ಕಲಬುರಗಿ: ನಗರದ ಕೇಂದ್ರ ಗ್ರಂಥಾಲಯದಲ್ಲಿ ಓದುಗರಿಗೆ ಸ್ಥಳಾಭಾವದ ಸಮಸ್ಯೆ ಕಾಡುತ್ತಿದೆ. ಸಾಕಷ್ಟು ಜನರು, ವಿದ್ಯಾರ್ಥಿಗಳಿಗೆ ಸ್ಥಳ ಸಿಗದೇ ನೆಲದ ಮೇಲೆ ಮತ್ತು ಪುಸ್ತಕಗಳನ್ನಿಡುವ ರ್ಯಾಕ್‌ಗಳ ಮಧ್ಯೆ ಕುಳಿತು ಓದುವಂತಹ ಪರಿಸ್ಥಿತಿ ಇದೆ.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜಗತ್ ವೃತ್ತದಲ್ಲಿರುವ ಕೇಂದ್ರ ಗ್ರಂಥಾಲಯ ಮತ್ತು ವಿವಿಧ ಕಡೆಗಳಲ್ಲಿ 17 ಶಾಖಾ ಗ್ರಂಥಾಲಯಗಳು ಇವೆ. ಕೇಂದ್ರ ಗ್ರಂಥಾಲಯವು ನಿತ್ಯ ನೂರಾರು ಜನರ ಜ್ಞಾನದಾಹ ನೀಗಿಸುತ್ತಿದೆ. ದಿನ ಪ್ರತಿಕೆಗಳು, ವಾರ, ಮಾಸ ಪತ್ರಿಕೆಗಳು ಮತ್ತು ಪುಸ್ತಕಗಳನ್ನು ಓದುವವರು ಭೇಟಿ ನೀಡುತ್ತಾರೆ.
14977 ಸದಸ್ಯರು: ಕೇಂದ್ರ ಗ್ರಂಥಾಲಯ ಹಾಗೂ ಶಾಖಾ ಗ್ರಂಥಾಲಯಗಳು ಸೇರಿದಂತೆ ಒಟ್ಟು 14977 ಸದಸ್ಯರಿದ್ದಾರೆ. ಕೇಂದ್ರ ಗ್ರಂಥಾಲಯಕ್ಕೆ ಅಧಿಕ ಸಂಖ್ಯೆಯಲ್ಲಿ ಓದುಗರು ಇದ್ದಾರೆ. ಸದಸ್ಯತ್ವ ಹೊಂದಿರುವ, ಸದಸ್ಯತ್ವ ಇಲ್ಲದವರೂ ಸೇರಿ ಪ್ರತಿದಿನ 700ಕ್ಕೂ ಅ ಧಿಕ ಓದುಗರು ಬರುತ್ತಾರೆ. ಕೇಂದ್ರ ಗ್ರಂಥಾಲಯದಲ್ಲಿ ಪುಸ್ತಕ ಮತ್ತು ಪತ್ರಿಕೆಗಳಿಗೆ ಪ್ರತ್ಯೇಕ ವಿಭಾಗ ಇದೆ. 49 ದಿನ ಪತ್ರಿಕೆಗಳು ಮತ್ತು 33 ವಾರ, ಮಾಸ ಪತ್ರಿಕೆಗಳನ್ನು ಹಾಕಿಸಲಾಗುತ್ತದೆ. ಕನ್ನಡ, ಇಂಗ್ಲಿಷ್, ಉರ್ದು, ಹಿಂದಿ ಮತ್ತು ಮರಾಠಿ ಪತ್ರಿಕೆಗಳು ಬರುತ್ತವೆ. ಸಾಹಿತ್ಯ ಮತ್ತು ಸ್ಪರ್ಧಾತ್ಮಕ ಪುಸ್ತಕಗಳು ಸೇರಿದಂತೆ ಕೇಂದ್ರ ಗ್ರಂಥಾಲಯದಲ್ಲಿ ಒಟ್ಟು 50 ಸಾವಿರಕ್ಕೂ ಅಧಿಕ ಪುಸ್ತಕಗಳು ಓದಲು ಲಭ್ಯ ಇವೆ. ದಿನ ಪತ್ರಿಕೆಗಳನ್ನು ಓದಲೆಂದೇ ಸರಿ ಸುಮಾರು 400 ಜನರು ಬರುತ್ತಾರೆ. ಪುಸ್ತಕಗಳ ಅಧ್ಯಯನ ಮಾಡಲು ಅಂದಾಜು 300 ಮಂದಿ ಭೇಟಿ ಕೊಡುತ್ತಾರೆ. ಅದರಲ್ಲೂ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹೆಚ್ಚಾಗಿ ಬರುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವ ಅನೇಕರಿಗೆ ಗ್ರಂಥಾಲಯವೇ ಅಧ್ಯಯನ ಕೇಂದ್ರ. ಪಿಡಿಒ, ಎಸ್‌ಡಿಎ, ಎಫ್‌ಡಿಎಯಿಂದ ಹಿಡಿದು ಕೆಎಸ್‌ಎ ಮತ್ತು ಯುಐಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಅಭ್ಯಾಸ ಮಾಡುವವರು ಇಲ್ಲಿಗೆ ಭೇಟಿ ಕೊಡುತ್ತಾರೆ.
