ಕಲಬುರಗಿ: ಬಿಜೆಪಿ ಜಿಲ್ಲಾ ಗ್ರಾಮಾಂತರ ಘಟಕ ಹಾಗೂ ನಗರ ಅಧ್ಯಕ್ಷರ ಪದಗ್ರಹಣಕ್ಕಾಗಿ ನಗರದ ಮುಖ್ಯ ರಸ್ತೆಗಳಲ್ಲಿ ನೆಡಲಾಗಿದ್ದ ಬಿಜೆಪಿ ಪಕ್ಷದ ಧ್ವಜಗಳನ್ನು ಪಾಲಿಕೆ ಅಧಿಕಾರಿಗಳು ತೆರವುಗೊಳಿಸಿದ್ದಾರೆ.
ಅನುಮತಿ ಪಡೆಯದಿದ್ದಕ್ಕೆ ಪಾಲಿಕೆ ಅಧಿಕಾರಿಗಳು ಪಾಲಿಕೆ ವಾಹನಗಳನ್ನು ತಂದು ನಗರದ ಮುಖ್ಯ ರಸ್ತೆಗಳಲ್ಲಿ ಹಾಕಲಾಗಿದ್ದ ಬಿಜೆಪಿ ಪಕ್ಷದ ಧ್ವಜಗಳನ್ನು ತೆರವು ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷದ ಹತಾಶ ಮನೋಭಾವನೆಯಿಂದ ಬಿಜೆಪಿ ಪಕ್ಷದ ಧ್ವಜ ತೆರವುಗೊಳಿಸಲು ಮುಂದಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ ಹಾಗೂ ಕಲಬುರಗಿ ನಗರಾಧ್ಯಕ್ಷ ಚಂದು ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ ಕಾಂಗ್ರೆಸ್ ಸಮಾವೇಶದಲ್ಲಿ ಕಾಂಗ್ರೆಸ್ ಧ್ವಜವೂ ಅನುಮತಿ ಪಡೆಯದೆ ಹಾಕಿದ್ದಕ್ಕೆ ದಂಡ ಹಾಕಲಾಗಿತ್ತು. ತಮಗೂ ದಂಡ ಹಾಕಬೇಕಿತ್ತು ಎಂದು ಹೇಳಿದರು.
ಅನುಮತಿ ಪಡೆಯಲು ಪಾಲಿಕೆಗೆ ಪತ್ರ ಕೊಡಲಾಗಿದೆ. ರಜೆ ಇದ್ದ ಕಾರಣ ವಿಳಂಬವಾಗಿದೆ. ನಮಗೂ ದಂಡ ಹಾಕಿ ಬಿಜೆಪಿ ಸಮಾವೇಶ ಸುಗಮವಾಗಿ ನಡೆಯಲು ಅವಕಾಶ ನೀಡಬೇಕಿತ್ತು. ಹಿಂದಿನಿಂದ ಕಾಂಗ್ರೆಸ್ ಆಟವಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ವಿಜಯೇಂದ್ರ ಅವರು ಪಕ್ಷದ ಅಧ್ಯಕ್ಷರಾದ ನಂತರ ಕಂಡು ಬರುತ್ತಿರುವ ವ್ಯಾಪಕ ಬೆಂಬಲ ಸಹಿಸದ ಕಾಂಗ್ರೆಸ್ ವಿಕೃತಿ ಮನಸ್ಸಿನಿಂದ ಪಕ್ಷದ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.