ಕಲಬುರಗಿ: ಗಂಡನ ಮನೆಯವರ ಕಿರುಕುಳ ಹಿನ್ನೆಲೆಯಲ್ಲಿ ಗೃಹಿಣಿಯೊಬ್ಬರು ತನ್ನ ಇಬ್ಬರು ಮಕ್ಕಳೊಂದಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ನಗರದಲ್ಲಿ ನಡೆದಿದೆ. ಈ ದುರಂತದಲ್ಲಿ ತಾಯಿ ಮತ್ತು ಎರಡು ವರ್ಷದ ಮಗಳು ಮೃತಪಟ್ಟಿದ್ದರೆ, ಮೂರು ವರ್ಷದ ಬಾಲಕ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.
ದೀಕ್ಷಾ ವಸಂತಶರ್ಮಾ (26) ಮತ್ತು ಸಿಂಚನಾ (2) ಎಂಬುವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸುಟ್ಟು ಗಾಯಗಳಿಂದ ಬಳಲುತ್ತಿರುವ ಬಾಲಕ ಧನಂಜಯ (3)ಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೂಲತಃ ಕಾಳಗಿ ತಾಲೂಕಿನ ದೀಕ್ಷಾ ಅವರನ್ನು ಇಲ್ಲಿನ ಪಂಚಶೀಲ ನಗರದ ವಸಂತ ಶರ್ಮಾಗೆ ಐದು ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಆದರೆ, ದೀಕ್ಷಾಗೆ ಗಂಡನ ಮನೆಯವರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು ಮತ್ತು ತವರು ಮನೆಗೆ ಕಳುಹಿಸುತ್ತಿರಲಿಲ್ಲ ಎನ್ನಲಾಗಿದೆ.
ಸೋಮವಾರ ಕೂಡ ತವರು ಮನೆಗೆ ಹೋಗಲು ದೀಕ್ಷಾ ತಯಾರಿ ಆಗಿದ್ದಳು. ಆದರ, ಗಂಡನ ಮನೆಯಲ್ಲಿ ಅವಕಾಶ ನೀಡಿರಲಿಲ್ಲ ಎಂದು ಹೇಳಲಾಗಿದೆ. ಇದರಿಂದ ಬೇಸತ್ತು ಮಧ್ಯಾಹ್ನ ತನ್ನ ಇಬ್ಬರು ಮಕ್ಕಳೊಂದಿಗೆ ಮನೆಯಲ್ಲೇ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ. ಪರಿಣಾಮ ತಾಯಿ ಮತ್ತು ಮಗಳು ಸಾವನ್ನಪ್ಪಿದ್ದಾರೆ. ಸದ್ಯ ಮಗ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ 72 ರೋಹಿಂಗ್ಯಾಗಳು : ಗಡಿಪಾರು ಮಾಡುವ ಯೋಜನೆ ಇಲ್ಲ
ಎರಡನೇ ಮಹಡಿಯ ಮನೆಯ ಕೊಠಡಿಗೆ ಹೋಗಿ ದೀಕ್ಷಾ ಬೆಂಕಿ ಹಚ್ಚಿಕೊಂಡಿದ್ದಾರೆ. ಈ ಸಮಯದಲ್ಲಿ ಅತ್ತೆ ನೆಲ ಮಹಡಿಯಲ್ಲಿ ಇದ್ದರು ಎಂದು ತಿಳಿದು ಬಂದಿದೆ.
ವಿಷಯ ತಿಳಿದು ದೀಕ್ಷಾ ತವರು ಮನೆಯವರು ಹಾಗೂ ಸ್ಪೇಷನ್ ಬಜಾರ್ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಈ ಘಟನೆಗೆ ಗಂಡನ ಮನೆಯವರೇ ಕಾರಣ. ಅವರೇ ಬೆಂಕಿ ಕೊಲೆ ಮಾಡಿದ್ದಾರೆ ಎಂದು ದೀಕ್ಷಾ ಕುಟುಂಬದವರು ಆರೋಪಿಸಿ, ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಸ್ಪೇಷನ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.