Advertisement

ಭೋಸಗಾ ಕೆರೆ ಭರ್ತಿ: ಮಣ್ಣುಗಳ ಕಣ್ಣು¡

11:05 AM Oct 03, 2019 | Naveen |

ಕಲಬುರಗಿ: ಮಹಾನಗರಕ್ಕೆ ಒಂಭತ್ತು ದಶಕಗಳ ಕಾಲ ನೀರು ಪೂರೈಕೆ ಮಾಡಿದ್ದ ನಗರದಿಂದ 8 ಕಿ.ಮೀ ದೂರವಿರುವ ಭೋಸಗಾಕೆರೆ ಭರ್ತಿಯತ್ತ ಸಾಗುತ್ತಿದೆ.

Advertisement

ಈ ಕೆರೆಗೆ ಮೂರು ವರ್ಷಗಳ ನಂತರ ನೀರು ಬಂದಿದೆ. ಕೆರೆಗೆ ನೀರು ಬಂದಿರುವುದರಿಂದ ದನಕರುಗಳಿಗೆ ಹೆಚ್ಚಿನ ಅನುಕೂಲವಾಗಿದೆ. ಅಲ್ಲದೇ ಅಂತರ್ಜಲ ಮಟ್ಟ ಹೆಚ್ಚಳವಾಗಿದೆ. ಹೀಗಾಗಿ ಎಲ್ಲೆಲ್ಲೂ ಹಸಿರು ಕಾಣುವಂತಾಗಿದೆ.

ಭೋಸಗಾ ಕೆರೆಗೆ ನೀರು ಬಂದಿರುವುದರಿಂದ ಭೋಸಗಾ ಸೇರಿದಂತೆ ಸುತ್ತಮುತ್ತಲಿನ ಏಳು ಹಳ್ಳಿಗಳಿಗೆ ನೀರಿನ ಅನುಕೂಲವಾಗುತ್ತದೆ. ಭೋಸಗಾ ಕೆರೆ ತುಂಬಿದರೆ ಒಂದು ನಿಟ್ಟಿನಲ್ಲಿ ಅನುಕೂಲ ಎನ್ನುವಂತಿದ್ದರೆ, ನೀರಿಲ್ಲದಿದ್ದರೆ ಮತ್ತೂಂದು ನಿಟ್ಟಿನಲ್ಲಿ ಕೆಲವರಿಗೆ ಮಾತ್ರ ಅನುಕೂಲ ಎನ್ನುವಂತಿದೆ. ನೀರಿಲ್ಲದಿದ್ದರೆ ಅದ್ಹೇಗೆ ಅನುಕೂಲ ಎಂದು ಕೇಳಬಹುದು. ಕೆರೆ ಖಾಲಿಯಾದರೆ ಕೆರೆಯೊಳಗಿನ ಮಣ್ಣು ಹೊಡೆಯಲು ದೊಡ್ಡ ಪಡೆಯೇ ಸಿದ್ಧವಾಗುತ್ತದೆ. ಕಳದೆರಡು ವರ್ಷಗಳ ಕಾಲ ಭೂಗಳ್ಳರ ಕಾಟದಿಂದ ಕೆರೆ ನಲುಗಿ ಹೋಗಿತ್ತು. ಈ ವರ್ಷ ನೀರು ಬಂದಿರುವುದರಿಂದ ಗ್ರಾಮಸ್ಥರು ಸಂತೋಷ ವ್ಯಕ್ತಪಡಿಸಿದ್ದಾರೆ.

ಕೆರೆಯೊಳಗೆ ನಡೆಯುತ್ತಿರುವ ಅಕ್ರಮ ಮಣ್ಣುಗಾರಿಕೆ ತಡೆಯುವಂತೆ ಗ್ರಾಮಸ್ಥರು ಅಧಿಕಾರಿಗಳಿಗೆ ದೂರು ಕೊಟ್ಟರೂ ಯಾವುದೇ ನಿಟ್ಟಿನಲ್ಲಿ ಕ್ರಮ ಕೈಗೊಂಡಿಲ್ಲ. ಇದು ಮಣ್ಣುಗಳ್ಳರು ಎಷ್ಟು ಪ್ರಭಾವಶಾಲಿ ಎಂಬುದನ್ನು ನಿರೂಪಿಸುತ್ತದೆ.

