ಕಲಬುರಗಿ: ಕಳೆದ 2013ರಲ್ಲೇ ಪಾಲಿಕೆ ಚುನಾವಣೆ ನಡೆದು ಈಗ 6 ವರ್ಷಗಳಾದರೂ ಕಲಬುರಗಿ ಪಾಲಿಕೆಗೆ ಚುನಾವಣೆ ಮುಹೂರ್ತ ಕೂಡಿ ಬರುತ್ತಿಲ್ಲ.
ಚುನಾವಣೆ 2013ರಲ್ಲಿ ಚುನಾವಣೆ ನಡೆದು ನೂತನ ಪಾಲಿಕೆ ಸದಸ್ಯರಾಗಿ ಆಯ್ಕೆಯಾದರೂ 2014ರ ಏಪ್ರಿಲ್ 2ರಂದು ಸದಸ್ಯರ ಆಡಳಿತ ಅಸ್ತಿತ್ವಕ್ಕೆ ಬಂದಿದ್ದರಿಂದ ಇದೀಗ ಐದು ವರ್ಷಗಳು ಪೂರ್ಣಗೊಂಡಿದ್ದರಿಂದ ಚುನಾವಣೆ ಘೋಷಣೆಯಾಗಬೇಕಿತ್ತು. ಆದರೆ ವಾರ್ಡ್ ಮೀಸಲಾತಿ ಗೊಂದಲದಿಂದ ಚುನಾವಣೆ ಮುಂದಕ್ಕೆ ಹೋಗಿದೆ. ಹೀಗಾಗಿ ಕಲಬುರಗಿ ಮಹಾನಗರ ಪಾಲಿಕೆ ಸೇರಿದಂತೆ ಜಿಲ್ಲೆಯಲ್ಲಿ ಯಾವುದೇ ಸ್ಥಳೀಯ ನಗರ ಸಂಸ್ಥೆಗಳಿಗೆ ಚುನಾವಣೆ ನಡೆಯುತ್ತಿಲ್ಲ. ಹೀಗಾಗಿ ಸೂರ್ಯನಗರಿ ಮಿನಿ ಎಲೆಕ್ಷನ್ ಸಮರದಿಂದ ಕೊಂಚ ದೂರವಿರುವ ಸಾಧ್ಯತೆ ಇದೆ. ಒಂದು ವೇಳೆ ಅಧಿಸೂಚನೆಯೊಳಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ ತೋರಿಸಿದರೆ ಮಾತ್ರ ನಡೆಯಲಿದೆ. ಆದರೆ ಮೀಸಲಾತಿ ಸಂಬಂಧ ಹೈಕೋರ್ಟ್‌ನಲ್ಲಿ ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆ ಮುಂದಿನ ತಿಂಗಳು ಮೇ. 28ಕ್ಕೆ ನಿಗದಿಯಾಗಿದೆ.
ರಾಜ್ಯ ಚುನಾವಣಾ ಆಯೋಗ ರಾಜ್ಯದ ಸ್ಥಳೀಯ ಸಂಸ್ಥೆಗಳಿಗೆ ಮೇ 29ರಂದು ಚುನಾವಣೆ ಘೋಷಣೆ ಮಾಡಿದೆ. ಆದರೆ, ಅದರೊಟ್ಟಿಗೆ ಅವಧಿ ಮುಗಿದಿರುವ ಕಲಬುರಗಿ ಮಹಾನಗರ ಪಾಲಿಕೆಗೆ ಚುನಾವಣೆ ನಡೆಯಬೇಕಾಗಿತ್ತು. ಆದರೆ, ಈ ವಾರ್ಡ್‌ಗಳ ಪುನರ್‌ವಿಂಗಡಣೆ ಅವೈಜ್ಞಾನಿಕವಾಗಿ ಮಾಡಲಾಗಿದೆ. ಅಲ್ಲದೇ ಮೀಸಲಾತಿ ನಿಗದಿ ನಿಯಮದಂತೆ ಮಾಡಿಲ್ಲ ಎಂದು ಪಾಲಿಕೆ ಸದಸ್ಯರಾಗಿದ್ದ ಹುಲಿಗೆಪ್ಪ ಕನಕಗಿರಿ, ಪರಶುರಾಮ ನಸಲವಾಯಿ ಇನ್ನಿತರರು ಹೈಕೋರ್ಟ್‌ಗೆ ಮೊರೆ ಹೋಗಿದ್ದರು. ಆ ಅರ್ಜಿ ಪರಿಗಣಿಸಿ ಗುಲ್ಬರ್ಗ ಹೈಕೋರ್ಟ್ ಪೀಠ ಕೆಲವು ದಿನಗಳ ಹಿಂದೆಯೇ ಚುನಾವಣೆಗೆ ತಡೆಯನ್ನು ನೀಡಿ ಸರ್ಕಾರ ಮತ್ತು ಜಿಲ್ಲಾ ಚುನಾವಣಾಧಿಕಾರಿಗಳಿಗೆ ಮತ್ತಿತರ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿತ್ತು.
