ಕಲಬುರಗಿ: ಅಖೀಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬಿಸಿಲು ನಾಡು, ತೊಗರಿಯ ಕಣಜ ಕಲಬುರಗಿಯಲ್ಲಿ ನಡೆಸುವ ಕುರಿತು ನಿರ್ಣಯಿಸಿ ಎಂಟು ತಿಂಗಳು ಕಳೆಯುತ್ತ ಬಂದರೂ ಯಾವುದೇ ಸಿದ್ಧತೆಗಳು ನಡೆಯದೇ ಇರುವುದರಿಂದ ಸಮ್ಮೇಳನ ನಿಗದಿತ ಸಮಯಕ್ಕೆ ನಡೆಯುವುದೇ ಎನ್ನುವ ಅನುಮಾನ ಕಾಡಲಾರಂಭಿಸಿದೆ.
ಧಾರವಾಡದಲ್ಲಿ ಕಳೆದ ಜನವರಿ 4 ಮತ್ತು 5ರಂದು ನಡೆದ ಅಖೀಲ ಭಾರತ 84ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭ ಕಸಾಪ ಕಾರ್ಯಕಾರಿಣಿ ಸಭೆಯಲ್ಲಿ ಕಲಬುರಗಿಯಲ್ಲಿ ಮುಂದಿನ ಸಮ್ಮೆಳನ ನಡೆಸುವ ಕುರಿತು ನಿರ್ಣಯ ಕೈಗೊಳ್ಳಲಾಗಿತ್ತು.ಬರೋಬ್ಬರಿ 32 ಸುದೀರ್ಘ ವರ್ಷಗಳ ನಂತರ ಕಲಬುರಗಿಗೆ ಕನ್ನಡ ತೇರು ಎಳೆಯುವ ಸೌಭಾಗ್ಯ ದೊರೆತಿರುವುದರಿಂದ ಸಾಹಿತಿಗಳು, ಸಾಹಿತ್ಯಾಸಕ್ತರು ಹಾಗೂ ಈ ಭಾಗದ ಜನ ಸಮ್ಮೇಳನವನ್ನು ಕಾತರದಿಂದ ಎದುರು ನೋಡುತ್ತಿದ್ದಾರೆ.
ಹಿನ್ನಡೆಗೆ ಕಾರಣ?: ಜನವರಿಯಲ್ಲಿ ಕಲಬುರಗಿಯಲ್ಲಿ ಸಮ್ಮೇಳನ ನಡೆಸುವ ಕುರಿತು ನಿರ್ಣಯವಾದ ನಂತರ ಲೋಕಸಭೆ ಚುನಾವಣೆ ಮುಂಚೆ ಒಂದೆರಡು ಔಪಚಾರಿಕ ಸಭೆ ನಡೆಸಲಾಗಿತ್ತು. ಆದರೆ ಯಾವುದೇ ನಿರ್ಧಾರ-ಸಿದ್ಧತೆ ಕುರಿತು ಚರ್ಚಿಸಿರಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರೇ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾಗಿರುವುದರಿಂದ ಆಗ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಲೋಕಸಭೆ ಚುನಾವಣೆ ನಂತರ ಸಭೆ ಸೇರಿ ಸಮ್ಮೇಳನ ಸಂಬಂಧ ಸಭೆ ನಡೆಸುವುದಾಗಿ ಹೇಳಿದ್ದರು. ಹೀಗಾಗಿ ಮೂರು ತಿಂಗಳು ಯಾವುದೇ ಚರ್ಚೆ ನಡೆಯಲಿಲ್ಲ. ಲೋಕಸಭೆ ಚುನಾವಣೆ ನಂತರವೂ ಸಮ್ಮೇಳನ ಚರ್ಚೆ ಶುರುವಾಗಲಿಲ್ಲ. ಇದರ ನಡುವೆ ರಾಜ್ಯ ರಾಜಕೀಯದಲ್ಲಿ ಕ್ಷಿಪ್ರ ಬೆಳವಣಿಗೆ ನಡೆದವು. ಉಸ್ತುವಾರಿ ಸಚಿವರು ಇದರಲ್ಲೇ ಕಾರ್ಯನಿರತರಾದರು. ತದನಂತರ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ತಿಂಗಳಾಗುತ್ತ ಬಂದರೂ ಉಸ್ತುವಾರಿ ಸಚಿವರ ನೇಮಕವಾಗಲಿಲ್ಲ. ಸಮ್ಮೇಳನ ಸ್ವಾಗತ ಸಮಿತಿಯೂ ರಚನೆಯಾಗಲಿಲ್ಲ. ಜತೆಗೆ ಯಾವುದೇ ಚರ್ಚೆ-ಸಿದ್ಧತೆಗಳು ನಡೆಯಲಿಲ್ಲ.
