ಕಲಬುರಗಿ: ಇಲ್ಲಿನ ವಿಮಾನ ನಿಲ್ದಾಣದಿಂದ ತರಬೇತಿಗಾಗಿ ಆಗಸಕ್ಕೆ ಹಾರಿದ್ದ ವಿಮಾನವೊಂದು ತಾಂತ್ರಿಕ ದೋಷ ಕಾಣಿಸಿಕೊಂಡು ಹೊಲವೊಂದರಲ್ಲಿ ತುರ್ತು ಭೂ ಸ್ಪರ್ಶ ಮಾಡಿರುವ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ.
ಘಟನೆಯಲ್ಲಿ ಯಾರಿಗೂ ಯಾವುದೇ ಅಪಾಯಗಳಾಗಿಲ್ಲ. ವಿಮಾನ ಸೇಫಾಗಿ ಲ್ಯಾಂಡ್ ಆಗಿದೆ. ಯಾವುದೇ ತೊಂದರೆಗಳೀಲ್ಲದೆ ಅಪಾಯದಿಂದ ಇಬ್ಬರು ಮಹಿಳಾ ತರಬೇತಿ ಪೈಲೆಟ್ ಗಳು ಹಾಗೂ ಓರ್ವ ವಿದ್ಯಾರ್ಥಿ ಪಾರಾಗಿದ್ದಾರೆ ಎಂದು ಕಲಬುರಗಿ ವಿಮಾನ ನಿಲ್ದಾಣದ ನಿರ್ದೇಶಕ ಚಿಲ್ಕ ಮಹೇಶ್ “ಉದಯವಾಣಿ”ಗೆ ತಿಳಿಸಿದ್ದಾರೆ.
ಇದನ್ನೂ ಓದಿ:World Cup ಕ್ವಾಲಿಫೈಯರ್ ಕೂಟದ ಮಧ್ಯೆಯೇ ಅಮೆರಿಕದ ಬೌಲರ್ ಅಮಾನತು!
ಪೆಟ್ ಶಿರೂರು ಹಾಗೂ ಮುತ್ತಗ ಗ್ರಾಮದ ಮಧ್ಯದಲ್ಲಿರುವ ಮಲ್ಲಿಕಾರ್ಜುನ್ ಎನ್ನುವವರ ಹೊಲದಲ್ಲಿ ವಿಮಾನ ತುರ್ತು ಭೂ ಸ್ಪರ್ಶ ಮಾಡಿದೆ. ಬೆಳಗ್ಗೆ ಈ ವಿಮಾನ ನಿಲ್ದಾಣದಿಂದ ತರಬೇತಿಗಾಗಿ ವಿಮಾನ ಆಗಸಕ್ಕೆ ಹಾರಿತ್ತು.
ಆದರೆ ತಾಂತ್ರಿಕ ತೊಂದರೆಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಲ್ಯಾಂಡಿಂಗ್ ಮಾಡಬೇಕಾಗಿತ್ತು. ಇದರಿಂದಾಗಿ ಹೊಲದಲ್ಲಿಯೇ ವಿಮಾನವನ್ನು ಇಳಿಸಲಾಗಿದೆ ಎಂದು ಚಿಲ್ಕ ಮಹೇಶ್ ತಿಳಿಸಿದ್ದಾರೆ.
ದೆಹಲಿಯಿಂದ ವಿಶೇಷ ವಿಮಾನದಲ್ಲಿ ಹೊರಟಿರುವ ತಾಂತ್ರಿಕ ತಂಡ ಬಂದ ಬಳಿಕವೇ ವಿಮಾನದಲ್ಲಿನ ದೋಷ ಹಾಗೂ ಅದರ ಪ್ರಮಾಣ ಗೊತ್ತಾಗಲಿದೆ ಎಂದು ಅವರು ವಿವರಿಸಿದರು.