ಕಲಬುರಗಿ: ನಮಗೆ ಪೆಟ್ಟು ಬಿದ್ದ ತಕ್ಷಣ “ಅಮ್ಮ’ ಎನ್ನುತ್ತೇವೆ ಹೊರತು, “ಅಂಟಿ’ ಅನ್ನಲ್ಲ. ಅಮ್ಮ ಎನ್ನುವ ಪದ ಹೃದಯದಿಂದ ಬರುವಂತದ್ದು, ಹಾಗೆ ಕನ್ನಡ ಭಾಷೆ ಕಣ- ಕಣದಲ್ಲಿ ತುಂಬಿ ಪ್ರತಿಯೊಬ್ಬರಲ್ಲಿಯೂ ಹೃದಯ ಭಾಷೆಯಾಗಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಟಿ.ಎಸ್. ನಾಗಾಭರಣ ಹೇಳಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಗರದ ಎಸ್.ಎಂ. ಪಂಡಿತ ರಂಗ ಮಂದಿರದಲ್ಲಿ ರವಿವಾರ ಹಮ್ಮಿಕೊಂಡಿದ್ದ ಕಲಬುರಗಿ ವಿಭಾಗ ಮಟ್ಟದ ಕನ್ನಡ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇಂದಿನ ಕಲಿಕೆಯ ಸ್ಪರ್ಧಾತ್ಮಕತೆಯಿಂದಾಗಿ ನಮ್ಮಲ್ಲಿ ಬುದ್ಧಿಜೀವಿಗಳು ಹೆಚ್ಚಾಗುತ್ತಿದ್ದಾರೆ. ಹೊಸ-ಹೊಸ ಮಾಹಿತಿ ಪಡೆಯುತ್ತಿದ್ದಾರೆ. ಆದರೆ, ಮಾಹಿತಿ ಪಡೆಯುವುದೇ ಜ್ಞಾನವಲ್ಲ. ಭಾಷಾ ಹೃದಯ ಜೀವಿಗಳಾಗಬೇಕು. ನಮ್ಮ ಭಾವನೆ ಮತ್ತು ನೋವು ಹೇಳಿಕೊಳ್ಳುವುದು ತಾಯಿ ಭಾಷೆಯಿಂದಲೇ ಸಾಧ್ಯ ಎಂದರು. ನಮ್ಮ ಭಾಷೆಯ ಕೀಲಿ ಕೈ ನಾವೇ ತೆಗೆಯಬೇಕು. ಯಾವುದೇ ಮಾರ್ಗದಿಂದ ಜ್ಞಾನ ಸಿಕ್ಕರೂ ಅದನ್ನು ಸ್ವೀಕರಿಸುವ ಮೂಲಕ ಜ್ಞಾನ ವಿಸ್ತರಿಸಿಕೊಳ್ಳಬೇಕು.
ತಂತ್ರಜ್ಞಾನ ಮತ್ತು ತಂತ್ರಾಂಶದಲ್ಲೂ ಕನ್ನಡ ಭಾಷೆ ಬಳಸಬೇಕು. ಭವಿಷ್ಯದಲ್ಲಿನ ಕನ್ನಡದ ಬಗ್ಗೆ ಪ್ರತಿಯೊಬ್ಬರೂ ಗಮನ ಹರಿಸುವುದರ ಜತೆಗೆ ತಂತ್ರಜ್ಞಾನವನ್ನು ಜ್ಞಾನದ ಭಾಷೆಯಾಗಿಲು ಹೆಚ್ಚು ಕನ್ನಡ ಬಳಕೆ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.
ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ, ಮಾಜಿ ಸಂಸದ ಬಸವರಾಜ ಪಾಟೀಲ ಸೇಡಂ ಮಾತನಾಡಿ, ಮಾತೃಭಾಷೆ ಕನ್ನಡದ ಬಗ್ಗೆ ಕೀಳರಿಮೆ ಬೇಡ. ಕನ್ನಡ ಭಾರತಿ, ವಿಶ್ವ ಭಾರತಿ ಆಗಲು ಕನ್ನಡ ಬಳಕೆ ಮಾಡಬೇಕು ಎಂದರು.
ಈ ಹಿಂದೆ ನಮ್ಮಲ್ಲಿ ವರ್ಷಕ್ಕೆ ಕನಿಷ್ಠ 75ರಿಂದ 80 ಅನುಸಂಧಾನಗಳು ನಡೆಯುತ್ತಿದ್ದವು. ಇದರಿಂದ ಹೊಸದನ್ನು ಕಂಡುಕೊಳ್ಳಲು ಸಾಧ್ಯವಾಗುತ್ತಿತ್ತು. ಆದರೆ, ಇತ್ತೀಚೆಗೆ ಅನುಸಂಧಾನಗಳು ಸಂಖ್ಯೆ 6ರಿಂದ 7ಕ್ಕೆ ಇಳಿದಿದೆ. ಇದಕ್ಕೆ ಕಾರಣ ಮೊಬೈಲ್ ಬಳಕೆ ಹೆಚ್ಚಾಗಿ ಓದಿನ ಕಡೆಗೆ ಗಮನ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ನಿರ್ದೇಶಕ ಡಾ| ಎಚ್.ಟಿ. ಪೋತೆ, ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ ಮಾತನಾಡಿದರು. ಜಿ.ಪಂ ಅಧ್ಯಕ್ಷೆ ಸುವರ್ಣ ಹಣಮಂತರಾಯ ಮಲಾಜಿ, ಕರ್ನಾಟಕ ಮಹಿಳಾ ಅಭಿವೃದ್ಧಿ ನಿಗಮ ಅಧ್ಯಕ್ಷೆ ಶಶಿಕಲಾ ಟೆಂಗಳಿ, ಪದವಿ ಪೂರ್ವ ಶ್ಕಿಕ್ಷಣ ಇಲಾಖೆ ಸಹಾಯಕ ನಿರ್ದೇಶಕ ಶಿವಶರಣಪ್ಪ ಮೂಳೆಗಾಂವ ಇತರರಿದ್ದರು.