ಯಾರ ಕೈ ಜೋರು: ಈಗ ಕೆರೆಗೆ ನೀರು ಬಂದಿದೆ. ಮುಂದಿನ ದಿನಗಳಲ್ಲಿ ನೀರು ಕಡಿಮೆಯಾದಂತೆ ಒಣಗಿದ ಭೂಮಿ ಪಡೆಯಲು ಗ್ರಾಮದ ಕೆಲವರು ತಾ ಮುಂದು, ನಾ ಮುಂದು ಎನ್ನುವಂತೆ ಭೂಮಿ ಪಡೆದು ಅಲ್ಪಾವಧಿ ಬೆಳೆ ಬೆಳೆಯುತ್ತಾರೆ. ಮುಂದೆ ಬೇಸಿಗೆಯಲ್ಲಿ ಪಡೆಯಲಾದ ಭೂಮಿಯ ಮಣ್ಣೇ ಸಾಗಾಟ ನಡೆಯುತ್ತಿರುತ್ತದೆ. ಹೀಗೆ ಚಕ್ರದಂತೆ ನಡೆಯುತ್ತಿರುವ ದಂಧೆ ತಡೆಗಟ್ಟಬೇಕೆನ್ನುತ್ತಾರೆ ಭೋಸಗಾ ಗ್ರಾಮಸ್ಥರು.

Advertisement

ಈಗ ನಡೆಯುತ್ತಿರುವುದೇನು?: ಕೆರೆಯಲ್ಲಿ ನೀರು ಬಂದಿದೆ. ಹೀಗಾಗಿ ಹಲವರ ಕಣ್ಣು ಬಿದ್ದಿದೆ. ಅದೇಗೆಂದರೆ ಕೆರೆ ಕೆಳಗೆ ಸ್ವಲ್ಪ ದೂರದಲ್ಲಿ ಇಟ್ಟಂಗಿ ತಯಾರಿಕೆ ಭಟ್ಟಿಗಳಿವೆ. ಈ ಭಟ್ಟಿಗಳಿಗೆ ನೀರು ದೊರಕಲೆಂದು ಕೆರೆಯೊಳಗಿನ ಜಾಕವೆಲ್‌ ಎತ್ತಿ ನೀರು ಬಿಡಲಾಗುತ್ತಿದೆ. ಕೆರೆ ಒಣಗಿದಾಗ ಮಣ್ಣು ಕೊಳ್ಳೆ ಹೊಡೆದವರು ಈಗ ನೀರು ಕೊಳ್ಳೆ ಹೊಡೆಯಲು ಮುಂದಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.

ಕೆರೆ ಪಂಪ್‌ಆಪರೇಟರ್‌ನನ್ನು ಕೇಳಿದರೆ ಒಮ್ಮೊಮ್ಮೆ ಒಂದೊಂದು ಹೇಳಿಕೆ ನೀಡುತ್ತಿದ್ದಾರೆ. ಒಮ್ಮೆ ಕಲಬುರಗಿ ನಗರಕ್ಕೆ ಕುಡಿಯಲು ನೀರು ಬಿಟ್ಟಿದ್ದೇನೆ, ಮಗದೊಮ್ಮೆ ಜಾಕವೆಲ್‌ ಸ್ವಲ್ಪ ತೊಂದರೆಯಾಗಿತ್ತು. ಸರಿಪಡಿಸುವಾಗ ನೀರು ಹೋಗಿದೆ ಎನ್ನುತ್ತಾರೆ.

ಪ್ರತಿಭಟನೆ: ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಓಂಕಾರ ಹಾಗೂ ಗ್ರಾಮದ ಯುವಕರು, ಮಹಿಳೆಯರು ಬುಧವಾರ ಕೆರೆ ಬಳಿ ಪ್ರತಿಭಟನೆ ನಡೆಸಿ, ಯಾವುದೇ ಕಾರಣಕ್ಕೂ ಒಂದು ಹನಿ ನೀರು ಕೆರೆಯಿಂದ ಹರಿದು ಹೋಗಬಾರದು. ಒಂದು ವೇಳೆ ತಮ್ಮ ಮನವಿ ಧಿಕ್ಕರಿಸಿ ನೀರು ಬಿಟ್ಟಿದ್ದೇ ಆದರೆ ಮುಂದಾಗುವ ಅನಾಹುತಗಳಿಗೆ ಸಂಬಂಧಪಟ್ಟವರೆ ಹೊಣೆಗಾರರು ಎಂದು ಎಚ್ಚರಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next