಾಗಿದೆ. ಆ ಮನೆಗಳ ಸುತ್ತ ಮುನ್ನೆಚ್ಚರಿಕೆ ಕ್ರಮವಾಗಿ ಸ್ಕ್ರಿನಿಂಗ್‌ ಮತ್ತು ಸ್ಯಾನಿಟೈಜೇಷನ್‌ ಕೂಡ ಮಾಡಲಾಗಿದ್ದು, ಅರಿವು ಮೂಡಿಸುವ ಕಾರ್ಯಕ್ರಮ ನಡೆಯುತ್ತಿದೆ ಎಂದರು.

Advertisement

ಜಿಲ್ಲೆಯಿಂದ ಹೋಗುವ ಮತ್ತು ಒಳ ಬರುವ ಖಾಸಗಿ ಬಸ್‌ ಗಳ ಸಂಚಾರಕ್ಕೆ ತಡೆ ನೀಡಲಾಗಿದೆ. ಮಹಾರಾಷ್ಟ್ರಕ್ಕೆ ತೆರಳುವ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಹೈದ್ರಾಬಾದ್‌ಗೆ ತೆರಳುವ ಬಸ್‌ಗಳನ್ನು ಕಡಿತಗೊಳಿಸಲಾಗುವುದು. ಜತೆಗೆ ಕೆಲ ದಿನಗಳ ಮಟ್ಟಿಗೆ ಇತರ ಮಾರ್ಗಗಳ ಸಂಚಾರವನ್ನು ಸ್ಥಗಿತಗೊಳಿಸಲಾಗುವುದು ಎಂದು ವಿವರಿಸಿದರು.

ಚೆಕ್‌ಪೋಸ್ಟ್‌: ಮಹಾರಾಷ್ಟ್ರದ ಜನರು ಕಲಬುರಗಿ ಜಿಲ್ಲೆಗೆ ಪ್ರವೇಶಿಸದಂತೆ ಕ್ರಮವಹಿಸಲು ಚೆಕ್‌ಪೋಸ್ಟ್‌ ನಿರ್ಮಿಸಿದ್ದು, ಅಗತ್ಯ ಸಿಬ್ಬಂದಿ ಮತ್ತು ಪರಿಕರಗಳನ್ನು ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಗ್ರಾಮೀಣ ಪ್ರದೇಶದಿಂದ ನಗರಕ್ಕೆ ಆಗಮಿಸುವ ರಸ್ತೆಗಳಲ್ಲಿ ಗ್ರಾಮೀಣ ಪ್ರದೇಶದ ಸಾರ್ವಜನಿಕರು ವಿನಾಕಾರಣ ನಗರ ಪ್ರವೇಶಿಸದಂತೆ ನೋಡಿಕೊಳ್ಳಲಾಗುವುದು. ಚೆಕ್‌ ಪೋಸ್ಟ್‌ಗಳಲ್ಲಿ ಸಿಬ್ಬಂದಿಗೆ ನೀರಿನ ವ್ಯವಸ್ಥೆ, ವಿದ್ಯುತ್‌ ಸಂಪರ್ಕ, ಟೇಬಲ್‌, ಟಾರ್ಚ್‌, ಮೊಬೈಲ್‌ ಚಾರ್ಜಿಂಗ್‌ ಪಾಯಿಂಟ್‌ ವ್ಯವಸ್ಥೆ ಮಾಡಲಾಗುತ್ತದೆ ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಡಾ| ಪಿ. ರಾಜಾ, ಮಹಾನಗರ ಪಾಲಿಕೆಯ ಆಯುಕ್ತ ರಾಹುಲ ಪಾಂಡ್ವೆ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌, ಡಿಸಿಪಿ ಕಿಶೋರ ಬಾಬು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next