Advertisement

ಗಡ್ಡಿಗೆ ಇನ್ನೂ 15 ದಿನ ವಿದ್ಯುತ್‌ ಅಡ್ಡಿ

01:02 PM Nov 25, 2019 | Naveen |

ಬಾಲಪ್ಪ ಎಂ. ಕುಪ್ಪಿ
ಕಕ್ಕೇರಾ:
ಕೃಷ್ಣಾ ನದಿ ಕವಲುನಲ್ಲಿ ಇರುವ ನೀಲಕಂಠರಾಯನ ಗಡ್ಡಿಗೆ ಕಳೆದ ಮೂರು ತಿಂಗಳಿಂದಲೂ ವಿದ್ಯುತ್‌ ಇಲ್ಲದೆ ಜನರು ಕತ್ತಲಲ್ಲಿಯೇ ಜೀವನ ಕಳೆಯುತ್ತಿದ್ದು, ಇನ್ನು 15 ದಿನ ಕಾಯಲೇಬೇಕಾದ ಅನಿವಾರ್ಯತೆ ಎದುರಾಗಿದೆ.

Advertisement

ಕೃಷ್ಣಾ ನದಿಗೆ ಪ್ರವಾಹ ಆವರಿಸಿದ್ದಾಗ ಆಗಸ್ಟ್‌ ತಿಂಗಳಲ್ಲಿಯೇ ವಿದ್ಯುತ್‌ ಪೂರೈಕೆ ಸ್ಥಗಿತಗೊಳಿಸಲಾಗಿದೆ. ಅಂದಿನಿಂದ ಈವರೆಗೂ ಅಲ್ಲಿನ ಗ್ರಾಮಕ್ಕೆ ಪುನಃ ವಿದ್ಯುತ್‌ ಸಂಪರ್ಕ ಕಲ್ಪಸಿಲ್ಲ. ವಿದ್ಯುತ್‌ ಸೌಕರ್ಯ ಇದ್ದರೂ ಜೆಸ್ಕಾಂ ನಿಷ್ಕಾಳಜಿಯಿಂದ ಕತ್ತಲೇ ವನವಾಸವಾಗಿದೆ ಎಂದು ಗ್ರಾಮಸ್ಥರು ಅಸಮಾಧಾನ ಹೊರಹಾಕಿದ್ದಾರೆ.

ಒಂದು ಸೆಕೆಂಡ್‌ ವಿದ್ಯುತ್‌ ವ್ಯತ್ಯಾಯ ಉಂಟಾದರೆ ಜನರು ಚಪಡಿಸುತ್ತಾರೆ. ಆದರೆ ಮೂರು ತಿಂಗಳಿಂದಲೂ ರಾತ್ರಿ ಬದುಕು ಮುಂದುವರಿಸಿದ್ದಾರೆ. ಕಳೆದ ಎರಡು ತಿಂಗಳಲ್ಲಿನಲ್ಲಿ ಪ್ರವಾಹ ಸಂಕಷ್ಟ ಎದುರಿಸುತ್ತಿದ್ದರು. ಹಾಗೆ ತುರ್ತು ವೇಳೆ ಈಜುಗಾಯಿ ಹಾಕಿ ಈಜಿಕೊಂಡು ನದಿ ದಾಟಿ ಅಗತ್ಯ ವಸ್ತುಗಳನ್ನು ತಂದು ಉಪ ಜೀವನ ಸಾಗಿಸಿದ್ದಾರೆ. ಆದರೆ ಪ್ರವಾಹ ಕಡಿಮೆಯಾದ ಬಳಿಕ ಗಡ್ಡಿ ಜನರಿಗೆ ವಿದ್ಯುತ್‌ ಸಮಸ್ಯೆ ಮತ್ತೂಂದು ಗಂಭೀರವಾಗಿ ಕಾಡುತ್ತಿದೆ.

ಬೆಳಗದ ಸೋಲಾರ್‌: 40 ಕುಟುಂಬಗಳು ಇರುವ ನೀಲಕಂಠರಾಯ ಗಡ್ಡಿಗೆ 2014ರಲ್ಲಿ ಸೇಲ್ಕೋ ಕಂಪೆನಿ 15 ಸೋಲಾರ್‌ ವಿದ್ಯುತ್‌ ಅಳವಡಿಸಿತ್ತು. ತಾಂತ್ರಿಕ ದೋಷದಿಂದ ಅವುಗಳು ಈಗ ಕೆಟ್ಟಿವೆ. ಸದ್ಯ ವಿದ್ಯುತ್‌ ಸೌಲಭ್ಯ ಹೊಂದಿದ್ದರೂ ಪುನಃ ಸಂಪರ್ಕ ಕಲ್ಪಿಸಲು ಜೆಸ್ಕಾಂ ಅಧಿಕಾರಿಗಳು ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ.

