ಕಕ್ಕೇರಾ: ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಪ್ರತಿಯೊಂದು ಸರಕಾರದ ನಾಯಕರು ಗುಡಿಸಲು ಮುಕ್ತ ರಾಜ್ಯ ನಿರ್ಮಾಣ ಮಾಡುವುದೇ ನಮ್ಮ ಗುರಿ ಎಂದು ಬೀಗುತ್ತ ಬಂದಿದ್ದಾರೆ. ಆದರೆ ಇವರೆಗೂ ಅದು ಸಾಧ್ಯವಾಗಿಲ್ಲ ಎಂಬುದಕ್ಕೆ ಇಲ್ಲಿದೆ ತಾಜಾ ನಿದರ್ಶನ!
ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಬರುವ (20ನೇ ವಾರ್ಡ್) ಗುಡೇರ ದೊಡ್ಡಿ, ಕುರೇರ ದೊಡ್ಡಿ, ಜಂಪಾರ ದೊಡ್ಡಿ, ಹಳ್ಳೇರ ದೊಡ್ಡಿ ಹೀಗೆ ಹತ್ತು ಹಲವು ದೊಡ್ಡಿಗಳೇ ಅಧಿಕವಾಗಿರುವ ಇಲ್ಲಿನ ಬಹುತೇಕ ಕಡುಬಡವರಿಗೆ ಸರಕಾರ ವಿವಿಧ ವಸತಿ ಯೋಜನೆಯಡಿ ಮನೆಗಳ ದೊರಕದೇ ಇಲ್ಲಿಯವರೆಗೂ ಗುಡಿಸಲಗಳಲ್ಲಿಯೇ ಜೀವನ ದೂಡುವ ಮನಕಲಕುವ ಸ್ಥಿತಿ ಇದೆ.
ಗುಡೇರದ ಡೊಡ್ಡಿಯ ಬಾಲಮ್ಮ ಜಂಪಾ ಎಂಬ ಅವಿಭಕ್ತ ಬಡಕುಟುಂಬಕ್ಕೆ ವಸತಿ ಸೂರು ಇಲ್ಲದೆ ಅನೇಕ ವರ್ಷಗಳಿಂದ ಗುಡಿಸಲ್ಲೇ ಜೀವನವಾಗಿಸಿ ಕೊಂಡಿದ್ದಾರೆ. ಮಳೆ ಗಾಳಿ ಬೀಸಿದರೆ ಕಿತ್ತಿಕೊಂಡು ಹೋಗುವ ಪುಟ್ಟಗುಡಿಸಲಲ್ಲಿ ವಾಸ ಮಾಡುತ್ತ್ತ ಚಳಿ ಹೀಗೇ ಹಲವಾರು ಸಮಸ್ಯೆ ಎದುರಿಸಿಕೊಂಡು ಗುಡಿಸಲೇ ಆಧಾರವಾಗಿಸಿಕೊಂಡು ನಿರ್ಗತಿಕರಾಗಿದ್ದೇವೆ ಎನ್ನುತ್ತಾರೆ ನಿವಾಸಿಗರು.
ಇನ್ನುಳಿದಂತೆ ಕೆಲವರು ಶೆಡ್‌ಗಳ ನಿರ್ಮಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಒಟ್ಟು 100 ಮನೆಗಳಿದ್ದು, ಅವುಗಳಲ್ಲಿ 30 ಕುಟುಂಬಗಳಿಗೆ ಆಶ್ರಯ ಮನೆಗಳಿಂದ ವಂಚಿತರಾಗಿದ್ದಾರೆ. ವಿಚಿತ್ರ ಎಂದರೆ ಸರಕಾರದಿಂದ ನಿರೀಕ್ಷೆ ಮೀರಿ ವಸತಿ ಸೂರು ಕಲ್ಪಿಸಲಾಗುತ್ತಿದೆ. ಆದರೆ ಜನಪ್ರತಿನಿಧಿಗಳ ಆಸಕ್ತಿ ಕೊರತೆ ಅಥವಾ ಬೋಗಸ್ ದಂಧೆಯೋ ನಿಜವಾದ ಕಡುಬಡವರಿಗೆ ಮಾತ್ರ ಮನೆಗಳು ದೊರಕುತ್ತಿಲ್ಲ. ಹೀಗಾಗಿ ಆಶ್ರಯ ವಸತಿ ಯೋಜನೆಗಳು ಶ್ರೀಮಂತರ ಪಾಲಾಗುತ್ತಿವೆ. ಈ ಕಾರಣದಿಂದ ಬಡವರು ಗುಡಿಸಲಂತ ಮನೆಗಳಿಂದ ಹೊರಬಂದು ಸುರಕ್ಷತೆ ಸೂರಿನಡಿ ವಾಸ ಮಾಡಲು ಸಾಧ್ಯವಾಗಿಲ್ಲ ಎನ್ನಲಾಗುತ್ತಿದೆ.ಈಗಾಗಲೇ ಪುರಸಭೆಗೆ 2018-19ನೇ ಸಾಲಿನಲ್ಲಿ ವಾಜಪೇಯಿ ನಗರ ವಸತಿ ಯೋಜನೆಯಡಿ ಒಟ್ಟು 55 ಮನೆಗಳ ಗುರಿ ಹೊಂದಲಾಗಿದೆ. ಕಳೆದ 2016-17ನೇ ಸಾಲಿನಲ್ಲಿ 360 ಅಂಬೇಡ್ಕರ ಆವಾಸ್ ಯೋಜನೆಯಲ್ಲಿ ಮನೆಗಳು ಮಂಜೂರ ಪಡಿಸಲಾಗಿತ್ತು. ಆದರೆ ಸೂರು ಇಲ್ಲದ ಫಲಾನುಭವಿಗಳ ಗುರುತಿಸದೇ ಇರುವುದರಿಂದ ವಸತಿ ಯೋಜನೆ ಬಡವರಿಗೆ ದಕ್ಕಿಲ್ಲ. ಬಡವರಿಗೆ ಆಶ್ರಯ ಮನೆ ಕಲ್ಪಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಮುಂದಾಗಬೇಕು ಎಂಬುದು ಜನರ ಆಗ್ರಹವಾಗಿದೆ.