ಕಕ್ಕೇರಾ: ಪಟ್ಟಣದ ಪುರಸಭೆ ವ್ಯಾಪ್ತಿಯ ಸರ್ಕಾರಿ ಆಸ್ತಿ ಅಕ್ರಮವಾಗಿ ಭೂ ಕಬಳಿಕೆ ಮಾಡಿಕೊಂಡು ಒಂದೇ ಆಸ್ತಿಯನ್ನು ಮೂರು ಜನರಿಗೆ ಮಾರಾಟ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಶಾಂತಪುರ-ಬಲಶೆಟ್ಟಿಹಾಳ ಮತ್ತು ಹುಣಸಗಿ ಮುಖ್ಯರಸ್ತೆಯ ಹಳೆ ಗ್ರಾಪಂ ಕಾರ್ಯಾಲಯ, ಸರ್ವೇ ನಂಬರ್ 229ರಲ್ಲಿ 2.26 ಗುಂಟೆ ವಿಸ್ತೀರ್ಣದ ಸರ್ಕಾರಿ ಜಮೀನು ಅಕ್ರಮವಾಗಿಸಿಕೊಂಡು ಬರಲಾಗಿದೆ. ಇದನ್ನು ತಡೆ ಹಿಡಿಯುವಲ್ಲಿ ಅಧಿಕಾರಿಗಳು ನಿಷ್ಕಾಳಜಿ ತೋರಿದ್ದಾರೆಂದು ಪುರಸಭೆ ಉಪಾಧ್ಯಕ್ಷೆ ಮಲ್ಲಮ್ಮ ಪಿ.ಮ್ಯಾಗೇರಿ ಹಾಗೂ ಸದಸ್ಯ ಶರಣಕುಮಾರ ಸೊಲ್ಲಾಪುರ ಆರೋಪಿಸಿದ್ದಾರೆ.
ಇದೇ ಸರ್ವೇ ನಂಬರ್‌ನಲ್ಲಿ ಹಳೆ ಗ್ರಾಪಂ ಕಾರ್ಯಾಲಯ, ವಿಎಸ್‌ಎಸ್‌ಎನ್ ಕಟ್ಟಡ, ವಾಲ್ಮೀಕಿ ಭವನ, ಸಂತೆ ಮಾರುಕಟ್ಟೆ ಸೇರಿದಂತೆ ಪುರಸಭೆ ನೂತನ ವಾಣಿಜ್ಯ ಮಳಿಗೆಗಳಿವೆ. ಅಲ್ಲದೆ ಖಾಸಗಿ ವ್ಯಕ್ತಿಗಳಿಂದ ಅಕ್ರಮ ಕಟ್ಟಡಗಳು ನಿರ್ಮಾಣವಾಗುತ್ತಿವೆ. ಆದರೂ ಅ ಧಿಕಾರಿಗಳು ಗಮನ ಹರಿಸುತ್ತಿಲ್ಲವೆಂದು ದೂರಿದ್ದಾರೆ.
ಕರ್ನಾಟಕ ಲ್ಯಾಂಡ್‌ಗ್ರ್ಯಾಂಟ್ ಆ್ಯಕ್ಟ್ 1969, 18 ಸಬ್ ರೂಲ್ ಎ.ಬಿ.ಸಿಯಲ್ಲಿ ಹೇಳಿರುವ ಪ್ರಕಾರ ವಾಸಿಸಲಿಕ್ಕೆ ಮಂಜೂರಾತಿ ಪಡೆದ ಸರ್ಕಾರಿ ಜಾಗವನ್ನು ಐದು ವರ್ಷದವರೆಗೆ ಬಾಡಿಗೆ ನೀಡುವಂತಿಲ್ಲ. ಜಿಲ್ಲಾ ಧಿಕಾರಿಗಳ ಪೂರ್ವಾನುಮತಿ ಇಲ್ಲದೆ 15 ವರ್ಷದೊಳಗೆ ಆಸ್ತಿ ಮಾರಾಟ ಮಾಡುವಂತಿಲ್ಲ. ಸಬ್ ರೂಲ್ ಡಿ. ಅನ್ವಯ ಉದ್ದೇಶಿತ ಸರ್ಕಾರಿ ಆಸ್ತಿಯನ್ನು ಮಂಜೂರಾತಿ ಪಡೆದವರು ನಿಯಮಗಳನ್ನು ಉಲ್ಲಂಘಿಸಿದರೆ, ಸ್ವತಃ ಜಿಲ್ಲಾ ಧಿಕಾರಿಗಳು ನಿರ್ಮಾಣಗೊಂಡ ಅನಧಿಕೃತ ಕಟ್ಟಡಗಳನ್ನು ಯಾವುದೇ ಪರಿಹಾರ ನೀಡದೇ ತೆರವುಗೊಳಿಸುವ ಮೂಲಕ ಈ ಆಸ್ತಿ ವಶಪಡಿಸಿಕೊಳ್ಳಬಹುದಾಗಿದೆ. ವ್ಯವಸ್ಥೆ ಹೀಗಿರುವಾಗ ಜಿಲ್ಲಾ ಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.