Advertisement

ಏದಲಭಾವಿಯಲ್ಲಿದೆ ಅತ್ಯುತ್ತಮ ಪರಿಸರ ಶಾಲೆ

01:49 PM Dec 14, 2019 | Naveen |

ಬಾಲಪ್ಪ ಎಂ. ಕುಪ್ಪಿ
ಕಕ್ಕೇರಾ
: ಅತ್ಯುತ್ತಮ ಪರಿಸರದೊಂದಿಗೆ ಏದಲಭಾವಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಂಗೊಳಿಸುತ್ತಿದೆ. ಮಕ್ಕಳಿಗಾಗಿ ಕೈತೋಟ ನಿರ್ಮಿಸಿ ಮೆಣಸಿಕಾಯಿ, ಟೋಮ್ಯಾಟೋ ಹಾಗೂ ಇನ್ನಿತರ ಕಾಯಿಪಲ್ಯ ಬೆಳೆಸಲಾಗಿದೆ. ಶಾಲೆ ಆವರಣದೊಳಗೆ ತೆಂಗು, ಅಶೋಕ ಮರಗಳಿವೆ. ಉದ್ಯಾನ ನಿರ್ಮಿಸಿ ಹಸಿರು ವಾತಾವರಣ ಸೃಷ್ಟಿಸಲಾಗಿದೆ. ಮಕ್ಕಳ ಆಟೋಟಕ್ಕೆ ಉತ್ತಮ ಆವರಣ ಇದೆ.

Advertisement

2012-13 ಸಾಲಿನ ಸರ್ವ ಶಿಕ್ಷಣ ಅಭಿಯಾನದಲ್ಲಿ ಸುಸಜ್ಜಿತವಾಗಿ 11 ಕೊಠಡಿ ನಿರ್ಮಿಸಲಾಗಿದೆ. ಗೋಡೆ ಮೇಲೆ ರಾಷ್ಟ್ರನಾಯಕರ ಭಾವಚಿತ್ರ, ರಾಷ್ಟ್ರ ಪ್ರಾಣಿ, ಪಕ್ಷಿ ಚಿತ್ರ ಚಿತ್ರಿಸಲಾಗಿದೆ. ಹಾಗೇ ಹಸಿರು ಹುಲ್ಲಿನ ಹಾಸಿನಲ್ಲಿ ಕರ್ನಾಟಕ, ಭಾರತ ನಕ್ಷೆ ಚಿತ್ರಿಸಲಾಗಿದೆ. 2014-15ನೇ ಸಾಲಿನಲ್ಲಿ ಹಸಿರು ಶಾಲೆ ಜಿಲ್ಲಾ ಪ್ರಶಸ್ತಿ ಕೂಡ ಲಭಿಸಿದೆ.

ಒಟ್ಟಾರೆ ಸುಂದರ ಪರಿಸರ ನಡುವೆ ಏದಲಭಾವಿ ಶಾಲೆ ಇತರ ಶಾಲೆಗಳಿಗೆ ಮಾದರಿಯಾಗಿದೆ ಎಂದು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಬಿಸಿಯೂಟ ತಯಾರಿಸಲು ಉತ್ತಮ ಅಡುಗೆ ಕೋಣೆ, ಕುಡಿಯುವ ನೀರಿನ ವ್ಯವಸ್ಥೆ ಇದೆ. ಗುಣಮಟ್ಟದ ಶೌಚಾಲಯ ನಿರ್ಮಿಸಿ ಸ್ವಚ್ಚತೆ ಕಾಪಾಡಿಕೊಂಡು ಬರಲಾಗಿದೆ. ಹಾಗಾಗಿ ವಿದ್ಯಾರ್ಥಿಗಳಿಗೆ ಸಮಸ್ಯೆ ಇಲ್ಲ. ಅಭ್ಯಸಿಸಲು ಗ್ರಂಥಾಲಯ ಸಹ ಇದೆ. ಇನ್ನೂ ಹೆಚ್ಚಿನ ಶಿಕ್ಷಣ ನೀಡಲು ಎಲ್‌ಸಿಡಿ ಪ್ರೋಜೆಕ್ಟ್ ಇದ್ದು, ಬಹು ವಿಷಯ ಆಧಾರಿತ ಸಿಡಿಗಳ ಮೂಲಕ ವಿದ್ಯಾರ್ಥಿಗಳಿಗೆ ಪಠ್ಯೇತರ ಬೋಧನೆ ನಡೆಸಿಕೊಂಡು ಬರಲಾಗುತ್ತಿದೆ. ಹಾಗೇ ಮಕ್ಕಳಲ್ಲಿ ಕಲಿಕಾ ಆಸಕ್ತಿ ಮೂಡಿಸಲು ಕ್ಯಾಸಿಯೋ ಮೂಲಕ ಸಂಗೀತ ಕೂಡ ಹೇಳಿಕೊಡಲಾಗುತ್ತಿದೆ.

