Advertisement
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ನಾಲವಾರ ಹೋಬಳಿ ವ್ಯಾಪ್ತಿಯ ರಾಂಪುರಹಳ್ಳಿ ಗ್ರಾಮ ನಿವಾಸಿಗಳಾದ ಹಣಮಂತ ಮಲ್ಲಪ್ಪ ಹೆಳವರ, ಭೀಮರಾಯ ಯಲ್ಲಪ್ಪ ಹೆಳವರ, ಮಲ್ಲಪ್ಪ ಲಕ್ಷ್ಮಣ ಹೆಳವರ ಬಂಧಿತ ಆರೋಪಿಗಳಾಗಿದ್ದಾರೆ. ಇನ್ನೋರ್ವ ಆರೋಪಿ ಕುಂಬಾರಹಳ್ಳಿ ಗ್ರಾಮದ ಸಾಯಬಣ್ಣ ಲಕ್ಷ್ಮಣ ಹೆಳವರ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಅರಣ್ಯ ಅಧಿಕಾರಿಗಳು ಜಾಲ ಬೀಸಿದ್ದಾರೆ.
ಬಂಧಿತ ಆರೋಪಿಗಳಿಂದ ವನ್ಯಪ್ರಾಣಿ ಬೇಟೆಯಾಡಿ ಮಾರಾಟ ಮಾಡಲು ಸಾಗಿಸುತ್ತಿದ್ದ ಟ್ರೋಫಿಗಳಾದ ಚಿಪ್ಪು ಹಂದಿಯ ಚಿಪ್ಪುಗಳು, ಮುಳ್ಳು ಹಂದಿಯ ಮುಳ್ಳುಗಳು, ಮುಂಗುಸಿಯ ಕೂದಲು, ನೀರುನಾಯಿಯ ಚರ್ಮ ಮತ್ತು ಕಾಡುಹಂದಿಯ ಕೊರೆಗಳು (ದಂತ) ಸೇರಿದಂತೆ ಬೇಟೆಯಾಡಲು ಬಳಸಿದ ಭರ್ಚಿ, ಉರುಳು ಹಾಕಲು ಬಳಸುವ ಕ್ಲಚ್‌ವೈರ್ ತಂತಿಗಳು, ಹಾರ್ನ್ ಸಮೇತ ಇರುವ ಶಿಕಾರಿ ಬ್ಯಾಟರಿ ಟಾರ್ಚ್, ಚೂರಿ, ಪಂಜಾ, ಮೀನು ಹಿಡಿಯುವ ಬಲೆಗಳು, ಕಬ್ಬಿಣದ ರಾಡುಗಳು, ಮೂರು ಮೊಬೈಲ್ ಗಳು ಮತ್ತು ಎರಡು ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಉಲ್ಲಂಘನೆ ಆರೋಪದಡಿ ಪ್ರಕರಣ ದಾಖಲಾಗಿದೆ. ವನ್ಯಪ್ರಾಣಿಗಳನ್ನು ಅಕ್ರಮವಾಗಿ ಬೇಟೆಯಾಡುವ ಅಥವಾ ಮಾರಾಟ ಮಾಡುವ ಅಪರಾಧ ಕೃತ್ಯ ಕಂಡುಬಂದಲ್ಲಿ ಸಾರ್ವಜನಿಕರು ಕಲಬುರಗಿ ಪ್ರಾದೇಶಿಕ ವಿಭಾಗ ಕಚೇರಿಯ ದೂರವಾಣಿ ಸಂಖ್ಯೆ: 08472 256601 ಕ್ಕೆ ಕರೆ ಮಾಡಿ ತಿಳಿಸುವಂತೆ ಅರಣ್ಯಾಧಿಕಾರಿಗಳು ಕೋರಿದ್ದಾರೆ.