Advertisement

ಸೋಮನಾಥ ಜಾತ್ರೆಗೆ ಮೂಲ ಸೌಕರ್ಯ

12:22 PM Jan 01, 2020 | Naveen |

ಕಕ್ಕೇರಾ: ಜ.13ರಿಂದ ಜ.23ರ ವರೆಗೆ ನಡೆಯಲಿರುವ ಸೌರಾಷ್ಟ್ರ ಅಧಿಪತಿ ಸೋಮನಾಥ ಜಾತ್ರಾ ಮಹೋತ್ಸವಕ್ಕೆ ಅಗತ್ಯ ಸೌಕರ್ಯಗಳ ಕಲ್ಪಿಸಲಾಗುವುದು ಎಂದು ತಹಶೀಲ್ದಾರ್‌ ನಿಂಗಣ್ಣ ಬಿರಾದಾರ ಹೇಳಿದರು.

Advertisement

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಜಾತ್ರಾ ಮಹೋತ್ಸವದ ನಿಮಿತ್ತ ಮಂಗಳವಾರ ನಡೆದ ಪೂರ್ವಸಿದ್ಧತಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತರಿಗೆ ನೀರಿನ ಸೌಕರ್ಯ ಮತ್ತು ಬೆಳಕಿನ ವ್ಯವಸ್ಥೆ ಮಾಡಬೇಕು. ಅಲ್ಲದೆ ಅಲ್ಲಲ್ಲಿ ಬ್ಲಿಚಿಂಗ್‌ ಪೌಡರ್‌ ಸಿಂಪರಣೆ ಮಾಡಿ ಸ್ವಚ್ಛತೆ ಕಾಪಾಡಬೇಕು. ಆರೋಗ್ಯ ಸೇವೆ
ಒದಗಿಸುವುದು ಮತ್ತು ಧೂಳು ಹರಡದಂತೆ ಟ್ಯಾಂಕರ್‌ ಮೂಲಕ ನೀರು ಸಿಂಪಡಿಸಬೇಕು ಎಂದು ಸಂಬಂಧಿಸಿದ ವಿವಿಧ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಜ. 17ರಂದು ನಡೆಯುವ ಜಾನುವಾರುಗಳ ಜಾತ್ರೆಯಲ್ಲಿ ಪಶು ಆಸ್ಪತ್ರೆ ತೆರೆಯಬೇಕು. ಎಪಿಎಂಸಿ ವತಿಯಿಂದ ಅತ್ಯುತ್ತಮ ರಾಸುಗಳಿಗೆ ಬಹುಮಾನ ವಿತರಿಸಬೇಕು. ಅಲ್ಲದೇ ವಿವಿಧ ಜಿಲ್ಲೆಗಳಿಂದ ಬರುವ ಭಕ್ತರಿಗೆ ವಿಶೇಷ ಸಾರಿಗೆ ಸೌಲಭ್ಯ ಒದಗಿಸಬೇಕು ಎಂದು ಸೂಚಿಸಿದರು.

ಜಾತ್ರಾ ಮಹೋತ್ಸವದಲ್ಲಿ ಅಗತ್ಯ ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗುವುದು. ಸಂಚಾರ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಅಲ್ಲದೆ ಸಾರ್ವಜನಿಕರು ಕೂಡ ಅಂದು ಸಹಕರಿಸಬೇಕು ಎಂದು ಹೇಳಿದರು.

Advertisement

ಗುಡಾರ ಹರಾಜು: ಸೋಮನಾಥ ಜಾತ್ರಾ ಮಹೋತ್ಸವದ ನಿಮಿತ್ತ ಗುಡಾರಪಟ್ಟಿ ಹರಾಜು ಮಾಡಲಾಯಿತು. ಈ ವೇಳೆ ಮಹ್ಮದಸಾಬ್‌
ಚೌದ್ರಿ ಹಾಗೂ ರಸೂಲಸಾಬ್‌ ಸುರಪುರ 1 ಲಕ್ಷ ರೂ.ಗೆ ಗುಡಾರಪಟ್ಟಿ ಹರಾಜು ಪಡೆದರು. ಆದರೆ ಟೆಂಗಿನಕಾಯಿ ಹರಾಜು ಸಭೆ ಮಾತ್ರ ಮುಂದೂಡಲಾಯಿತು.

ಮುಖಂಡರಾದ ಹನುಮಂತ್ರಾಯಗೌಡ ಜಹಾಗೀರದಾರ, ಪುರಸಭೆ ಮುಖ್ಯಾಧಿಕಾರಿ ಆದಪ್ಪ ಸುರಪುರಕರ್‌, ಉಪತಹಶೀಲ್ದಾರ್‌ ರೇವಪ್ಪ ತೆಗ್ಗಿನಮನಿ, ಎಎಸ್‌ಐ ಭೀಮಶಂಕರ ಠಾಣಗುಂದಿ, ಧಾರ್ಮಿಕ ದತ್ತಿ ಇಲಾಖೆಯ ಪ್ರವೀಣಕುಮಾರ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಗಣ್ಯರು ಮತ್ತು ಪುರಸಭೆ ಸದಸ್ಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next