ಶಾಲೆ 1ರಿಂದ 8ನೇ ತರಗತಿಗಳಿವೆ. ಮೂವರು ಜನ ಖಾಯಂ ಶಿಕ್ಷಕರು ಹಾಗೂ ಮೂರು ಜನ ಅತಿಥಿ ಶಿಕ್ಷಕರು ಇದ್ದಾರೆ. ಇಂಗ್ಲಿಷ್‌ ಹಾಗೂ ಹಿಂದಿ ಸೇರಿ ಇಬ್ಬರು ಶಿಕ್ಷಕರು ಕೊರತೆ ಇದೆ. ಹೀಗಾಗಿ ಎರಡು ವಿಷಯಗಳ ಮೇಲೆ ಹಿಡಿತ ಸಾಧಿಸಲು ಶಿಕ್ಷಕರನ್ನು ನೇಮಿಸುವುದು ಅವಶ್ಯಕವಿದೆ ಎನ್ನುತ್ತಾರೆ ಶಿಕ್ಷಕರು.

ಒಟ್ಟು 217 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಪ್ರತಿ ವರ್ಷ ಉತ್ತಮ ಫಲಿತಾಂಶ ಬರುತ್ತದೆ. ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿ ಡೊಳ್ಳು ಕುಣಿತ, ಹಾಗೂ ನಾಟಕ ಪ್ರದರ್ಶಿಸಿ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದಿದ್ದು ಶಾಲೆಗೆ ಹೆಮ್ಮೆ ವಿಷಯ ಎಂದು ಶಿಕ್ಷಕರು ತಿಳಿಸಿದ್ದಾರೆ.

Advertisement

ಗ್ರಾಮಸ್ಥರ ಸಹಕಾರದಿಂದ ಶಾಲೆ ಅಭಿವೃದ್ಧಿ ಮಾಡಲಾಗಿದೆ. ಪರಿಸರವೇ ಮಕ್ಕಳಿಗೆ ಹೆಚ್ಚಿನ ಜ್ಞಾನತಂದು ಕೊಡುವಂತಿದೆ. ಇಬ್ಬರು ಶಿಕ್ಷಕರ ಅವಶ್ಯಕತೆ ಇದೆ. ವಿದ್ಯಾರ್ಥಿಗಳಿಗೆ ಉತ್ತಮ ಬೋಧನೆ ಮಾಡಿಕೊಂಡು ಬರಲಾಗುತ್ತಿದೆ.
ಸಂಗಪ್ಪ ಡಿ. ವಿಶ್ವಕರ್ಮ,
ಪ್ರಧಾನ ಗುರುಗಳು, ಏದಲಭಾವಿ

ಅತ್ಯುತ್ತಮ ಶಾಲೆಯಿಂದ ನಮ್ಮೂರಿನ ಘನತೆ ಹೆಚ್ಚಿಸಿದೆ. ಕಲಿಕಾ ಗುಣಮಟ್ಟ ಸಾಧಿಸಲು ಶಿಕ್ಷಕರ ಬೇಕಿದೆ. ಇನ್ನು ಅಭಿವೃದ್ಧಿಗೆ ಪ್ರಯತ್ನಿಸಲಾಗುವುದು.
ಹುಲಗಪ್ಪ ಬಾಚಿಹಾಳ,
ಎಸ್‌ಡಿಎಂಸಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next