ತಡೆಯಾಜ್ಞೆ ಇರುವುದರಿಂದ ಮತ್ತು ವಾರ್ಡ್‌ಗಳ ಪುನರ್‌ವಿಂಗಡನೆ ಮತ್ತು ಮೀಸಲಾತಿ ಸರಿಪಡಿಸುವ ಕುರಿತು ನ್ಯಾಯಪೀಠ ನೀಡುವ ತೀರ್ಪಿನ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಹೀಗಾಗಿ ಪಾಲಿಕೆಗೆ ಚುನಾವಣೆ ನಡೆಯುವುದಿಲ್ಲ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ. ಅಧಿಸೂಚನೆ ಪ್ರಕಟಿಸುವುದರೊಳಗೆ ಹೈಕೋರ್ಟ್ ಅರ್ಜಿಯನ್ನು ವಿಲೇವಾರಿ ಮಾಡಿದರೆ ಮಾತ್ರ ಚುನಾವಣೆ ನಡೆಯುವ ಸಾಧ್ಯತೆ ಇದೆ.
ಜಿಲ್ಲೆಯ ಜನರು ಲೋಕಸಭೆ ಚುನಾವಣೆ ಬಳಿಕ ಈಗ ಚಿಂಚೋಳಿ ಉಪಚುನಾವಣೆ ಗುಂಗಿನಲ್ಲಿದ್ದಾರೆ. ಅದರೊಳಗೆ ಪಾಲಿಕೆ ಚುನಾವಣೆ ಮುಗಿದಿದ್ದರೆ ಒಟ್ಟೊತ್ತಿಗೆ ಚುನಾವಣೆ ಮುಗಿದಂತಾಗುತ್ತಿತ್ತು. 2013ರ ರ ಮುಂಚಿನ ಪಾಲಿಕೆ ಸದಸ್ಯರ ಅವಧಿಯೂ ಆರು ವರ್ಷಗಳ ಕಾಲ ಇತ್ತು ಎನ್ನುವುದು ಮತ್ತೂಂದು ವಿಶೇಷ. ಐದು ವರ್ಷಗಳ ಕಾಲ ಪಾಲಿಕೆ ಸದಸ್ಯತ್ವ ಅವಧಿವಿದ್ದರೂ ಚುನಾವಣೆ ನಡೆದ ತಕ್ಷಣ ಮೇಯರ್ ಚುನಾವಣೆ ನಡೆಯದೇ ಆರು ತಿಂಗಳು ಇಲ್ಲವೇ ವರ್ಷ ಕಾಲ ಸಮಯದೂಡುವುದರಿಂದ ಮೇಯರ್ ಚುನಾವಣೆ ದಿನದಿಂದಲೇ ಅವಧಿ ಪ್ರಾರಂಭವಾಗುವುದರಿಂದ ಹೀಗೆ ಆರೇಳು ವರ್ಷಕ್ಕೊಮ್ಮೆ ಪಾಲಿಕೆಗೆ ಚುನಾವಣೆ ನಡೆಯುತ್ತಿದೆ