Advertisement

ಉಳ್ಳವರು-ಇಲ್ಲದವರು ಸೇರಿ ಸಮ್ಮೇಳನ

12:06 PM Jan 11, 2020 | Naveen |

ಕಲಬುರಗಿ: ಬಿಸಿಲೂರಿನ ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ಫೆ.5, 6 ಮತ್ತು 7ರಂದು ನಡೆಯಲಿರುವ 85ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉಳ್ಳವರು ಮತ್ತು ಇಲ್ಲದವರನ್ನು ಸೇರಿ ಆಚರಿಸಲಾಗುವುದು. ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಜಿಲ್ಲೆಯ ಶ್ರೀಮಂತರ ಪಟ್ಟಿ ಮಾಡಬೇಕು. ಉಳ್ಳವರು ಕೊಡುಗೈ ದಾನಿಗಳಾಗಿ ಮುಂದೆ ಬಂದು ಸಮ್ಮೇಳನಕ್ಕೆ ಸಹಕಾರ ನೀಡಬೇಕೆಂದು ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಕರೆ ನೀಡಿದರು.

Advertisement

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಮ್ಮೇಳನದ ಪೂರ್ವ ಸಿದ್ಧತಾ ಸಭೆ ಮತ್ತು ವಿವಿಧ ಸಮಿತಿಗಳ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.

ಊಟ, ವಸತಿ, ಸಾರಿಗೆ, ಪ್ರಚಾರ, ಆರೋಗ್ಯ, ಸ್ವಚ್ಛತೆ, ಅಲಂಕಾರ, ಮೆರವಣಿಗೆ, ನೋಂದಣಿ, ಮಳಿಗೆ ಮತ್ತು ಚಿತ್ರಕಲಾ ಪ್ರದರ್ಶನ ಸೇರಿದಂತೆ ಎಲ್ಲ 16 ಸಮಿತಿಗಳ ಅಧ್ಯಕ್ಷರು ಮತ್ತು ಕಾರ್ಯಾಧ್ಯಕ್ಷರು ಇದುವರೆಗೆ ನಡೆದ ಪ್ರಗತಿ ವಿವರಿಸಿದರು.

ಎಲ್ಲ ಸಮಿತಿಗಳ ಮಾಹಿತಿಯನ್ನು ಸೂಕ್ಷ್ಮವಾಗಿ ಅಲಿಸಿದ ಉಪ ಮುಖ್ಯಮಂತ್ರಿಗಳು, ಸಮ್ಮೇಳನವನ್ನು ಅಚ್ಚುಕಟ್ಟಾಗಿ, ಅದ್ದೂರಿಯಾಗಿ, ಯಶಸ್ವಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಸಾಹಿತ್ಯ ಮತ್ತು ಸಾಂಸ್ಕೃತಿಕ ದೊಡ್ಡ ಹಬ್ಬವೇ ಸಮ್ಮೇಳನ. ಸಮ್ಮೇಳನಕ್ಕೆ ಸರ್ಕಾರವಷ್ಟೇ ಅನುದಾನ ನೀಡಬೇಕಿಲ್ಲ. ಉಳ್ಳವರಿಂದ ಪಡೆದು ಇಲ್ಲದವರನ್ನು ಸೇರಿಕೊಂಡು ಸಮ್ಮೇಳನ ಆಚರಿಸಬೇಕೆಂದು ಹೇಳಿದರು. ಜಿಲ್ಲೆಯ ಪ್ರತಿ ಶಾಸಕರು ತಮ್ಮ ಕ್ಷೇತ್ರಗಳಿಂದ 10 ಲಕ್ಷ ರೂ. ದೇಣಿಗೆ ಸಂಗ್ರಹಿಸಿ ಕೊಡಬೇಕು. ಜಿಲ್ಲೆಯಲ್ಲಿರುವ ಸಿಮೆಂಟ್‌, ಸಕ್ಕರೆ ಕಾರ್ಖಾನೆಯವರು, ಪ್ರಮುಖ ಶಿಕ್ಷಣ ಸಂಸ್ಥೆಯವರು, ಉದ್ಯಮಿಗಳು, ಶ್ರೀಮಂತರಿಂದ ಅಗತ್ಯ ಸಹಾಯ, ಸಹಕಾರ ಪಡೆಯಬೇಕು. ದೇಣಿಗೆ ನೀಡುವರ ಪಟ್ಟಿಯನ್ನು ಜಿಲ್ಲಾಧಿಕಾರಿಗಳು ಹಾಗೂ ಪ್ರಮುಖ ಅಧಿಕಾರಿಗಳು ಚರ್ಚೆ ನಡೆಸಿ ತಯಾರಿಸಬೇಕು. ದಾನಿಗಳಿಗೆ ಬ್ಯಾಂಕ್‌ ಖಾತೆಯ ಸಂಖ್ಯೆಯುಳ್ಳ ಅಧಿಕೃತ ಪತ್ರ ಬರೆಯಬೇಕು. ಯಾರಿಗಾದರೂ ಮಾತನಾಡಿ ಎಂದರೆ ನಾನೇ ಖುದ್ದು ಬೇಕಾದರೆ ಮಾತನಾಡುತ್ತೇನೆ ಎಂದು ವಿಶ್ವಾಸ ತುಂಬಿದರು.

