Advertisement

‘ನೀರಾ’ಅನುಮತಿಗಾಗಿ ಸರ್ಕಾರಕ್ಕೆ ಒತ್ತಡ

11:21 AM Nov 04, 2019 | |

ಕಲಬುರಗಿ: ಈಡಿಗ ಸಮಾಜದ ಕುಲ ಕಸುಬಾದ ನೀರಾ ಇಳಿಸಲು ಅನುಮತಿ ಹಾಗೂ ಸಮುದಾಯ ಪ್ರಗತಿಗಾಗಿ ನಿಗಮ ಮಂಡಳಿ ಸ್ಥಾಪಿಸಬೇಕೆಂದು ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಲಾಗುವುದು ಎಂದು ಆಳಂದ ಕ್ಷೇತ್ರದ ಬಿಜೆಪಿ ಶಾಸಕ ಸುಭಾಷ ಗುತ್ತೇದಾರ ಹೇಳಿದರು.

Advertisement

ನಗರದ ವಿಶ್ವೇಶ್ವರ ಭವನದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 165ನೇ ಜಯಂತ್ಯುತ್ಸವ ನಿಮಿತ್ತ ರಾಜ್ಯ ಆರ್ಯ ಈಡಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ರವಿವಾರ ಹಮ್ಮಿಕೊಂಡಿದ್ದ ಆರ್ಯ ಈಡಿಗ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರಿಗೆ ಹಮ್ಮಿಕೊಳ್ಳಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಈಡಿಗ ಸಮುದಾಯವು ಆರ್ಥಿಕ ಮತ್ತು ಸಾಮಾಜಿಕವಾಗಿ ತೀರ ಹಿಂದುಳಿದಿದೆ. ಅದರಲ್ಲೂ ಕುಲ ಕಸುಬು ನೀರಾ ಇಳಿಸುವುದನ್ನು ಸರ್ಕಾರ ನಿಲ್ಲಿಸಿದ್ದರಿಂದ ಕೆಲಸ ಕಳೆದುಕೊಂಡ ಸಮಾಜದವರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.

ಸಮುದಾಯ ಸುಧಾರಣೆ ಹಾಗೂ ಜನರ ಉದ್ಯೋಗ ಕಲ್ಪಿಸಲು ನಿಟ್ಟಿನಲ್ಲಿ ಕುಲ ಕಸುಬು ನೀರಾ ಇಳಿಸುವುದಕ್ಕೆ ಅನುಮತಿ ನೀಡಬೇಕು. ಸರ್ವಾಂಗೀಣ ಅಭಿವೃದ್ಧಿಗಾಗಿ ಆರ್ಯ ಈಡಿಗ ಅಭಿವೃದ್ಧಿ ನಿಗಮ ಸ್ಥಾಪಿಸುವುದು ಹಾಗೂ ಸಮುದಾಯದ ವಿವಿಧ ಬೇಡಿಕೆ ಈಡೇರಿಸಲು ಸರ್ಕಾರದ ಮೇಲೆ ಒತ್ತಡ ಹಾಕುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ ಮಾತನಾಡಿ, ಈಡಿಗ ಸಾಮುದಾಯವು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿದೆ. ಆದ್ದರಿಂದ ಈ ಹಿಂದೆಯೇ ಪ್ರತ್ಯೇಕ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪಿಸಲು ಸರ್ಕಾರಕ್ಕೆ ಕೋರಲಾಗಿದೆ. ಈಗಿನ ರಾಜ್ಯ ಸರ್ಕಾರ ಸಮುದಾಯದ ಭಾವನೆಗಳಿಗೆ ಸ್ಪಂದಿಸಿ ಶೀಘ್ರವೇ ಮಂಡಳಿ ರಚನೆಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

Advertisement

ಆರ್ಯ ಈಡಿಗ ಸಮಾಜದ ಜಿಲ್ಲಾಧ್ಯಕ್ಷ ರಾಜೇಶ ಜೆ.ಗುತ್ತೇದಾರ ಮಾತನಾಡಿ, ಹಣ, ಅಧಿಕಾರ, ಉನ್ನತ ಹುದ್ದೆಯಿಂದ ಮಾತ್ರವೇ ದೊಡ್ಡವನಾಗಲ್ಲ. ಉತ್ತಮ ಸಂಸ್ಕಾರ ಹಾಗೂ ಮಾನವೀಯ ಮೌಲ್ಯದಿಂದಲೇ ದೊಡ್ಡವರಾಗಲು ಸಾಧ್ಯ. ಸಮಾಜದ ಮಕ್ಕಳು ಉತ್ತಮ ಶಿಕ್ಷಣ ಪಡೆದು ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡು ಸಾಧನೆ ಮಾಡಬೇಕೆಂದು ಸಲಹೆ ನೀಡಿದರು.

ಜೆಸ್ಕಾಂ ಪ್ರಧಾನ ವ್ಯವಸ್ಥಾಪಕಿ ಪರಿಮಳಾ ಎಸ್‌.ಪೆರ್ಲಾ ಮಾತನಾಡಿದರು. ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು, ಸಮಾಜದ ನಿವೃತ್ತ ಸರ್ಕಾರಿ ನೌಕರರನ್ನು ಸಮಾಜದ ಮುಖಂಡರು ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಸಮಾಜದ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಶಾಸಕ ಸುಭಾಷ ಗುತ್ತೇದಾರಗೆ ಸಲ್ಲಿಸಲಾಯಿತು.

ಬ್ರಹ್ಮಶ್ರೀ ನಾರಾಯಣ ಗುರು, ನಿಟ್ಟೂರಿನ ಮಹಾ ಸಂಸ್ಥಾನದ ರೇಣುಕಾನಂದ ಸ್ವಾಮೀಜಿ, ಮಹಾಗಾಂವ ಮಾತಾ ಮಾಣಿಕೇಶ್ವರಿ ಆಶ್ರಮದ ಮಾತಾ ಸಂಗೀತೇಶ್ವರಿ, ಭೀಮಾ ಏತ ನೀರಾವರಿ ವಿಭಾಗದ ಇಇ ಅಶೋಕ ಕಲಾಲ ಸನ್ನತಿ, ಜಿಲ್ಲಾ ಯುವಜನ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಬಾಸ್ಕರ ನಾಯ್ಕ, ಸಂಘದ ಅಧ್ಯಕ್ಷ ವಿಠ್ಠಲ ಎಚ್‌. ಬಾವಗಿ, ಶಿವಲೀಲಾ ಗುತ್ತೇದಾರ, ಶಶಿಧರ ಗುತ್ತೇದಾರ ಹಾಗೂ ಸಮಾಜದ ಮುಖಂಡರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next