ಬೆಳಗಾವಿ: ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ಮೇಲೆ ಒತ್ತಡ ತರಲು ಅಖಿಲ ಭಾರತ ಕಬ್ಬು ಬೆಳೆಗಾರರ ಸಂಘದ ರಾಷ್ಟ್ರ ಸಮಿತಿ ಆಶ್ರಯದಲ್ಲಿ ಕಲಬುರಗಿಯಲ್ಲಿ ಇದೇ ದಿ.29 ಹಾಗೂ 30 ರಂದು ಬೃಹತ್ ಸಮ್ಮೇಳನವನ್ನು ಆಯೋಜನೆ ಮಾಡಿದೆ.
ಈ ಕುರಿತು ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಚಾಲಕ ಎನ್.ಎಲ್.ಭರತರಾಜ್ ಹೇಳಿಕೆ ನೀಡಿದ್ದು.
ಕೇಂದ್ರ ಮತ್ತು ರಾಜ್ಯ ಸರಕಾರಗಳು ಒಂದು ಟನ್ ಕಬ್ಬಿಗೆ ಐದು ಸಾವಿರ ರೂ. ಬೆಲೆ ನಿಗದಿ ಮಾಡಬೇಕು ಎಂದು ಆಗ್ರಹ. ಸಕ್ಕರೆ ಕಾರ್ಖಾನೆಯ ಮಾಲೀಕರ ಲಾಬಿಗೆ ಸರಕಾರಗಳು ಮಣಿದಿವೆ. ಇದರಿಂದ ರೈತರಿಗೆ ನ್ಯಾಯ ಸಿಗುತ್ತಿಲ್ಲ. ಕರ್ನಾಟಕ ರಾಜ್ಯದ ಕೃಷಿ ಬೆಲೆ ಆಯೋಗ ಒಂದು ಟನ್ ಕಬ್ಬು ಬೆಳೆಯಲು 3,580 ರೂ.ವೆಚ್ಚವಾಗುತ್ತದೆ ಎಂದು ವರದಿ ನೀಡಿದೆ ಮತ್ತು ಸಕ್ಕರೆ ನಿರ್ದೇಶಕರ ಮಂಡಳಿಯು ಇದಕ್ಕೆ ಶೇ.10 ಲಾಭಾಂಶ ಸೇರಿಸಿ ಶೇ.9.5 ಇಳುವರಿ ಆಧಾರದ ಮೇಲೆ ಒಂದು ಟನ್ ಕಬ್ಬಿಗೆ 3938 ರೂ.ಗಳನ್ನು ನೀಡಬೇಕೆಂದು ಕೇಂದ್ರ ಸರಕಾರಕ್ಕೆ ವರದಿ ನೀಡಿದೆ.
ಈ ಹಿನ್ನೆಲೆಯಲ್ಲಿ ಎಂ.ಎಸ್.ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ತರಬೇಕೆಂದು ಸಮ್ಮೇಳನದಲ್ಲಿ ಒತ್ತಾಯಿಸಲಾಗುವುದು ಎಂದರು.
ಸಮ್ಮೇಳನದಲ್ಲಿ ಕರ್ನಾಟಕ, ಉತ್ತರ ಪ್ರದೇಶ ಪಂಜಾಬ್, ಹರಿಯಾಣ, ತೆಲಂಗಾಣ, ಆಂದ್ರಪ್ರದೇಶ, ಮಧ್ಯಪ್ರದೇಶ, ಉತ್ತರಾಖಂಡ, ತಮಿಳುನಾಡು ಮೊದಲಾದ ರಾಜ್ಯದಿಂದ ಕಬ್ಬು ಬೆಳೆಗಾರರು ಆಗಮಿಸಲಿದ್ದಾರೆ.
ಸಮ್ಮೇಳನದಲ್ಲಿ ಕಬ್ಬು ಹೋರಾಟಗಾರರ ಮುಂದಿನ ಚಳವಳಿಯ ರೂಪರೇಷೆಯ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದರು.
ಇದನ್ನೂ ಓದಿ: “ದೇಶದ ಯಾವುದೇ ಭಾಗವನ್ನು ಪಾಕ್ ಎಂದು ಕರೆಯಬೇಡಿ: ಸುಪ್ರೀಂಕೋರ್ಟ್ ಆದೇಶದಲ್ಲೇನಿದೆ?