ಬಾಲಪ್ಪ ಎಂ. ಕುಪ್ಪಿ
ಕಕ್ಕೇರಾ: ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತ, ಬಾಳೆ, ಕಬ್ಬ ಬೆಳೆಗಳ ಬೆಳೆಯಲು ನಿಷೇಧಿಸಲಾಗಿದೆ ಎಂದು ಕೆಬಿಜೆಎನ್‌ಎಲ್ ನೀಡಿರುವ ಪ್ರಕಟಣೆಯಿಂದ ರೈತರು ಗೊಂದಲಕ್ಕೀಡಾಗಿದ್ದಾರೆ.
ಪ್ರತಿ ಬಾರಿ ಹಿಂಗಾರು ಹಂಗಾಮಿನಲ್ಲಿ ಭತ್ತ ನಿಷೇಧಿತ ಬೆಳೆಯಾಗಿದೆ. ಯಾರೂ ಬೆಳೆಯಬಾರದು ಎಂದು ಸೂಚಿಸಲಾಗುತ್ತದೆ. ಆದರೂ ರೈತರು ಭತ್ತ ಬೆಳೆದುಕೊಂಡೇ ಬರುತ್ತಿದ್ದಾರೆ. ಭತ್ತ ಬಿಟ್ಟರೆ ಪರ್ಯಾಯವಾಗಿ ಯಾವ ಬೆಳೆ ಬೆಳೆಯಬೇಕು ಎಂದು ಚಿಂತೆ ರೈತರನ್ನು ಕಾಡುತ್ತಿದೆ. ಬೇರೆ ಬೆಳೆ ಅಷ್ಟೊಂದು ಲಾಭದಾಯವಾಗಿಲ್ಲ. ಈ ಭಾಗದ ಅನ್ನದಾತರಿಗೆ ಭತ್ತವೇ ಪ್ರಮುಖವಾಗಿದೆ. ಬಂಜರು ಭೂಮಿಯಲ್ಲಿಯೂ ಭತ್ತ ಬೆಳೆಯಬಹುದಾಗಿದೆ ಎನ್ನಲಾಗುತ್ತಿದೆ.
ಬಹುತೇಕ ರೈತರು ಹಿಂಗಾರು ನೀರು ನೆಚ್ಚಿಕೊಂಡು ಭತ್ತದ ಸಸಿ ಮಡಿ ಹಾಕಿದ್ದಾರೆ. ಸುರಪುರ ತಾಲೂಕಿನಲ್ಲಿ ಇದೇ ವರ್ಷದ ಮುಂಗಾರು ಹಂಗಾಮಿನಲ್ಲಿ 54,758 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡಲಾಗಿತ್ತು. ಈಗ ಹಿಂಗಾರು ಹಿಂಗಾಮಿನಲ್ಲಿ ಮುಂಗಾರಿಗಿಂತ ಸ್ವಲ್ಪ ಕಡಿಮೆಯಾಗಬಹುದು ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಚ್ಚುಕಟ್ಟು ಪ್ರದೇಶದಲ್ಲಿ ಪರ್ಯಾಯವಾಗಿ ಯಾವ ಬೆಳೆ ಬೆಳೆಯುವುದು ಸೂಕ್ತ ಎನ್ನುವುದರಕ್ಕೆ ಬಗ್ಗೆ ಕೃಷಿ ಅಧಿಕಾರಿಗಳು ಈವರೆಗೂ ರೈತರಿಗೆ ಸಲಹೆ ನೀಡಿಲ್ಲ. ಕಡಿಮೆ ಅವಧಿಯಲ್ಲಿ ಹಾಗೂ ಅಧಿಕ ಲಾಭದಾಯಕ ಬೆಳೆ ಕುರಿತು ರೈತರಿಗೆ ಮಾಹಿತಿ ನೀಡಿಲ್ಲ ಎಂದು ರೈತರು ಆರೋಪಿಸಿದ್ದಾರೆ.