ಹೊಣೆ ಹೊರೆಸಿದ ಡಿಸಿಎಂ: ಸ್ವಚ್ಛತೆ ಸಮಿತಿ, ಆರೋಗ್ಯ ಸಮಿತಿ ಮತ್ತು ಅಲಂಕಾರ ಸಮಿತಿ ಹಾಗೂ ನೊಂದಣಿ ಪ್ರತಿನಿಧಿಗಳಿಗೆ ಕಿಟ್‌ ನೀಡುವ ಸಂಬಂಧ ಸಭೆಯಲ್ಲೇ ಡಿಸಿಎಂ ಕಾರಜೋಳ, ಆಯಾ ಸಮಿತಿಯವರಿಗೆ ಹೊಣೆ ಹೊರೆಸಿದರು.

Advertisement

ಸ್ವಚ್ಛತೆ ಕಾರ್ಯಕ್ಕೆ ಸಿಬ್ಬಂದಿ, ಡಸ್ಟ್‌ಬಿನ್‌ಗಳು, ತ್ಯಾಜ್ಯ ವಾಹನಗಳ ವೆಚ್ಚವನ್ನು ಸರ್ಕಾರದಿಂದ ನೀಡಲು ಆಗುವುದಿಲ್ಲ ಎಂದು ನಗುತ್ತಲೇ ಹೇಳಿದ ಅವರು, ಸ್ವಚ್ಛತೆಯ ಸಂಪೂರ್ಣ ವೆಚ್ಚವನ್ನು ಮಹಾನಗರ ಪಾಲಿಕೆಯೇ ವಹಿಸಬೇಕು. ಸಮ್ಮೇಳನಕ್ಕಾಗಿ ಹೊಸ ಡಸ್ಟ್‌ಬಿನ್‌ಗಳು ಖರೀದಿ ಮಾಡಬೇಕಾಗಿ ಬಂದರೂ, ಅದು ಪಾಲಿಕೆಗೆ ಆಸ್ತಿಯಾಗಿ ಉಳಿಯುತ್ತದೆ ಎಂದು ಪಾಲಿಕೆಯ ಎಂಜಿನಿಯರ್‌ ಆರ್‌.ಪಿ. ಜಾಧವ ಅವರಿಗೆ ಸೂಚಿಸಿದರು. ಆಗ ವೇದಿಕೆಯಲ್ಲಿದ್ದ ಪಾಲಿಕೆ ಆಯುಕ್ತ ರಾಹುಲ್‌ ಪಾಂಡ್ವೆ ಸೂಕ್ಷ್ಮವಾಗಿಯೇ ತಲೆಯಾಡಿಸಿದರು.

ಸಮ್ಮೇಳನಕ್ಕಾಗಮಿಸುವವರಿಗೆ ಆರೋಗ್ಯ ಸೇವೆ ನೀಡುವ ವೆಚ್ಚವನ್ನೂ ಆರೋಗ್ಯ ಇಲಾಖೆಯೇ ನೋಡಿಕೊಳ್ಳಬೇಕು. ಆರೋಗ್ಯ ವ್ಯವಸ್ಥೆಗೆ ಹಣ ಕೊಡುವುದಿಲ್ಲ. ಖಾಸಗಿ ಆಸ್ಪತ್ರೆಯವರನ್ನು ಸಂಪರ್ಕಿಸಿ ಸೇವೆಗೆ ಅಣಿ ಮಾಡಿ ಎಂದು ಆರೋಗ್ಯ ಸಮಿತಿಯ ಕಾರ್ಯಾಧ್ಯಕ್ಷ ಡಾ| ಅಂಬಾರಾಯ ರುದ್ರವಾಡಿಗೆ ಸೂಚಿಸಿದರು.

