ಕಲಬುರಗಿ: ಅಖೀಲ ಭಾರತ ಮಟ್ಟದಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ ಆಕಾಶವಾಣಿ ಏರ್ಪಡಿಸುವ ರಾಷ್ಟ್ರೀಯ ಸರ್ವಭಾಷಾ ಕವಿ ಸಮ್ಮೇಳನದಲ್ಲಿ ಕನ್ನಡವನ್ನು ಕಲಬುರಗಿ ಆಕಾಶವಾಣಿಯ ಭೀಮರಾಯ ಹೇಮನೂರು ಪ್ರತಿನಿಧಿಸಲಿದ್ದಾರೆ.
ಕರ್ನಾಟಕದಿಂದ ಕನ್ನಡ ಪ್ರತಿನಿಧಿಸುವ ಭೀಮರಾಯ ಹೇಮನೂರು ದೆಹಲಿಯಲ್ಲಿ ನಡೆಯುವ ಸರ್ವಭಾಷಾ ಕವಿ ಸಮ್ಮೇಳನದಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ. ಇವರು “ಗುಬ್ಬಚ್ಚಿಯ ಗೂಡು’ಕವನ ಪ್ರಸ್ತುತಪಡಿಸಲಿದ್ದಾರೆ.
ಈ ಕವನದ ಅನುವಾದ ದೇಶಾದ್ಯಂತ ಆಯಾ ರಾಜ್ಯಗಳ ಭಾಷೆಗಳಲ್ಲಿ ಬಿತ್ತರವಾಗಲಿದೆ. ಜ. 25ರಂದು ರಾತ್ರಿ 10ಕ್ಕೆ ನಡೆಯುವ ಸರ್ವಭಾಷಾ ಕವಿ ಸಮ್ಮೇಳನದಲ್ಲಿ ಈ ಕವಿತೆ ರಾಷ್ಟ್ರೀಯ ಜಾಲದಲ್ಲಿ ಮೂಡಿಬರಲಿದೆ.
ಹೇಮನೂರು ಅವರು ಅಂಚೆ ಸಹಾಯಕರಾಗಿ ಕಲಬುರಗಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು “ಮುಳ್ಳು ಚೆಲ್ಲಿದ ಹಾದಿಗೆ’ ಕವನ ಸಂಕಲನ, “ಯಾರು ಒಳ್ಳೆಯವರು, ಯಾರು ಕೆಟ್ಟವರು?’ ನಾಟಕ ಕೃತಿ ಪ್ರಕಟವಾಗಿದೆ. ಆಕಾಶವಾಣಿಯಲ್ಲಿ ಚಿಂತನ, ಭಾಷಣ, ಕವನಗಳು ಪ್ರಸಾರಗೊಂಡಿವೆ. ವಿಚಾರಗೋಷ್ಠಿ, ಕವಿಗೋಷ್ಠಿಗಳಲ್ಲಿ ಪಾಲ್ಗೊಂಡ ಇವರು ಜಾನಪದಗೀತೆ, ವಚನ, ಕತೆ ಮತ್ತು ಲೇಖನಗಳ ಬರಹಗಾರರಾಗಿದ್ದಾರೆ.
“ಗುಬ್ಬಚ್ಚಿಯ ಗೂಡು’ ಕವನದಲ್ಲಿ ಬದುಕಿನ ಅಂತರಾಳ ಮತ್ತು ಸಾರ್ಥಕ್ಯದ ಹಾದಿಯನ್ನು ಸೂಕ್ಷ¾ ಸಂವೇದನೆಗಳ ಮೂಲಕ ತೆರೆದಿಟ್ಟಿದ್ದಾರೆ ಎಂದು ಕನ್ನಡ ಭಾಷಣ ವಿಭಾಗದ ಕಾರ್ಯಕ್ರಮ ನಿರ್ವಾಹಕ ಅನಿಲಕುಮಾರ್ ಎಚ್.ಎನ್ ತಿಳಿಸಿದ್ದಾರೆ.
ಅಭಿನಂದನೆ: ರಾಷ್ಟ್ರೀಯ ಸರ್ವಭಾಷಾ ಕವಿ ಸಮ್ಮೇಳನಕ್ಕೆ ಆಯ್ಕೆಯಾದ ಭೀಮರಾಯ ಹೇಮನೂರು ಅವರಿಗೆ ಆಕಾಶವಾಣಿ ಕೇಂದ್ರದಲ್ಲಿ ಕಾರ್ಯಕ್ರಮ ಮುಖ್ಯಸ್ಥರಾದ ರಾಜೇಂದ್ರ ಆರ್ ಕುಲಕರ್ಣಿ ಅಭಿನಂದನೆ ಸಲ್ಲಿಸಿ ಆಯ್ಕೆ ಪತ್ರವನ್ನು ಇತ್ತೀಚೆಗೆ ನೀಡಿದರು. ಕಾರ್ಯಕ್ರಮ ನಿರ್ವಾಹಕರಾದ ಡಾ| ಸದಾನಂದ ಪೆರ್ಲ, ಅನಿಲಕುಮಾರ್ ಎಚ್.ಎನ್, ಸೋಮಶೇಖರ ಎಸ್.
ರುಳಿ, ಸಹಾಯಕ ಎಂಜಿನಿಯರ್ ಎ.ಶ್ರೀನಿವಾಸ, ಗ್ರಂಥಾಲಯ ಸಹಾಯಕಿ ಸಂಗೀತಾ ಕಿಣಗಿ ಇದ್ದರು ಎಂದು ಕಾರ್ಯಕ್ರಮ ಮುಖ್ಯಸ್ಥ ರಾಜೇಂದ್ರ ಆರ್. ಕುಲಕರ್ಣಿ ತಿಳಿಸಿದ್ದಾರೆ.