ಹೀಗೆ ನೂರಾರು ವಿದ್ಯಾರ್ಥಿಗಳು, ನಾಗರಿಕರು ಇಂದಿಗೂ ದಿನ ಪತ್ರಿಕೆ, ಪುಸ್ತಕ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ಅಧ್ಯಯನಕ್ಕಾಗಿ ಕೇಂದ್ರ ಗ್ರಂಥಾಲಯವನ್ನೇ ಅವಲಂಬಿಸಿದ್ದಾರೆ. ಇದರ ನಡುವೆ ಗ್ರಂಥಾಲಯದ ಸದಸ್ಯತ್ವ ಹೊಂದಿದವರಿಗೆ ಪುಸ್ತಕಗಳನ್ನು ಮನೆಗೆ ತೆಗೆದುಕೊಂಡು ಹೋಗುವ ಅವಕಾಶವನ್ನು
ನೀಡಲಾಗುತ್ತದೆ. ಆದರೆ, ಹಲವರಿಗೆ ಕುಳಿತುಕೊಳ್ಳಲು ಆಸನಗಳೇ ಸಿಗುವುದಿಲ್ಲ. ಕೆಲಮೊಮ್ಮೆ ಸ್ಥಳ ಸಿಗದೆ ಹಿಂದಿರುಗಿದ ನಿದರ್ಶನಗಳು ಇವೆ ಎನ್ನುತ್ತಾರೆ ನಿತ್ಯ ಗ್ರಂಥಾಲಯಕ್ಕೆ ಬರುವವರು.
ಪರಿಷ್ಕೃತ ಪುಸ್ತಕಗಳ ಕೊರತೆ: ಗ್ರಂಥಾಲಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದುವ ವಿದ್ಯಾರ್ಥಿಗಳು ಸಂಖ್ಯೆಯೇ ಅಧಿಕವಾಗಿರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳ ಸಮಯದಲ್ಲಂತೂ ವಿದ್ಯಾರ್ಥಿಗಳಿಂದ ಗ್ರಂಥಾಲಯ ತುಂಬಿರುತ್ತದೆ. ಇಂತಹ ಸಂದರ್ಭದಲ್ಲಿ ಸ್ಪರ್ಧಾತ್ಮಕ ಪುಸ್ತಕಗಳ ಕೊರತೆ ಉಂಟಾಗುತ್ತದೆ. ಅಲ್ಲದೇ, ಪರಿಷ್ಕೃತ ಪುಸ್ತಕಗಳು ಲಭ್ಯ ಇರುವುದಿಲ್ಲ ಎನ್ನುತ್ತಾರೆ ಪರೀಕ್ಷೆಗೆ ತಯಾರಿ ನಡೆಸುವ ವಿದ್ಯಾರ್ಥಿಗಳು.
ಸ್ವಂತ ಪುಸ್ತಕಗಳಿಗೆ ಅವಕಾಶ: ಗ್ರಂಥಾಲಯಕ್ಕೆ ಬಂದವರು ತಮಗೆ ಬೇಕಾದ ಪುಸ್ತಕಗಳನ್ನು ಕೇಳುತ್ತಾರೆ. ಇಲ್ಲವೇ, ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಕೆಲ ಸಂದರ್ಭದಲ್ಲಿ ಒಂದೇ ರೀತಿಯ ಪುಸ್ತಕಗಳನ್ನು ಓದುವವರು ಇರುತ್ತಾರೆ. ಇದರಿಂದ ಕೆಲವೊಮ್ಮೆ ಸಮಸ್ಯೆಯಾಗುತ್ತದೆ. ಹೀಗಾಗಿ, ಸ್ವಂತ ಪುಸ್ತಕಗಳನ್ನು ತಂದು ಗ್ರಂಥಾಲಯದಲ್ಲಿ ಕುಳಿತು ಓದಲು ಅವಕಾಶ ಕಲ್ಪಿಸಿಕೊಡಲಾಗುತ್ತದೆ ಎನ್ನುವುದು ಅಧಿಕಾರಿಗಳ ಅಂಬೋಣವಾಗಿದೆ.