ಕಲಬುರಗಿ: ಸೋಲಿನ ಭೀತಿಯಿಂದ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಲಬುರಗಿಯಲ್ಲೇ ಠಿಕಾಣಿ ಹೂಡುತ್ತಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಸಂಸದ ಡಾ. ಉಮೇಶ ಜಾಧವ್ ಆರೋಪಿಸಿದರು.
ಪಕ್ಷದ ನೂತನ ಕಚೇರಿಯಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖರ್ಗೆ ಈಗಾಗಲೇ ಮೂರು ಸಲ ಬಂದಿದ್ದಲ್ಲದೇ ಇನ್ನೂ ಎರಡ್ಮೂರು ಸಲ ಬರುತ್ತಾರಂತೆ. ಸೋಲಿನ ಭೀತಿಯಿಂದ ಹಾಗೂ ಹೇಗಾದರೂ ಮಾಡಿ ಈ ಸಲ ಅಳಿಯನನ್ನು ಗೆಲ್ಲಿಸಲೇಬೇಕೆಂದು ಕಲಬುರಗಿ ಸೀಮಿತವಾಗಿದ್ದಾರೆಂದು ಟೀಕಿಸಿದರು
ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ದೇಶ ಸುತ್ತಾಡುವುದು ಬಿಟ್ಟು ಕಲಬುರಗಿ ಸುತ್ತುತ್ತಿದ್ದಾರೆ. ಅದೇ ರೀತಿ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಡಾ. ಶರಣ ಪ್ರಕಾಶ ಪಾಟೀಲ್ ಸಹ ಗ್ರಾಮ- ಗ್ರಾಮ ಸುತ್ತುತ್ತಿದ್ದಾರೆ. ಹೋದದ್ದೆಲ್ಲ ಬಿಜೆಪಿ ಅಭ್ಯರ್ಥಿ ಸಾಧನೆ ಶೂನ್ಯ ಎಂದು ಪದೇ ಪದೇ ಹೇಳಿ ಒಂದು ಸುಳ್ಳನ್ನು ನೂರು ಸಲ ಹೇಳಿ ನಿಜ ಮಾಡಲು ಹೊರಟಿದ್ದಾರೆ. ನಿಜವಾಗಿ ಈ ಭಾಗ ಅಭಿವೃದ್ಧಿ ಮಾಡಿದ್ದೆ ಆದರೆ ಇಷ್ಟೊಂದು ನಿಟ್ಟಿನಲ್ಲಿ ಪ್ರಚಾರ ಮಾಡುವ ಅವಶ್ಯಕತೆಯೇ ಇರಲಿಲ್ಲ ಎಂದು ಡಾ. ಜಾಧವ್ ವ್ಯಂಗ್ಯವಾಡಿದರು.
ಬಹಿರಂಗ ಚರ್ಚೆಗೆ ಸವಾಲು: ತಾವು ಸಂಸದರಾಗಿ ಏನು ಮಾಡಿದ್ದೇವೆ ಹಾಗೂ ತಾವು ಹಿಂದೆ ಏನು ಮಾಡಿದ್ದೀರಿ ಎಂಬುದರ ಕುರಿತಾಗಿ ಬಹಿರಂಗವಾಗಿ ಚರ್ಚಿಸಲು ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಇಲ್ಲವೇ ಅವರ ಅಳಿಯ ಮತ್ತು ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಬಂದರೆ ತಾವು ಸಿದ್ದ. ಸಬೂಬು ಹೇಳದೇ ಬಹಿರಂಗ ಚರ್ಚೆ ಬರಬೇಕೆಂದು ಡಾ.ಜಾಧವ್ ಸವಾಲು ಹಾಕಿದರು.
