Advertisement

ವಲಸೆ ಕಾರ್ಮಿಕರ ವಾಪಸಾತಿಗೆ ಮನವಿ

11:47 AM May 01, 2020 | Naveen |

ಕ‌ಲಬುರಗಿ: ಹೊರ ರಾಜ್ಯದಲ್ಲಿರುವ ಕನ್ನಡಿಗರನ್ನು ವಿಶೇಷವಾಗಿ ಕಲ್ಯಾಣ ಕರ್ನಾಟಕದ ಜನರು ಹಾಗೂ ವಲಸೆ ಕಾರ್ಮಿಕರನ್ನು ರಾಜ್ಯಕ್ಕೆ ಕರೆತರಲು ಕ್ರಮ ಕೈಗೊಳ್ಳಬೇಕೆಂದು ಸಂಸದ ಡಾ| ಉಮೇಶ್‌ ಜಾಧವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಮನವಿ ಮಾಡಿದರು.

Advertisement

ಬೆಂಗಳೂರಿನಲ್ಲಿ ಗುರುವಾರ ಮುಖ್ಯಮಂತ್ರಿಗಳನ್ನು ಭೇಟಿಯಾದ ಸಂಸದರು, ಹೊರ ರಾಜ್ಯದಲ್ಲಿರುವ ಕನ್ನಡಿಗರು ಮತ್ತು ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಿಸಿ, ಅವರವರ ಊರಿಗೆ ಕರೆತರಲು ಸಹಕಾರ ನೀಡುವಂತೆ ಕೋರಿದರು. ಮುಂಬೈ ಸೇರಿದಂತೆ ಮಹಾರಾಷ್ಟ್ರದಲ್ಲಿ ಕಲಬುರಗಿ ಗ್ರಾಮೀಣ ಪ್ರದೇಶಗಳ ಸುಮಾರು 25ರಿಂದ 30 ಸಾವಿರ ಜನರಿದ್ದಾರೆ. ನೆರೆಯ ತೆಲಂಗಾಣ, ಆಂಧ್ರಪ್ರದೇಶ ಮುಂತಾದೆಡೆಯಲ್ಲಿಯೂ ಜಿಲ್ಲೆಯ ಜನರಿದ್ದಾರೆ. ಇವರೆಲ್ಲರನ್ನು ಕರೆತರುವ ವ್ಯವಸ್ಥೆಯಾಗಬೇಕು ಎಂದರು.

ಒಂದುವೇಳೆ ಲಾಕ್‌ಡೌನ್‌ ಹಿನ್ನಲೆಯಲ್ಲಿ ಕರೆತರಲು ಸಾಧ್ಯವಾಗದಿದ್ದರೆ ಜನರು ಯಾವ ರಾಜ್ಯದಲ್ಲಿ ಇದ್ದಾರೋ ಅವರಿಗೆಲ್ಲ ಅಲ್ಲಿಯ ಸರ್ಕಾರದ ಜೊತೆ ಮಾತನಾಡಿ, ಊಟೋಪಚಾರ ಕಲ್ಪಿಸಬೇಕು. ಗರ್ಭಿಣಿ, ಬಾಣಂತಿಯರು, ವಿವಿಧ ಕಾಯಿಲೆಗಳಿಂದ ಬಳಲುವಂತವರಿದ್ದರೆ ಅವರಿಗೆಲ್ಲ ಮಾತ್ರೆ, ಔಷಧಿ ವ್ಯವಸ್ಥೆ ಮಾಡಬೇಕು ಎಂದು ಕೋರಿದರು. ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿಗಳು, ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಹಾಗೆಯೇ ಜಿಲ್ಲೆಯಲ್ಲಿ ಸಂಸದರು, ಶಾಸಕರು ಹಾಗೂ ಜಿಲ್ಲಾಡಳಿತದಿಂದ ಒಳ್ಳೆಯ ಕೆಲಸ ನಡೆಯುತ್ತಿದ್ದು, ಆದಷ್ಟು ಬೇಗ ಕೋವಿಡ್ ಮುಕ್ತ ಜಿಲ್ಲೆ ಮಾಡುವಂತೆ ಸಿಎಂ ಸೂಚಿಸಿದ್ದಾರೆ ಎಂದು ಜಾಧವ ತಿಳಿಸಿದ್ದಾರೆ. ವಿಧಾನ ಪರಿಷತ್‌ ಸದಸ್ಯ ಬಿ.ಜಿ. ಪಾಟೀಲ, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಈ ಸಂದರ್ಭದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next