ಅಂದ ಹಾಗೇ ಕಾಲುವೆ ನೀರು ವ್ಯರ್ಥ ಮಾಡಬಾರದು ಎಂಬ ಅಧಿಕಾರಿಗಳು ನಿಲುವು ಸೂಕ್ತ ವಿಚಾರವೇ ಸರಿ. ಆದರೆ ಅಚ್ಚುಕಟ್ಟು ಪ್ರದೇಶದಲ್ಲಿ ಯಾವುದೇ ಬೆಳೆ ಬೆಳೆದರೂ ನೀರು ವ್ಯರ್ಥವಾಗುವುದು ಸಹಜ. ಒಮ್ಮೆಯೂ ಅಧಿಕಾರಿಗಳು ಕಾಲುವೆ ಸರ್ವಿಸ್ ರಸ್ತೆ ಮೇಲೆ ಸಂಚರಿಸಿದ್ದು ಕಂಡಿಲ್ಲ. ಕಾಲುವೆ ಭಾಗದಲ್ಲಿ ಅನಧಿಕೃತವಾಗಿ ಪಂಪ್‌ಸೆಟ್ ಮೂಲಕ ನೀರು ಪಡೆಯಲಾಗುತ್ತಿದೆ. ಇವೆಲ್ಲವೂ ಕಂಡಿದ್ದರೂ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಇನ್ನೂ ನಿಷೇಧಿತವಲ್ಲದ ಶೇಂಗಾ, ಸೂರ್ಯಕಾಂತಿ, ಹತ್ತಿ ಬೆಳೆಗಳು ಪೂರ್ಣ ಬರುವವರೆಗೂ ನೀರು ಹರಿಸಲೇಬೇಕು. ಕೊನೆ ಭಾಗದಲ್ಲಿ ಪ್ರತಿ ವರ್ಷ ಕಾಲುವೆ ನೆಚ್ಚಿಕೊಂಡ ರೈತರ ಶೇಂಗಾ ಬೆಳೆಗಳು ಒಣಗಿ ತೀರಾ ನಷ್ಟ ಮತ್ತು ಸಂಕಷ್ಟ ಎದುರಿಸುವಂತಾಗಿದೆ. ವ್ಯವಸ್ಥೆ ಹೀಗಿರುವಾಗ ಭತ್ತ ನಿಷೇಧಿಸಿ ಗೊಂದಲುಕ್ಕೀಡು ಮಾಡಬಾರದು ಎಂಬುದು ರೈತರ ಅಭಿಪ್ರಾಯ.
ಸರಕಾರ ಕ್ರಮಕೈಗೊಳ್ಳಲಿ: ಭತ್ತ ನಿಷೇಧಿತ ಬೆಳೆಯನ್ನಾಗಿಸಿದ್ದನ್ನು ಕೂಡಲೇ ಕೈ ಬಿಡಬೇಕು. ಈ ಭಾಗದಲ್ಲಿ ಭತ್ತವೇ ಪ್ರಮುಖ ಬೆಳೆಯಾಗಿದೆ. ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತ ಕೃಷಿಯಿಂದ ಕೂಲಿ ಕಾರ್ಮಿಕರಿಗೂ ಕೆಲಸ ಸಿಗುತ್ತದೆ. ಭತ್ತದ ಕೃಷಿಯಲ್ಲಿ ಕೆಲಸ ಮಾಡಿ ಜೀವನ ನಡೆಸುವ ಅನೇಕ ಕೂಲಿ ಕಾರ್ಮಿಕ ಕುಟುಂಬಗಳಿವೆ. ಭತ್ತ ಬೆಳೆಯದಿದ್ದರೆ ಬಹುತೇಕರು ಗುಳೆ ಹೋಗಬೇಕಾಗುತ್ತದೆ. ಭತ್ತ ಬೆಳೆ ನಿಷೇಧಿತ ಬೆಳೆಯನ್ನಾಗಿಸದೇ ಸರಕಾರ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ರೈತರಿಂದ ಒತ್ತಾಯ ಕೇಳಿ ಬರುತ್ತಿದೆ.