ಸಂಚಾರಕ್ಕೂ ಸಂಚಕಾರ: ಇಲ್ಲಿನ ಜನರು ಸಂಚಾರಕ್ಕೂ ಸಂಚಕಾರ ಎದುರಿಸಬೇಕಾಗಿದೆ. ಸರಿಯಾದ ರಸ್ತೆ ಇಲ್ಲ. ಕಲ್ಲು-ಮುಳ್ಳುಗಳ ನಡುವೆ ಒಂದು ಕಿಮೀ ನಡೆದುಕೊಂಡು ಕೃಷ್ಣಾನದಿ ದಾಟಬೇಕಾಗಿದೆ. ಹೈಡ್ರೋ ಪವರ್‌ ವಿದ್ಯುತ್‌ ಉತ್ಪಾದನಾ ಕಂಪೆನಿ ತನ್ನ ಅನುಕೂಲಕ್ಕಾಗಿ ಚಿಕ್ಕ ಸೇತುವೆ ನಿರ್ಮಿಸಿತ್ತು. ಕಳೆದ ಆಗಸ್ಟ್‌ನಲ್ಲಿ ಎದುರಾದ ಪ್ರವಾಹದಲ್ಲಿ ಕಿತ್ತು ಹೋಗಿದೆ. ಅದಕ್ಕೆ ಹೊಂದಿಕೊಂಡು 2.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ನೂತನ ಸೇತುವೆ ಮಾತ್ರ ಉಳದಿದೆ. ಆದರೆ ಒಂದಿದ್ದರೂ, ಇನ್ನೊಂದಿಲ್ಲ ಎನ್ನುವಂತಾಗಿದೆ. ಸೇತುವೆ ಅವ್ಯವಸ್ಥೆಯಿಂದ ಸಂಚಾರಕ್ಕೆ ನರಕಯಾತನೆ ಅನುಭವಸುವಂತಾಗಿದೆ.

Advertisement

ಹಗಲಿನಲ್ಲಿಯೇ ಮನೆ ಸೇರಬೇಕು: ರಾತ್ರಿ ವೇಳೆ ಕೃಷ್ಣಾನದಿ ದಾಟುವುದು ಸುಲಭವಲ್ಲ. ಜಲಚರ ವಿಷ ಜಂತುಗಳ ಭಯ ಕಾಡುತ್ತಿದೆ. ಹೀಗಾಗಿ ದೈನಂದಿನ ಸಂತೆ ಸಾಮಾಗ್ರಿಗಳನ್ನು ಹಗಲ್ಲಿನಲ್ಲಿಯೇ ಕಕ್ಕೇರಾಗೆ ಬಂದು ಖರೀದಿ ಮಾಡಿ ಬೆಳಕಿರುವಾಗಲೇ ಗ್ರಾಮ ಸೇರಬೇಕಾದ ದಯನೀಯ ಬದುಕು ನಮ್ಮದಾಗಿದೆ. ರಾತ್ರಿ ವೇಳೆ ಭಯದಲ್ಲಿಯೇ ತಿರುಗಾಡಬೇಕಿದೆ. ವೃದ್ಧರು ಮನೆ ಬಿಟ್ಟು ಹೋಗದಂತಾಗಿದೆ. ಮೊಬೈಲ್‌ ಚಾರ್ಜ್‌ ಖಾಲಿಯಾಗಿದೆ. ತುರ್ತು ಪರಿಸ್ಥಿತಿಯಲ್ಲಿ ದೂರವಾಣಿ ಮಾಡಲು ಸಾಧ್ಯವಾಗುವುದಿಲ್ಲ.

ಟ್ರ್ಯಾಕ್ಟರ್‌ ಹೆಡ್‌ಲೈಟ್‌ ಬೆಳಕಿನಲ್ಲಿಯೇ ಮಾದಮ್ಮ-ಸೋಮಣ್ಣ ಎಂಬ ಇಬ್ಬರಿಗೂ ಗ್ರಾಮಸ್ಥರು ನಿಶ್ಚಿತಾರ್ಥ ಮಾಡಿರುವುದು ಗಮನಾರ್ಹ ಸಂಗತಿ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next