ನೋಂದಣಿ ಪ್ರತಿನಿಧಿಗಳಿಗೆ ನೆನಪಿನ ಕಿಟ್‌ ನೀಡಲು ವಿವಿಧ ಸಂಸ್ಥೆಗಳನ್ನು ಸಂಪರ್ಕಿಸಬೇಕು. ಹಲವು ಶಿಕ್ಷಣ ಸಂಸ್ಥೆಗಳು ಇದ್ದು, ಅವರನ್ನು ಸಂಪರ್ಕಿಸಲು ಬ್ಯಾಗ್‌, ಇತರ ಸಾಮಾಗ್ರಿಗಳನ್ನು ದೇಣಿಗೆ ನೀಡುವಂತೆ ಪ್ರೋತ್ಸಾಹಿಸಬೇಕು. ನಗರದಲ್ಲಿ ಅಲಂಕಾರ ಮಾಡಲು ಕಲಾವಿದರನ್ನು ಬಳಸಿಕೊಳ್ಳಬೇಕು. ರಸ್ತೆ ವಿಭಜಕಗಳಿಗೆ ಬಣ್ಣ ಬಳಿಯುವ ಹೊಣೆ ಪೊಲೀಸರು ನೋಡಿಕೊಳ್ಳಬೇಕು. ಹೀಗೆ ಹಲವು ಸಮಿತಿಗಳಿಗೆ ದಾನಿಗಳ ನೆರವು ಪಡೆಯಲು ನಗುತ್ತಲೇ ಸೂಚಿಸಿದ ಡಿಸಿಎಂ, ಸಭೆಯಲ್ಲಿದವರನ್ನು ನಗೆಗಡಲಿಲ್ಲಿ ತೇಲಿಸಿದರು.

ಶಾಸಕರಾದ ಎಂ.ವೈ.ಪಾಟೀಲ, ಸುಭಾಷ ಗುತ್ತೇದಾರ, ದತ್ತಾತ್ರೇಯ ಪಾಟೀಲ ರೇವೂರ, ಪ್ರಿಯಾಂಕ್‌ ಖರ್ಗೆ, ರಾಜಕುಮಾರ ಪಾಟೀಲ ತೇಲ್ಕೂರ, ಖನೀಜ್‌ ಫಾತಿಮಾ, ಡಾ| ಅವಿನಾಶ ಜಾಧವ, ವಿಧಾನ ಪರಿಷತ್‌ ಸದಸ್ಯರಾದ ಬಿ.ಜಿ.ಪಾಟೀಲ, ತಿಪ್ಪಣ್ಣ ಕಮಕನೂರ, ಜಿಪಂ ಅಧ್ಯಕ್ಷೆ ಸುವರ್ಣ ಹಣಮಂತ ಮಲಾಜಿ, ಕೇಂದ್ರ ಕಸಾಪ ಅಧ್ಯಕ್ಷ ನಾಡೋಜ ಡಾ| ಮನು ಬಳಿಗಾರ, ಜಿಲ್ಲಾಧಿಕಾರಿ ಬಿ.ಶರತ್‌, ಎಸ್ಪಿ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌, ನಗರ ಪೊಲೀಸ್‌ ಆಯುಕ್ತ ಎಂ.ಎನ್‌. ನಾಗರಾಜ, ಪಾಲಿಕೆ ಆಯುಕ್ತ ರಾಹುಲ್‌ ಪಾಂಡ್ವೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಂ. ವಾನತಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ| ಶಂಕರಪ್ಪ ವಣಿಕ್ಯಾಳ, ಕಸಾಪ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ ಹಾಗೂ ಸಮಿತಿಗಳ ಅಧ್ಯಕ್ಷರು ಮತ್ತು ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next