ಕಸಾಪ ಅವಧಿ ಸಹ ಕಾರಣ: ಕಲಬುರಗಿಯಲ್ಲಿ ನಿಗದಿತ ಸಮಯಕ್ಕೆ ಸಮ್ಮೇಳನ ನಡೆಯಲು ಕೇವಲ ಮೂರು ತಿಂಗಳು ಉಳಿದಿದ್ದರೂ ಸಮ್ಮೇಳನ ದಿನಾಂಕ-ಸ್ಥಳ ಸೇರಿದಂತೆ ಇತರೆ ಯಾವುದೇ ವಿಷಯ ಕುರಿತು ಒಮ್ಮೆಯೂ ಕಸಾಪದ ಕಾರ್ಯಕಾರಿಣಿಯಲ್ಲಿ ಚರ್ಚೆಯಾಗಿಲ್ಲ. ಇದಕ್ಕೆ ಕಸಾಪ ಅಧ್ಯಕ್ಷರ ಅವಧಿ ಐದು ವರ್ಷ ಹೆಚ್ಚಿಸಿರುವ ವಿಷಯ ಇತ್ಯರ್ಥಗೊಳ್ಳದೇ ನ್ಯಾಯಾಲಯದಲ್ಲಿ ಇರುವುದು ಸಹ ಮತ್ತೂಂದು ಕಾರಣವಾಗಿದೆ.
ಕಲಬುರಗಿ ಸಮ್ಮೇಳನ ಇತಿಹಾಸ: 1987ರಲ್ಲಿ ಸಿದ್ಧಯ್ಯ ಪುರಾಣಿಕ ಅಧ್ಯಕ್ಷತೆಯಲ್ಲಿ 58ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ನಂತರ ಇಲ್ಲಿಯವರೆಗೂ ಕಲಬುರಗಿಗೆ ಅವಕಾಶ ಒಲಿದು ಬಂದಿರಲಿಲ್ಲ. ಕಲಬುರಗಿಯಲ್ಲಿ ಪ್ರಥಮ ಬಾರಿಗೆ ಸ್ವಾತಂತ್ರ್ಯ ಪೂರ್ವ 1928ರಲ್ಲಿ ಬಿ.ಎಂ. ಶ್ರೀಕಂಠಯ್ಯ ಅಧ್ಯಕ್ಷತೆಯಲ್ಲಿ, 1949ರಲ್ಲಿ ರೇ. ಉತ್ತಂಗಿ ಚೆನ್ನಬಸವಪ್ಪ ಅಧ್ಯಕ್ಷತೆಯಲ್ಲಿ ಹಾಗೂ 1987ರಲ್ಲಿ ಸಿದ್ಧಯ್ಯ ಪುರಾಣಿಕ ಅಧ್ಯಕ್ಷತೆಯಲ್ಲಿ ಅ.ಭಾ.ಕನ್ನಡ ಸಾಹಿತ್ಯ ಸಮ್ಮೇಳನಗಳು ನಡೆದಿವೆ. ಈ ಮೂರೂ ಸಮ್ಮೇಳನಗಳನ್ನು ಮಹಾದಾಸೋಹಿ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿಗಳೇ ಮುಂದೆ ನಿಂತು ಮಾಡಿದ್ದಾರೆ. ಈಗಂತೂ ಅನೇಕ ಸಂಘ-ಸಂಸ್ಥೆಗಳು ಸಮ್ಮೇಳನಕ್ಕೆ ಕೈಜೋಡಿಸಲು ಉತ್ಸುಕತೆ ಹೊಂದಿವೆ. ಹೀಗಾಗಿ ಸಮ್ಮೇಳನ ಕಲಬುರಗಿಗೆ ಬಂದಿರುವುದು ದೊಡ್ಡ ಸೌಭಾಗ್ಯ ಎಂದೇ ವಿಶ್ಲೇಷಿಸಲಾಗುತ್ತಿದೆ. ಆದರೆ ಕನ್ನಡ ತೇರನೆಳೆಯುವ ಕುರಿತಾಗಿ ಯಾವುದೇ ಚಟುವಟಿಕೆ ನಡೆಯದಿರುವುದು ಮಂಕು ಕವಿದಂತಾಗಿದೆ.