ಲಕ್ಷ ಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ಮೆಗಾ ಟೆಕ್ಸ್‌ಟೈಲ್ ಪಾರ್ಕ್ ಕಲಬುರಗಿಯಲ್ಲಿ ಶುರುವಾಗುತ್ತಿರುವುದು, 1475 ಕೋರೂ ವೆಚ್ಚದ ಭಾರತ ಮಾಲಾ ಹೆದ್ದಾರಿ ಕಲಬುರಗಿ ಮೂಲಕ ಹಾದು ಹೋಗಿರುವುದು, ದೇಶಕ್ಕೆ ಸ್ವತಂತ್ರ ಸಿಕ್ಕ ಮೇಲೆ ಇದೇ ಮೊದಲ ಬಾರಿಗೆ ಕಲಬುರಗಿಯಿಂದ ಬೆಂಗಳೂರಿಗೆ ನೇರವಾಗಿ ರೈಲು ಓಡಾಟ ಶುರುವಾಗಿರುವುದು, ವಂದೇ ಭಾರತ ಶುರುವಾಗಿರುದು, ಕೊರೊನಾ ವೇಳೆಯಲ್ಲಿ ಕಲಬುರಗಿಯಲ್ಲೇ ಮೊದಲ ಆರ್ಟಿಪಿಸಿಆರ್ ಶುರು ಮಾಡಿರುವುದು, ರೆಮಿಡಿವಿಶರ್ ತಂದಿರುವುದು, 60 ಕೋ.ರೂ ವೆಚ್ಚದ ಶಹಾಬಾದ್ ಬಳಿ ಕಾಗಿಣಾ ನದಿಗೆ ಸೇತುವೆ ನಿರ್ಮಿಸಿರುವುದು ಇವರ (ಕಾಂಗ್ರೆಸ್) ಕಣ್ಣಿಗೆ ಕಾಣಲಿಲ್ಲವೇ? ಮಾತೆತ್ತಿರೆ ಜಾಧವ್ ಏನ್ ಮಾಡಿದ್ದಾರೆಂದು ಪ್ರಶ್ನಿಸುತ್ತಾರೆ. ಒಂದು ವೇಳೆ ಇವರು ಅಭಿವೃದ್ಧಿ ಮಾಡಿದ್ದೆಯಾದರೆ ಈ ಭಾಗ ಯಾಕೆ ಹಿಂದುಳಿಯುತ್ತಿತ್ತು ಎಂದು ಡಾ. ಜಾಧವ್ ಖಾರವಾಗಿ ಪ್ರಶ್ನಿಸಿದರು.
371 ಜೆ ವಿಧಿ ಕೊಡುಗೆ ಖರ್ಗೆಯೊಬ್ಬರ ಕೊಡುಗೆ ಅಲ್ಲ: 371 ಜೆ ವಿಧಿ ಜಾರಿಯಾಗುವಲ್ಲಿ ಮಲ್ಲಿಕಾರ್ಜುನ ಖರ್ಗೆಯೊಬ್ಬರ ಕೊಡುಗೆ ಅಲ್ಲ. ಮೊದಲನೇಯದಾಗಿ ವೈಜನಾಥ್ ಪಾಟೀಲ್, ವಿಶ್ವನಾಥ ರೆಡ್ಡಿ ಮುದ್ನಾಳ, ಹಣಮಂತರಾವ ದೇಸಾಯಿ ಮುಂತಾದವರ ಪಾತ್ರವೂ ಇದೆಯಲ್ಲದೇ, ರಾಜ್ಯ ವಿಧಾನಸಭೆಯಲ್ಲೂ ಒಕ್ಕೊರಲಿನ ನಿರ್ಣಯ ಕೈಗೊಳ್ಳಲಾಗಿದೆ. ಅದಲ್ಲದೇ ಎಲ್ ಕೆ. ಅಡ್ವಾಣಿ ಅವರೂ ಬೇಡಿಕೆ ತಿರಸ್ಕರಿಸಿದ್ದರು ಎಂದು ಹೇಳುತ್ತಾರೆ. ಆದರೆ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಕೆಲವು ಪ್ರಶ್ನೆ ಕೇಳಿ 317 ಜಾರಿ ವಿಧಿಯ ಪ್ರಸ್ತಾವನೆ ಕಳುಹಿಸಿದ್ದರು ಎಂದು ಡಾ. ಜಾಧವ್ ದಾಖಲೆಯೊಂದಿಗೆ ಸ್ಫೋಟಕ ಮಾಹಿತಿ ನೀಡಿದರು.
ಶಾಸಕರಾದ ಬಸವರಾಜ ಮತ್ತಿಮಡು, ರಘುನಾಥ ಮಲ್ಕಾಪುರ ಸೇರಿದಂತೆ ಮುಂತಾದವರಿದ್ದರು.